ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮಾರ್ಚ್ 25ರಂದು ದೆಹಲಿಯ ಸಿಬಿಐ ಕೇಂದ್ರ ಕಚೇರಿಗೆ ಹಾಜರಾಗುತ್ತೇನೆ ಎಂದು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಹೇಳಿಕೆ ದಾಖಲಿಸಿಕೊಂಡ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಸಿಬಿಐ ಈ ತಿಂಗಳು ಅವರನ್ನು ಬಂಧಿಸುವಂತಿಲ್ಲ ಎಂದು ಸೂಚಿಸಿದರು.
ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೀಡಿದ್ದ ಸಮನ್ಸ್ ಪ್ರಶ್ನಿಸಿ ತೇಜಸ್ವಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ತೇಜಸ್ವಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮಣಿಂದರ್ ಸಿಂಗ್ ಈಗ ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿದೆ ಎಂದರು. ಅಲ್ಲದೆ, ಸಿಬಿಐ ದಾಳಿಯಿಂದ ತೇಜಸ್ವಿ ಅವರ ಗರ್ಭಿಣಿ ಪತ್ನಿ ತೊಂದರೆಯನ್ನು ಅನುಭವಿಸುವಂತೆ ಆಯಿತು ಎಂದರು.
ಆಗ ನ್ಯಾಯಾಲಯ ಬಜೆಟ್ ಅಧಿವೇಶನ ಮುಗಿದ ನಂತರ ಏಪ್ರಿಲ್ 5ರಂದು ಯಾದವ್ ಅವರನ್ನು ವಿಚಾರಣೆಗೆ ಕರೆಯುವಂತೆ ಸಿಬಿಐಗೆ ಸೂಚಿಸಿತು.
ಆದರೆ ಸಿಬಿಐ ಪರ ವಾದ ಮಂಡಿಸಿದ ವಕೀಲ ಡಿ ಪಿ ಸಿಂಗ್ ʼಆರೋಪಪಟ್ಟಿ ಸಿದ್ಧವಾಗಿದ್ದು ಯಾವುದೇ ಶನಿವಾರದಂದು ಅವರು ವಿಚಾರಣೆಗೆ ಹಾಜರಾಗಬಹುದು ಎಂದರು. ಬಂಧನ ಭೀತಿ ಕುರಿತಂತೆ ಪ್ರತಿಕ್ರಿಯಿಸುತ್ತಾ “ಯಾದವ್ ಅವರನ್ನು ಬಂಧಿಸುವುದಿಲ್ಲ” ಎಂದರು.
ಸಿಬಿಐ ಇದುವರೆಗೆ ಯಾದವ್ ಅವರಿಗೆ ಮೂರು ಬಾರಿ ನೋಟಿಸ್ ಜಾರಿ ಮಾಡಿದೆ. ಆದರೆ, ತೇಜಸ್ವಿ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
ಲಾಲುಪ್ರಸಾದ್ಅವರು 2004ರಿಂದ 2009ರವರೆಗೆಕೇಂದ್ರರೈಲ್ವೆಸಚಿವರಾಗಿದ್ದಾಗ ತಮ್ಮ ಕುಟುಂಬದ ಹೆಸರಿಗೆ ಭೂಮಿ ವರ್ಗಾಯಿಸಿಕೊಂಡು ರೈಲ್ವೆಯಲ್ಲಿ ನೇಮಕಾತಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆಗಿನ ರೈಲ್ವೆ ನೇಮಕಾತಿ ಭಾರತೀಯ ರೈಲ್ವೆಯ ಮಾನದಂಡಗಳಿಗೆ ಅನುಗುಣವಾಗಿ ಇಲ್ಲ ಎಂಬುದು ಸಿಬಿಐ ವಾದವಾಗಿದೆ. ತೇಜಸ್ವಿ ಅವರಲ್ಲದೆ ಲಾಲೂ ಅವರ ಪತ್ನಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಹಾಗೂ ಅವರ ಮಗಳು ಮಿಸಾ ಭಾರತಿ ಇನ್ನಿತರ 16 ಮಂದಿ ವಿರುದ್ಧ ಸಿಬಿಐ ಅಕ್ಟೋಬರ್ 10, 2022ರಂದು ಆರೋಪಪಟ್ಟಿ ಸಲ್ಲಿಸಿತ್ತು.