CLAT 2023
CLAT 2023 
ಸುದ್ದಿಗಳು

ಸಿಎಲ್ಎಟಿ 2023: ವಿಕಲಚೇತನ ಅಭ್ಯರ್ಥಿಗಳ ಲಿಪಿಕಾರರಿಗೆ ಕಟ್ಟುನಿಟ್ಟಿನ ಮಾನದಂಡ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Bar & Bench

ಮುಂಬರುವ ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆ- (ಸಿಎಲ್‌ಎಟಿ) 2023ರ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ  ಜಾರಿಗೆ ತಂದಿದ್ದ ನಿಯಮಗಳನ್ನು ಪ್ರಶ್ನಿಸಿ ವಕೀಲರೊಬ್ಬರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ (ಅರ್ನಾಬ್ ರಾಯ್ ಮತ್ತು ಎನ್‌ಎಲ್‌ಯು ಒಕ್ಕೂಟ ನಡುವಣ ಪ್ರಕರಣ).

ಅಭ್ಯರ್ಥಿಗಳು ಪಡೆಯಲಿರುವ ಲಿಪಿಕಾರರು 11ನೇ ತರಗತಿ ಅಥವಾ ಅದಕ್ಕಿಂತಲೂ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಯಾವುದೇ ಕೋಚಿಂಗ್‌ ಸೆಂಟರ್‌ಗಳಲ್ಲಿ ತರಬೇತಿ ಪಡೆದಿರಬಾರದು ಎಂಬ ಇತ್ತೀಚಿನ ನಿಯಮಾವಳಿಗೆ ವಿಕಲಚೇತನರ ಪರ ಹೋರಾಟ ಮಾಡುವ ಅರ್ನಾಬ್‌ ರಾಯ್‌ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ಆಕ್ಷೇಪ ವ್ಯಕ್ತಪಡಿಸಿದೆ.

“ಪರೀಕ್ಷೆ ನಡೆಯಲು 4 ವಾರಗಳಿಗಿಂತ ಕಡಿಮೆ ಅವಧಿ ಇದ್ದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳ ಒಕ್ಕೂಟ ವಿಧಿಸಿದ ನಿರ್ಬಂಧಗಳಿಂದಾಗಿ ತಾನು ವೈಯಕ್ತಿಕವಾಗಿ ಬಲ್ಲ ಹದಿಮೂರು (13) ದೃಷ್ಟಿಹೀನ ಅಭ್ಯರ್ಥಿಗಳು ಲಿಪಿಕಾರರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಕ್ಕೂಟದ ಮಾನದಂಡದಡಿ ಅಂಗವೈಕಲ್ಯತೆ ಎಂದು ಪರಿಗಣಿಸಲಾಗದ ತೀವ್ರ ಅಂಗವೈಕಲ್ಯ ಇರದ ಆದರೆ ಬರೆಯಲು ನೈಜ ತೊಂದರೆ ಅನುಭವಿಸುತ್ತಿರುವ ಅಭ್ಯರ್ಥಿಗಳು ಲಿಪಿಕಾರರನ್ನು ಬಳಸಿಕೊಳ್ಳುವುದಕ್ಕೆ ಒಕ್ಕೂಟ ನಿರ್ಬಂಧ ಹೇರಿದೆ. ವಿಕಾಸ್‌ ಕುಮಾರ್‌ ಮತ್ತು ಯುಪಿಎಸ್‌ಸಿ ಪ್ರಕರಣದಲ್ಲಿ ನೀಡಲಾಗಿರುವ ತೀರ್ಪಿಗೆ ಇದು ಸ್ಪಷ್ಟವಾಗಿ ವಿರುದ್ಧ” ಎಂದು ಅರ್ಜಿ ವಿವರಿಸಿದೆ.

ತಮ್ಮ ಅಂಗವೈಕಲ್ಯದಿಂದಾಗಿ ಬರವಣಿಗೆಯಲ್ಲಿ ನೈಜ ತೊಂದರೆ ಅನುಭವಿಸುತ್ತಿರುವವರನ್ನು ಇದು ನಿರ್ಬಂಧಿಸಲಿದೆ ಎಂದು ಅರ್ಜಿ ಹೇಳಿದೆ. ಪ್ರಸಕ್ತ ಸಾಲಿನ ಸಿಎಲ್‌ಎಟಿ ಪರೀಕ್ಷೆ ಇದೇ ಡಿ.18ಕ್ಕೆ ನಿಗದಿಯಾಗಿದೆ.

ನಿಯಮಗಳು ಎಲ್ಲೆ ಮೀರಿದ್ದು ಮನಸೋಇಚ್ಛೆಯಿಂದ ಕೂಡಿವೆ. ನಿಯಮಗಳಿಂದಾಗಿ ಅಂಗವೈಕಲ್ಯ  ಹೊಂದಿದವರು ಲಿಪಿಕಾರರನ್ನು ಹುಡುಕಿಕೊಳ್ಳುವುದು ಅಸಾಧ್ಯವಾಗಿದೆ. ಯಾವುದೇ ಕೋಚಿಂಗ್‌ ಸೆಂಟರ್‌ನಲ್ಲಿ ಲಿಪಿಕಾರ ತರಬೇತಿ ಪಡೆದಿರಬಾರದು ಎಂಬ ನಿಯಮದಿಂದಾಗಿ 10 ಮತ್ತು 11 ನೇ ತರಗತಿಯಲ್ಲಿ ಓದುತ್ತಿರುವ ಬಹುತೇಕ ಅಭ್ಯರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಡುತ್ತದೆ.

 ಅಲ್ಲದೆ ಆರ್ಥಿಕ ಮತ್ತಿತರ ನಿರ್ಬಂಧಗಳಿಂದ ಲಿಪಿಕಾರರನ್ನು ಹುಡುಕಿಕೊಳ್ಳಲು ಸಾಧ್ಯವಾಗದವರಿಗೆ ಲಿಪಿಕಾರರನ್ನು ಒದಗಿಸುವ ಸೌಲಭ್ಯವನ್ನು ಒಕ್ಕೂಟ ಒದಗಿಸಿಲ್ಲ. ಇದು 2018ರ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು  ವಕೀಲ ಎನ್ ಸಾಯಿ ವಿನೋದ್  ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ವಿವರಿಸಲಾಗಿದೆ.