Karnataka HC and D K Shivakumar
Karnataka HC and D K Shivakumar 
ಸುದ್ದಿಗಳು

ಚುನಾವಣಾ ಭಾಷೆ, ವಿಷಯ, ಪ್ರಸ್ತುತಿಯ ಕುಸಿತಕ್ಕೆ ಹೈಕೋರ್ಟ್‌ ಕಳವಳ: ಡಿಕೆಶಿ ವಿರುದ್ಧದ ಎಫ್‌ಐಆರ್‌ಗೆ ತಡೆ

Bar & Bench

ತಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವಿರುದ್ಧದ ಕಾನೂನು ಪ್ರಕ್ರಿಯೆಗೆ ಗುರುವಾರ ತಡೆ ನೀಡಿರುವ ಕರ್ನಾಟಕ ಹೈಕೋರ್ಟ್‌ ಈಚೆಗೆ ರಾಜಕಾರಣಿಗಳ ಚುನಾವಣಾ ಭಾಷೆ, ವಿಷಯ ಮತ್ತು ಅದನ್ನು ಪ್ರಸ್ತುತ ಪಡಿಸುವ ರೀತಿ ದಿನೇದಿನೇ ಕುಸಿಯುತ್ತಿದೆ ಎಂದು ತೀವ್ರ ಬೇಸರ ದಾಖಲಿಸಿದೆ.

ಬೆಂಗಳೂರಿನ ಆರ್‌ಎಂಸಿ ಯಾರ್ಡ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ವಜಾ ಮಾಡುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಡಿ ಕೆ ಶಿವಕುಮಾರ್‌ ವಿರುದ್ಧದ ಕಾನೂನು ಪ್ರಕ್ರಿಯೆಗೆ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ. ಪೊಲೀಸರು ಮುಂದಿನ ವಿಚಾರಣೆವರೆಗೆ ಯಾವುದೇ ಕ್ರಮಕ್ಕೆ ಮುಂದಾಗಬಾರದು” ಎಂದು ನ್ಯಾಯಾಲಯವು ಆದೇಶ ಮಾಡಿದೆ.

“ಪ್ರಕರಣವನ್ನು ವಿಸ್ತೃತವಾಗಿ ಪರಿಗಣಿಸಬೇಕಿರುವುದರಿಂದ ಆರೋಪಿತ ಸೆಕ್ಷನ್‌ಗಳಾದ ಐಪಿಸಿ ಸೆಕ್ಷನ್‌ 171ಬಿ ಮತ್ತು 171ಸಿ ವ್ಯಾಪ್ತಿ ಮತ್ತು ಮಾನದಂಡಗಳನ್ನು ಪರಿಶೀಲಿಸಬೇಕಿದೆ. ಅರ್ಜಿದಾರರು ಆಡಿರುವ ಮಾತುಗಳು ಆರೋಪಿತ ಸೆಕ್ಷನ್‌ ವ್ಯಾಪ್ತಿಗೆ ಬರುತ್ತವೆಯೇ ಎಂಬ ಬಗ್ಗೆ ಖಾತರಿಯಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೇ, “ಡಿ ಕೆ ಶಿವಕುಮಾರ್‌ ಪ್ರತಿನಿಧಿಸಿರುವ ಹಿರಿಯ ವಕೀಲ ಉದಯ್‌ ಹೊಳ್ಳ ಅವರು ತಮ್ಮ ಕಕ್ಷಿದಾರರಿಗೆ ಕನಿಷ್ಠ ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ಪದ ಬಳಕೆ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದೇನೆ ಎಂದು ಹೇಳಿದ್ದಾರೆ” ಎಂದೂ ಆದೇಶದಲ್ಲಿ ದಾಖಲಿಸಿದೆ.

ಮುಂದುವರಿದು, “ಇತ್ತೀಚಿನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭಾಷೆಯ ಗುಣಮಟ್ಟ, ವಿಷಯ ಮತ್ತು ಅದರ ಪ್ರಸ್ತುತಿಯು ಅತ್ಯಂತ ಕೆಟ್ಟಮಟ್ಟಕ್ಕೆ ಇಳಿದಿದೆ. ಇದು ಇದಕ್ಕಿಂತ ಕೆಳಮಟ್ಟಕ್ಕೆ ಇಳಿಯಲು ಸಾಧ್ಯವಿಲ್ಲ” ಎಂದು ನ್ಯಾಯಾಲಯವು ಅಸಮಾಧಾನ ದಾಖಲಿಸಿದೆ.

ಇದಕ್ಕೂ ಮುನ್ನ, ಅರ್ಜಿದಾರರ ಪರ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಮತದಾರರು ನಗರ ಪ್ರದೇಶದ ಜನರಾಗಿದ್ದು, ಅವರು ಚುನಾವಣಾ ಭಾಷಣವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಐಪಿಸಿ ಸೆಕ್ಷನ್‌ 171ಸಿ ವ್ಯಾಖ್ಯಾನಿಸುವಾಗ ಪ್ರಸ್ತುತವಾಗುತ್ತದೆ. ಅರ್ಜಿದಾರರಿಗೆ ಏಪ್ರಿಲ್‌ 16ರಂದು ನೋಟಿಸ್‌ ಸಿದ್ಧಪಡಿಸಿ ಏಪ್ರಿಲ್‌ 17ರಂದು ನೀಡಲಾಗಿದೆ. ಅರ್ಜಿದಾರರಿಗೆ ನೀಡಿದ ನೋಟಿಸ್‌ಗೆ ಅವರು ಉತ್ತರ ನೀಡಿರುವ ಪ್ರತಿ ಹಿಂದಿರುಗುವುದಕ್ಕೂ ಮುನ್ನ ದೂರು ದಾಖಲಿಸಲಾಗಿದೆ. 24 ಗಂಟೆಯ ಒಳಗೆ ಪ್ರತಿಕ್ರಿಯೆ ನೀಡಿಲ್ಲ. 24 ಗಂಟೆಯ ಒಳಗೆ ಪ್ರತಿಕ್ರಿಯೆ ಸಲ್ಲಿಸದಿರುವುದರಿಂದ ಡಿಕೆಶಿ ಉತ್ತರ ಕಾಯಬೇಕಿರಲಿಲ್ಲ ಎಂದು ಹೇಳಲಾಗುತ್ತಿದೆ. ಶಿವಕುಮಾರ್‌ ಅವರು ಯಾವುದೇ ಆಮಿಷವೊಡ್ಡಿಲ್ಲ” ಎಂದರು.

ಚುನಾವಣಾ ಆಯೋಗದ ಪರ ವಕೀಲ ಶರತ್‌ ದೊಡ್ಡವಾಡ ಅವರು “ಶಿವಕುಮಾರ್‌ ಭಾಷಣವು ಐಪಿಸಿ ಸೆಕ್ಷನ್‌ 171ಬಿ, 171ಸಿ ಅಡಿ ಬರುತ್ತದೆ. ಇದು ಐಪಿಸಿ ಸೆಕ್ಷನ್‌ 171ಇ ಮತ್ತು 171ಎಫ್‌ ಅಡಿ ಶಿಕ್ಷಾರ್ಹವಾಗಿದೆ. ಮತ ಕೇಳುವವರು ಅಭ್ಯರ್ಥಿ ಅಥವಾ ಇಲ್ಲದೇ ಇರಬಹುದು, ಅದು ಹೆಚ್ಚು ಪ್ರಸ್ತುತವಲ್ಲ. ಆರೋಪ ನಿಗದಿ ಸೆಕ್ಷನ್‌ಗಳಲ್ಲಿ “ಯಾರಾದರೂ” ಎಂದು ಆರಂಭಿಸಲಾಗಿದೆ. ಹೀಗಾಗಿ, ಇದು ಅಭ್ಯರ್ಥಿ ಕೇಂದ್ರಿತವಲ್ಲ. ಏಪ್ರಿಲ್‌ 17ರಂದು ನೋಟಿಸ್‌ ಜಾರಿ ಮಾಡಲಾಗಿದೆ. ಆದರೆ, ಯಾವ ಸಮಯದಲ್ಲಿ ಎಂಬುದನ್ನು ಮಾಹಿತಿ ಪಡೆದು ತಿಳಿಸಲಾಗುವುದು” ಎಂದರು.

ಪ್ರಕರಣದ ಹಿನ್ನೆಲೆ: ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್‌ ನಿವಾಸಿಗಳೊಂದಿಗೆ ಚುನಾವಣಾ ಪ್ರಚಾರ ಸಭೆ ನಡೆಸಿದ್ದ ಡಿ ಕೆ ಶಿವಕುಮಾರ್‌ “ನಾನು ಬಿಸಿನೆಸ್‌ ಡೀಲ್‌ಗೆ ಬಂದಿದ್ದೇನೆ. ಅಪಾರ್ಟ್‌ಮೆಂಟ್‌ಗೆ ಸಿಎ ನಿವೇಶನ ನೀಡಬೇಕು ಹಾಗೂ ಕಾವೇರಿ ನೀರು ಒದಗಿಸಬೇಕು ಎಂದು ನಿವಾಸಿಗಳು ಬೇಡಿಕೆಯಿಟ್ಟಿದ್ದಾರೆ. ಕಾಂಗ್ರೆಸ್‌ ಬೆಂಗಳೂರು ಗ್ರಾಮಾಂತರ ಲೋಕಸಭಾಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಗೆ (ಡಿ ಕೆ ಸುರೇಶ್‌) ಮತ ನೀಡಿದರೆ ನಿಮ್ಮ ಬೇಡಿಕೆಯನ್ನು ಎರಡು ಮೂರು ತಿಂಗಳಲ್ಲಿ ಈಡೇರಿಸುತ್ತೇನೆ. ಇಲ್ಲವಾದರೆ ನನ್ನನ್ನು ಏನೂ ಕೇಳಬೇಡಿ” ಎಂದು ಹೇಳಿಕೆ ನೀಡಿದ್ದರು. ಆ ಕುರಿತ ವಿಡಿಯೋ ಸಹ ಬಹಿರಂಗವಾಗಿತ್ತು.

ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಸಂಚಾರಿ ವಿಚಕ್ಷಣಾ ತಂಡದ ಮುಖ್ಯಸ್ಥ ಬಿ ಕೆ ದಿನೇಶ್‌ ಕುಮಾರ್‌ ಅವರು ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಏಪ್ರಿಲ್‌ 19ರಂದು ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಆರ್‌ಎಂಸಿ ಯಾರ್ಡ್‌ ಠಾಣಾ ಪೊಲೀಸರು, ಮತದಾರರಿಗೆ ಬೆದರಿಕೆ ಹಾಕಿದ ಮತ್ತು ಆಮಿಷವೊಡ್ಡಿದ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಿದ್ದರು.

ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿರುವ ಡಿ ಕೆ ಶಿವಕುಮಾರ್‌, ಕಾವೇರಿ ನೀರು ಸರಬರಾಜು ಮತ್ತು ಸಿಎ ನಿವೇಶನ ಮಂಜೂರಾತಿಗೆ ಅಪಾರ್ಟ್‌ಮೆಂಟ್‌ ನಿವಾಸಿಗಳು ಕೇಳಿದ ಪ್ರಶ್ನೆಗೆ ತಾನು ಉತ್ತರಿಸಿದ್ದೇನೆ. ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಿದರೆ, ಅವರು ನಿಮ್ಮ ಬೇಡಿಕೆ ಪರಿಗಣಿಸುತ್ತಾರೆ. ನಿಮ್ಮ ಬೇಡಿಕೆ ಈಡೇರಿಕೆಗೆ ಸಂಸದರ ನಿಧಿಯಿಂದ ಅನುದಾನ ಕೊಡಿಸಿ, ಕೆಲಸ ಕಾರ್ಯಗಳು ಮಾಡಿಕೊಡುತ್ತಾರೆ ಎಂದಷ್ಟೇ ಹೇಳಿದ್ದೇನೆ. ಅದು ಯಾವುದೇ ರೀತಿಯಲ್ಲೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಅಲ್ಲದೇ, ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ/ ಮಾಲೀಕರಿಗೆ ತಾನು ಬೆದರಿಕೆ ಹಾಕಿಲ್ಲ ಹಾಗೂ ಆಮಿಷವೊಡ್ಡಿಲ್ಲ. ಕೇವಲ ತನ್ನನ್ನು ಗುರಿಯಾಗಿಸಿಕೊಂಡು ದೂರು ದಾಖಲಿಸಲಾಗಿದೆ. ಅದನ್ನು ಪರಿಶೀಲಿಸದೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಸೂಚಿಸಿದೆ. ಪ್ರಕರಣ ಸಂಬಂಧ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ನೋಟಿಸ್‌ ನೀಡಿ ವಿವರಣೆ ಕೇಳಿದ್ದರು. ತಾನು ವಿವರಣೆ ನೀಡುವ ಮುನ್ನವೇ ದೂರು ಸಲ್ಲಿಕೆಯಾಗಿ, ಎಫ್‌ಐಆರ್‌ ದಾಖಲಿಸಲಾಗಿದೆ. ಆದ್ದರಿಂದ ಎಫ್‌ಐಆರ್‌ ಹಾಗೂ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದಾರೆ.