Divorce

 
ಸುದ್ದಿಗಳು

ವಿಚ್ಛೇದನ ಪ್ರಕರಣಗಳಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಂ ಅಥವಾ ಜಾತ್ಯತೀತ ಕ್ರೌರ್ಯ ಎಂದು ಇರದು: ಕೇರಳ ಹೈಕೋರ್ಟ್

ವಿಚ್ಛೇದನ ನೀಡಲು ಬೇರೆ ಧರ್ಮದ ವ್ಯಕ್ತಿಗಳಿಗೆ ಬೇರೆ ಕ್ರೌರ್ಯ ಅನ್ವಯಿಸುತ್ತದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿತು.

Bar & Bench

ವೈಯಕ್ತಿಕ ಕಾನೂನುಗಳ ಆಚೆಗೆ ವಿಚ್ಛೇದನಕ್ಕೆ ಕಾರಣವಾಗಿರುವ ವೈವಾಹಿಕ ಕ್ರೌರ್ಯದ ಬಗ್ಗೆ ಏಕರೂಪದ ವ್ಯಾಖ್ಯಾನ ಇರಬೇಕು ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. [ಮೇರಿ ಮಾರ್ಗರೇಟ್ ಮತ್ತು ಜೋಸ್ ಪಿ ಥಾಮಸ್ ನಡುವಣ ಪ್ರಕರಣ].

ಸಂವಿಧಾನದ 44 ನೇ ವಿಧಿ (ಏಕರೂಪ ನಾಗರಿಕ ಸಂಹಿತೆ)ಯನ್ನು ಆಧರಿಸಿ ತೀರ್ಪು ನೀಡಿದ ನ್ಯಾಯಮೂರ್ತಿಗಳಾದ ಎ ಮುಹಮ್ಮದ್ ಮುಸ್ತಾಕ್ ಮತ್ತು ಸೋಫಿ ಥಾಮಸ್ ಅವರಿದ್ದ ವಿಭಾಗೀಯ ಪೀಠ, ʼವಿಚ್ಛೇದನದ ಆದೇಶವನ್ನು ಸಮರ್ಥಿಸಲು ಹಿಂದೂ ಕ್ರೌರ್ಯ, ಮುಸ್ಲಿಂ ಕ್ರೌರ್ಯ, ಕ್ರೈಸ್ತ ಕ್ರೌರ್ಯ ಜಾತ್ಯತೀತ ಕ್ರೌರ್ಯ ಎಂದು ಬೇರೆ ಬೇರೆ ಕ್ರೌರ್ಯಗಳನ್ನು ಕಾನೂನು ಗುರುತಿಸಲು ಸಾಧ್ಯವಿಲ್ಲ. ಹಿಂದೂ ವಿವಾಹ ಕಾಯಿದೆ, ವಿಶೇಷ ವಿವಾಹ ಕಾಯಿದೆ, ವಿಚ್ಛೇದನ ಕಾಯಿದೆ ಹಾಗೂ ಮುಸ್ಲಿಂ ವಿವಾಹದ ವಿಸರ್ಜನೆಯ ಕಾಯಿದೆಯಲ್ಲಿ ವೈವಾಹಿಕ ಕ್ರೌರ್ಯದ ಸ್ವರೂಪ ಕುರಿತ ವ್ಯಾಖ್ಯಾನ ಬೇರೆ ಇದೆ ಎಂದ ಮಾತ್ರಕ್ಕೆ ವೈವಾಹಿಕ ಕ್ರೌರ್ಯದ ಸ್ವರೂಪ ಬೇರೆ ಎಂದು ಹೇಳಲು ಸಾಧ್ಯವಿಲ್ಲʼ ಎಂಬುದಾಗಿ ತಿಳಿಸಿತು.

“ವೈಯಕ್ತಿಕ ಕಾನೂನುಗಳಲ್ಲಿ ವಿಭಿನ್ನ ರೀತಿಯ ಪದಗಳ ಬಳಕೆಯಾಗಿದೆ ಎಂದ ಮಾತ್ರಕ್ಕೆ ವಿವಾಹ ವಿಚ್ಛೇದನಕ್ಕೆ ಸಂಗಾತಿಗೆ ಹಕ್ಕನ್ನು ಒದಗಿಸುವ ವೈವಾಹಿಕ ಕ್ರೌರ್ಯದ ಪರಿಕಲ್ಪನೆಯು ವಿವಿಧ ಧಾರ್ಮಿಕ ನಂಬಿಕೆಗಳಿಗೆ ಸೇರಿದ ವ್ಯಕ್ತಿಗಳಿಗೆ ವಿಭಿನ್ನವಾಗಿರುತ್ತದೆ, ಏಕರೂಪವಾಗಿರುವುದಿಲ್ಲ ಎನ್ನುವ ಸಿದ್ಧಾಂತವನ್ನು ನಾವು ತಿರಸ್ಕರಿಸುತ್ತೇವೆ" ಎಂದು ಪೀಠ ಹೇಳಿತು.

ಆದ್ದರಿಂದ ವೈಯಕ್ತಿಕ ಕಾನೂನುಗಳ ಆಚೆಗೆ ವಿಚ್ಛೇದನಕ್ಕೆ ಕಾರಣವಾಗಿರುವ ವೈವಾಹಿಕ ಕ್ರೌರ್ಯದ ಬಗ್ಗೆ ಏಕರೂಪವಾದ ವ್ಯಾಖ್ಯಾನ ಇರಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಅಲ್ಲದೆ ಹಾನಿ ಅಥವಾ ಕೆಡುಕನ್ನು ಕೇವಲ ದೈಹಿಕ ಹಾನಿ ಅಥವಾ ಕೆಡುಕು ಎಂದು ವ್ಯಾಖ್ಯಾನಿಸಲಾಗದು ಎಂದು ಕೂಡ ಪೀಠ ಇದೇ ವೇಳೆ ತಿಳಿಸಿತು.

"ಸಂಗಾತಿ ಪೂರ್ಣವಾಗಿ ಅರಳಲು ಮತ್ತು ದಾಂಪತ್ಯದಲ್ಲಿ ಜೀವನ ಆನಂದಿಸಲು ಅಡ್ಡಿ ಉಂಟುಮಾಡುವ ಯಾವುದೇ ಸಂಗತಿಯಾದರೂ ವಿಚ್ಛೇದನ ಕಾಯಿದೆಯ ಸೆಕ್ಷನ್ 10(1)(ಎಕ್ಸ್‌) ವ್ಯಾಪ್ತಿಯೊಳಗೆ ಬರಬೇಕು. ಹಿಂದೂ ವಿವಾಹ ಕಾಯಿದೆಯ ಸೆಕ್ಷನ್‌ 13(1)(1ಎ), ವಿಶೇಷ ವಿವಾಹ ಕಾಯಿದೆಯ ಸೆಕ್ಷನ್‌.27(1) ಅಡಿ ವ್ಯಾಖ್ಯಾನಿಸದ ಮತ್ತು ಮುಸ್ಲಿಂ ವಿವಾಹ ವಿಸರ್ಜನೆ ಕಾಯಿದೆಯ ಸೆಕ್ಷನ್‌ 2(viii) ಹಾಗೂ ವಿಚ್ಛೇದನ ಕಾಯಿದೆಯ ಸೆಕ್ಷನ್‌10 (1) (x) ಈ ಎಲ್ಲವೂ ವೈವಾಹಿಕ ಕ್ರೌರ್ಯದ ಬಗ್ಗೆ ಮೇಲೆ ಹೇಳಿದ ರೀತಿಯ ಅರ್ಥೈಸುವಿಕೆಯಿಂದ ಸ್ಫೂರ್ತಿ ಪಡೆಯಬೇಕು” ಎಂದು ವಿವರಿಸಿತು.

ಆ ಮೂಲಕ ತಾನು ಕ್ರೂರವಾಗಿ ನಡೆದುಕೊಂಡಿರುವುದಕ್ಕೆ ಮತ್ತು ಪತಿಯಿಂದ ದೂರ ಇರುವ ಕಾರಣಕ್ಕೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ತೀರ್ಪು ಪ್ರಶ್ನಿಸಿ ಪತ್ನಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.