Justice Sanjay Kishan Kaul 
ಸುದ್ದಿಗಳು

ನ್ಯಾಯಾಲಯದ 4-5 ಗಂಟೆಗಳ ನಂತರ ನ್ಯಾಯಾಧೀಶರು ಮಾಡುವ ಕೆಲಸ ಯಾರಿಗೂ ಕಾಣುವುದಿಲ್ಲ: ನ್ಯಾ. ಕೌಲ್

ಅಮೆರಿಕದ ಸುಪ್ರೀಂ ಕೋರ್ಟ್ ವರ್ಷಕ್ಕೆ 100 ಪ್ರಕರಣ ಆಲಿಸಿದರೆ ನಮ್ಮ ದೇಶದ ಪ್ರತಿ ಪೀಠ ವಾರಕ್ಕೆ 100ಕ್ಕೂ ಹೆಚ್ಚು ಪ್ರಕರಣಗಳನ್ನು ಆಲಿಸುತ್ತದೆ ಎಂದು ಹೇಳಿದ ನ್ಯಾ. ಕೌಲ್.

Bar & Bench

ಭಾರತೀಯ ನ್ಯಾಯಾಲಯಗಳ ಮುಂದೆ ಬಾಕಿ ಇರುವ ಪ್ರಕರಣಗಳನ್ನು ನಿಭಾಯಿಸುವುದಕ್ಕಾಗಿ ನ್ಯಾಯಾಧೀಶರ ರಜೆ ಕಡಿಮೆಗೊಳಿಸಬೇಕು ಎಂಬ ಮಾತುಗಳಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಸೋಮವಾರ ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲಾ 3011 ರೋಟರಿ ಕ್ಲಬ್ಸ್‌ ವತಿಯಿಂದ ದೆಹಲಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾನೂನು ನೆರವು ವಿಸ್ತರಿಸುವ ವಿಚಾರ ಸಂಕಿರಣದ ಪ್ರಶ್ನೋತ್ತರ ಅವಧಿಯಲ್ಲಿ, ಅವರು ಈ ಅನಿಸಿಕೆಗಳನ್ನು ಹಂಚಿಕೊಂಡರು.

ಚರ್ಚೆಯ ಪ್ರಮುಖಾಂಶಗಳು

  • ನ್ಯಾಯಾಲಯದ 4-5 ಗಂಟೆಗಳ ನಂತರ ನ್ಯಾಯಾಧೀಶರು ಮಾಡುವ ಕೆಲಸ  ಯಾರಿಗೂ ಕಾಣುವುದಿಲ್ಲ. ನ್ಯಾಯಾಲಯಕ್ಕೆ ಬರುವ ಮುನ್ನ 7-8 ಗಂಟೆಗಳ ಕಾಲ ಅಧ್ಯಯನ ಮಾಡಿರಬೇಕಾಗುತ್ತದೆ. ಬಿಡುವಿನ ವೇಳೆ ತೀರ್ಪು ಬರೆಯಬೇಕಾಗುತ್ತದೆ. ನಾವು ಆವಿಷ್ಕಾರಗೊಳ್ಳದ ಹೊರತು ಬದಲಾವಣೆ ಇರದು. ಹಾಗೆ ಮಾಡದಿದ್ದರೆ ಪ್ರಕರಣಗಳು ಬಾಕಿ ಉಳಿಯುತ್ತವೆ. ನಿಜವಾದ ಕಳವಳವೆಂದರೆ ದೊಡ್ಡಮಟ್ಟದಲ್ಲಿ ಕ್ರಿಮಿನಲ್‌ ಅಥವಾ ಕೌಟುಂಬಿಕ ಪ್ರಕರಣಗಳ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳಾಗಿವೆ.  

  • ಅಮೆರಿಕದಲ್ಲಿ ಶೇ 2-3ರಷ್ಟು ಪ್ರಕರಣಗಳು ಮಾತ್ರ ನ್ಯಾಯಾಲಯದ ಮೆಟ್ಟಿಲೇರುತ್ತವೆ. ಉಳಿದವು ರಾಜಿ ಸಂಧಾನ (Plea Bargaining) ಅಥವಾ ಪರ್ಯಾಯ ವ್ಯಾಜ್ಯ ನಿರ್ಣಯಗಳಲ್ಲಿ ಪರಿಹಾರ ಕಾಣುತ್ತವೆ. ಭಾರತದಲ್ಲಿ ಬಹುಪಾಲು ಜನ ಇಂತಹ ವಿಧಾನಗಳನ್ನು ಒಪ್ಪಲು ಹಿಂಜರಿಯುತ್ತಾರೆ.

  • ಅಮೆರಿಕದ ಸುಪ್ರೀಂ ಕೋರ್ಟ್‌ ವರ್ಷಕ್ಕೆ 100 ಪ್ರಕರಣ ಆಲಿಸಿದರೆ ನಮ್ಮ ದೇಶದ ಪ್ರತಿ ಪೀಠ ವಾರಕ್ಕೆ 100ಕ್ಕೂ ಹೆಚ್ಚು ಪ್ರಕರಣಗಳನ್ನು ಆಲಿಸುತ್ತದೆ. ಕಂದಾಯ ಪ್ರಕರಣಗಳಲ್ಲಿ ಜನ ಆರು ಹಂತಗಳನ್ನು ದಾಟಿದ ಬಳಿಕ ಸುಪ್ರೀಂ ಕೋರ್ಟ್‌ಗೆ ತೆರಳುತ್ತಾರೆ.

  • ದುಬಾರಿ ವೆಚ್ಚದಿಂದಾಗಿ ಅನೇಕರಿಗೆ ನ್ಯಾಯ ಪಡೆಯಲು ಸಾಧ್ಯವಾಗುತ್ತಿಲ್ಲ.

  • ಕಾನೂನು ಅರಿವು, ಜೈಲಿನಲ್ಲಿರುವವರ ಪ್ರಕರಣಗಳ ವಿಚಾರಣೆಗೆ ಆದ್ಯತೆ, ಪರ್ಯಾಯ ವ್ಯಾಜ್ಯ ಪರಿಹಾರೋಪಾಯ (ಎಡಿಆರ್‌)ಗಳಿಂದ ಕೌಟುಂಬಿಕ ಮತ್ತು ವೈವಾಹಿಕ ವ್ಯಾಜ್ಯಗಳನ್ನು ಪರಿಹರಿಸುವುದು ಪ್ರಕರಣಗಳ ಬಾಕಿ ಸಮಸ್ಯೆ ತಗ್ಗಿಸಲು ಇರುವ ಮಾರ್ಗ.

  • ಪಿಐಎಲ್‌ಗಳು ಅತ್ಯಂತ ಮಹತ್ವದ ಪರಿಹಾರ ಸಾಧನಗಳಾಗಿವೆ. ಹಾಗಾಗಿ, ಕ್ಷುಲ್ಲಕ ಪಿಐಎಲ್‌ಗಳ ಸಲ್ಲಿಕೆಯ ಮೂಲಕ ಅವುಗಳನ್ನು ಅಪಖ್ಯಾತಿಗೀಡು ಮಾಡಬಾರದು. ಅನೇಕ ಪಿಐಎಲ್‌ಗಳನ್ನು ಆರಂಭದಲ್ಲೇ ನಿರಾಕರಿಸಲಾಗುತ್ತದೆ. ಆದರೆ ಒಮ್ಮೆ ಪಟ್ಟಿ ಮಾಡಿದ ನಂತರ ನ್ಯಾಯಾಧೀಶರು ಅದನ್ನು ನಿರ್ಧರಿಸುತ್ತಾರೆ.