ಸುದ್ದಿಗಳು

ಸಿಬಿಡಿ ವ್ಯಾಪ್ತಿಯಲ್ಲಿ ಹೈಕೋರ್ಟ್‌ ಸ್ಥಳಾಂತರಕ್ಕೆ ಭೂಮಿ ಹುಡುಕಾಟ ಮಾಡಲಾಗುತ್ತಿದೆ: ಡಿಸಿಎಂ ಡಿ ಕೆ ಶಿವಕುಮಾರ್‌

ಎಎಬಿ ಪದಾಧಿಕಾರಿಗಳು ಅ.25ರಂದು ತಮ್ಮನ್ನು ಭೇಟಿ ಮಾಡಿದ್ದು, ರೇಸ್‌ ಕೋರ್ಟ್‌ಗೆ ಬೆಂಗಳೂರು ಟರ್ಫ್‌ ಕ್ಲಬ್‌ ಬಳಕೆ ಮಾಡುತ್ತಿರುವ ಸ್ಥಳವನ್ನು ಹೈಕೋರ್ಟ್‌ನ ಹೊಸ ಕಟ್ಟಡ ನಿರ್ಮಿಸಲು ಬಳಕೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ ಎಂದ ಶಿವಕುಮಾರ್.

Bar & Bench

"ಬೆಂಗಳೂರಿನ ಕೇಂದ್ರ ವಾಣಿಜ್ಯ ಜಿಲ್ಲೆ (ಸಿಬಿಡಿ) ಪ್ರದೇಶ ವ್ಯಾಪ್ತಿಯಲ್ಲಿ ಹೊಸ ಸ್ಥಳಕ್ಕೆ ಕರ್ನಾಟಕ ಹೈಕೋರ್ಟ್‌ ಅನ್ನು ಸ್ಥಳಾಂತರಿಸುವ ಕುರಿತಾದ ಮನವಿಯನ್ನು ರಾಜ್ಯ ಸರ್ಕಾರ ಪರಿಗಣಿಸುತ್ತಿದ್ದು, ಹೊಸ ಸ್ಥಳ ಹುಡುಕಾಟ ಪ್ರಕ್ರಿಯೆ ನಡೆಯುತ್ತಿದೆ" ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಈಚೆಗೆ ಹೇಳಿದ್ದಾರೆ.

ಬೆಂಗಳೂರಿನ ಸಿಟಿ ಸಿವಿಲ್ ಸತ್ರ ನ್ಯಾಯಾಲಯದ ಆವರಣದಲ್ಲಿನ ಪ್ರಧಾನ ಕಚೇರಿಯಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ‘ನ್ಯಾಯಮಿತ್ರ ಸಹಕಾರಿ ಬ್ಯಾಂಕ್‌’ ಬೆಳ್ಳಿಹಬ್ಬದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

"ಹಾಲಿ ಕಟ್ಟಡದಲ್ಲಿ ನ್ಯಾಯಾಲಯದ ಚಟುವಟಿಕೆ ನಡೆಸಲು ಸ್ಥಳದ ಕೊರತೆ ಇದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ. ಬೆಂಗಳೂರು ವಕೀಲರ ಸಂಘವು ಸಿಬಿಡಿ ವ್ಯಾಪ್ತಿಯಲ್ಲಿ ಹೈಕೋರ್ಟ್‌ ಸ್ಥಳಾಂತರಿಸುವಂತೆ ಮನವಿ ಮಾಡಿದೆ" ಎಂದು ಶಿವಕುಮಾರ್‌ ಹೇಳಿದರು.

"2025ರ ಅಕ್ಟೋಬರ್‌ 25ರಂದು ಎಎಬಿ ಪದಾಧಿಕಾರಿಗಳು ತಮ್ಮನ್ನು ಭೇಟಿ ಮಾಡಿದ್ದು, ರೇಸ್‌ ಕೋರ್ಟ್‌ಗೆ ಬೆಂಗಳೂರು ಟರ್ಫ್‌ ಕ್ಲಬ್‌ ಪ್ರೈವೇಟ್‌ ಲಿಮಿಟೆಡ್‌ ಬಳಕೆ ಮಾಡುತ್ತಿರುವ ಸ್ಥಳವನ್ನು ಹೈಕೋರ್ಟ್‌ನ ಹೊಸ ಕಟ್ಟಡ ನಿರ್ಮಿಸಲು ಬಳಕೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಹೈಕೋರ್ಟ್‌ ಕಟ್ಟಡ ನಿರ್ಮಾಣಕ್ಕೆ ಇನ್ನೊಂದು ಸ್ಥಳವನ್ನು ತೋರಿಸಿದ್ದಾರೆ" ಎಂದು ಶಿವಕುಮಾರ್‌ ಹೇಳಿದ್ದಾರೆ.

"ಹೈಕೋರ್ಟ್‌ ಅನ್ನು ಸಿಬಿಡಿ ವ್ಯಾಪ್ತಿಯಿಂದ ಯಾವುದೇ ಕಾರಣಕ್ಕೂ ಸ್ಥಳಾಂತರಿಸುವುದಿಲ್ಲ. ಇದು ದಾವೆದಾರರು, ವಕೀಲರು ಮತ್ತು ನ್ಯಾಯಮೂರ್ತಿಗಳು ಸೇರಿ ಎಲ್ಲರ ಅಗತ್ಯಕ್ಕೆ ಅನುಕೂಲವಾಗಿರುವ ಹಿನ್ನೆಲೆಯಲ್ಲಿ ಅದು ಸಿಬಿಡಿ ವ್ಯಾಪ್ತಿಯಲ್ಲೇ ಇರಬೇಕು. ಎಲ್ಲರಿಗೂ ಅನುಕೂಲವಾಗುವುದರಿಂದ ಹೊಸ ಕಟ್ಟಡವು ಮೆಟ್ರೊ ನಿಲ್ದಾಣದ ಸಮೀಪದಲ್ಲೇ ಇರಬೇಕು" ಎಂದೂ ಶಿವಕುಮಾರ್‌ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರು "ಹೈಕೋರ್ಟ್‌ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ಕಾಲಮಿತಿ ವಿಧಿಸಿ ಪ್ರಕರಣಗಳನ್ನು ವಿಲೇವಾರಿ ಮಾಡಲು ನಿರ್ದೇಶಿಸುವ ಸುಪ್ರೀಂ ಕೋರ್ಟ್‌ ನಿರ್ದೇಶನದಿಂದ ಇತರೆ ತುರ್ತು ಪ್ರಕರಣಗಳು ಸೊರಗುತ್ತವೆ" ಎಂದರು.

"ನಾನು ಈ ಕೋರ್ಟ್‌ನಿಂದಲೇ ನನ್ನ ವೃತ್ತಿ ಆರಂಭಿಸಿದ್ದು ಎಂಬ ಹೆಗ್ಗಳಿಕೆ ನನ್ನದು. ವಕೀಲರು ತಮ್ಮ ಸಂಪಾದನೆಯ ಒಂದು ಭಾಗವನ್ನು ನಿಶ್ಚಿತ ಠೇವಣಿ ಇರಿಸುವ ಮೂಲಕ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಬೇಕು" ಎಂದು ಸಲಹೆ ನೀಡಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ ಮಾತನಾಡಿ, ‘ಹೈಕೋರ್ಟ್‌ನಲ್ಲಿ ಜಾಗದ ಕೊರತೆ‌‌ಯಿದ್ದು ಆಧುನಿಕ ಹೈಕೋರ್ಟ್ ನಿರ್ಮಾಣಕ್ಕಾಗಿ 20 ಎಕರೆ ಜಮೀನನ್ನು ಟರ್ಫ್ ಕ್ಲಬ್ ಅಥವಾ ಇನ್ನಾವುದಾದರೂ ಸೂಕ್ತ ಜಾಗದಲ್ಲಿ ನಿರ್ಮಿಸಿಕೊಡಬೇಕು. ಅಂತೆಯೇ, ಸಿಟಿ ಸಿವಿಲ್‌ ಕೋರ್ಟ್‌ಗೆ 10 ಅಂತಸ್ತುಗಳ ಹೊಸ ಕಟ್ಟಡ ಮಾಡಿಸಿಕೊಡಬೇಕು" ಎಂದು ಶಿವಕುಮಾರ್‌ಗೆ ಮನವಿ ಮಾಡಿದರು. 

ವಿವೇಕ್‌ ಸುಬ್ಬಾರೆಡ್ಡಿ ಮತ್ತು ಸಂಘದ ಇತರ ಪ್ರತಿನಿಧಿಗಳು ಈಚೆಗೆ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರನ್ನೂ ಭೇಟಿ ಮಾಡಿ, ಹೊಸ ಕಟ್ಟಡದ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು.