Justices Krishna Murari and S Ravindra Bhat
Justices Krishna Murari and S Ravindra Bhat 
ಸುದ್ದಿಗಳು

ಗಾಯ ಮತ್ತು ಸಾವಿನ ಅವಧಿಯ ನಡುವೆ ಅಂತರ ಇದೆ ಎಂದ ಮಾತ್ರಕ್ಕೆ ಕೊಲೆಯ ಹೊಣೆ ಕಡಿಮೆಯಾಗದು: ಸುಪ್ರೀಂ ಕೋರ್ಟ್‌

Bar & Bench

ಆರೋಪಿಯ ಕೃತ್ಯದಿಂದ ಗಾಯಗೊಂಡ ಸಾಕಷ್ಟು ಸಮಯದ ಬಳಿಕ ಸಂತ್ರಸ್ತ ಸಾವನ್ನಪ್ಪಿದ ಮಾತ್ರಕ್ಕೆ ಕೊಲೆ ಆರೋಪಿಯ ಹೊಣೆ ಕಡಿಮೆಯಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ತೀರ್ಪು ನೀಡಿದೆ [ಪ್ರಸಾದ್‌ ಪ್ರಧಾನ್‌ ಮತ್ತಿತರರು ಹಾಗೂ ಛತ್ತೀಸ್‌ಗಡ ಸರ್ಕಾರ ನಡುವಣ ಪ್ರಕರಣ].

ಗಾಯಗೊಂಡು ಬಹಳ ಹೊತ್ತಾದ ಬಳಿಕ ಸಂತ್ರಸ್ತ ಸಾವನ್ನಪ್ಪಿದ್ದಾನೆ ಎಂದ ಮಾತ್ರಕ್ಕೆ ಅಪರಾಧಿಯ ಹೊಣೆಯನ್ನು ʼಕೊಲೆʼಯಿಂದ ʼಕೊಲೆಗೆ ಸಮವಲ್ಲದ ನರಹತ್ಯೆʼ ಎಂದು ಬದಲಿಸಲು ಯಾವುದೇ ರೂಢಿಗತ ಊಹೆ ಅಥವಾ ಸೂತ್ರ ಇಲ್ಲ ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಎಸ್ ರವೀಂದ್ರ ಭಟ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಮೂವರಿಗೆ ಸಂಬಂಧಿಸಿದ ಭೂವ್ಯಾಜ್ಯದ ಘಟನೆಯೊಂದರಲ್ಲಿ ಆರೋಪಿಗಳ ವ್ಯಕ್ತಿಯೊಬ್ಬರನ್ನು ಕೊಡಲಿಯಿಂದ ಹಲ್ಲೆ ಮಾಡಿದ್ದರು. ಇದಾದ ಇಪ್ಪತ್ತು ದಿನಗಳ ನಂತರ ಸಂತ್ರಸ್ತ ವ್ಯಕ್ತಿಯು ಸಾವನ್ನಪ್ಪಿದ್ದ. ಛತ್ತೀಸ್‌ಗಡ ಹೈಕೋರ್ಟ್‌ ಈ ಹಿಂದೆ ವಿಚಾರಣಾ ನ್ಯಾಯಾಲಯವು ಅಪರಾಧಿಗಳಿಗೆ ವಿಧಿಸಿದ್ದ ಶಿಕ್ಷೆಯನ್ನು ದೃಢಪಡಿಸಿತ್ತು.ಅದನ್ನು ಪ್ರಶ್ನಿಸಿ ಆರೋಪಿಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಶಸ್ತ್ರಚಿಕಿತ್ಸೆಯ ಸಮಸ್ಯೆಯಿಂದಾಗಿ ಘಟನೆ ನಡೆದ ಇಪ್ಪತ್ತು ದಿನಗಳ ನಂತರ ಆತ ಮೃತಪಟ್ಟಿದ್ದಾನೆ. ಹಾಗಾಗಿ ಇದು ಕೊಲೆಯ ಉದ್ದೇಶವಲ್ಲದ ನರಹತ್ಯೆ ಎಂದು ಪರಿಗಣಿಸಬೇಕು ಎಂದು ಅಪರಾಧಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದರು.

ಆದರೆ ಈ ವಾದವನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ “ಸಮಯ ಸರಿದಿದೆ ಎಂದ ಮಾತ್ರಕ್ಕೆ ಅಪರಾಧಿಗಳ ಹೊಣೆಯನ್ನು ಕೊಲೆಗೆ ಬದಲಾಗಿ ಕೊಲೆಗೆ ಸಮವಲ್ಲದ ನರಹತ್ಯೆ ಎಂದು ನಿರ್ಧರಣ ಮಾಡಲು ಸಾಧ್ಯವಿಲ್ಲ ಎಂದು ಘೋಷಿರುವ ಹಲವು ತೀರ್ಪುಗಳಿವೆ” ಎಂಬುದಾಗಿ ಹೇಳಿತು.  

ಅಲ್ಲದೆ ಮೃತರ ಮಗಳನ್ನು ಒಳಗೊಂಡ ಸಾಕ್ಷಿಗಳ ವಿಶ್ವಾಸಾರ್ಹತೆ ಬಗ್ಗೆ ಮೇಲ್ಮನವಿದಾರರು ಎತ್ತಿರುವ ಪ್ರಶ್ನೆಗಳನ್ನು ಪೀಠ ತಿರಸ್ಕರಿಸಿತು. “ಬಹುತೇಕ ಸಾಕ್ಷಿಗಳು ಮೃತರಿಗೆ ಸಂಬಂಧಿಸಿದವರು ಎಂದ ಮಾತ್ರಕ್ಕೆ ಅವರ ಸಾಕ್ಷ್ಯವನ್ನು ಹೊರತುಪಡಿಸಲಾಗದು” ಎಂದು ಅದು ಅಭಿಪ್ರಾಯಪಟ್ಟಿತು. ಈ ಅವಲೋಕನಗಳ ಮೂಲಕ ನ್ಯಾಯಾಲಯ ಕೊಲೆ ಅಪರಾಧ ಮತ್ತು ಅವರಿಗೆ ವಿಧಿಸಲಾದ ಶಿಕ್ಷೆಯನ್ನು ಎತ್ತಿಹಿಡಿಯಿತು.