Karnataka High Court and Chief Justice Ritu Raj Awasthi
Karnataka High Court and Chief Justice Ritu Raj Awasthi 
ಸುದ್ದಿಗಳು

ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದಕ್ಕೂ ಮುನ್ನ ದೂರುದಾರರಿಗೆ ಪ್ರತಿ ನೀಡಲು ಪೊಲೀಸರಿಗೆ ನಿರ್ದೇಶನ ಕೋರಿದ್ದ ಮನವಿ ವಜಾ

Bar & Bench

ಸಕ್ಷಮ ನ್ಯಾಯಾಲಯಕ್ಕೆ ಪೊಲೀಸ್‌ ವರದಿ ಸಲ್ಲಿಸುವುದಕ್ಕೂ ಮುನ್ನ ದೂರುದಾರರು ಅಥವಾ ಮಾಹಿತಿದಾರರಿಗೆ ಪ್ರತಿ ನೀಡಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಿವೇಚನಾರಹಿತವಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾ ಮಾಡಿದ್ದು, ರೂ. 50 ಸಾವಿರ ದಂಡ ವಿಧಿಸಿದೆ (ಅಮರ್‌ ಕೊರಿಯಾ ವರ್ಸಸ್‌ ಕರ್ನಾಟಕ ರಾಜ್ಯ ಮತ್ತು ಇತರರು).

ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿ, ಪಾರ್ಟಿ ಇನ್‌ ಪರ್ಸನ್‌ ಆಗಿ ವಾದಿಸಿದ ಬೆಂಗಳೂರಿನ ವಕೀಲ ಅಮರ್‌ ಕೊರಿಯಾ ಅವರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರಿದ್ದ ವಿಭಾಗೀಯ ಪೀಠವು ಅರ್ಜಿದಾರ ವಕೀಲರಿಗೆ ₹50 ಸಾವಿರ ದಂಡ ವಿಧಿಸಿದ್ದು, ಅದನ್ನು ಒಂದು ತಿಂಗಳ ಒಳಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸುವಂತೆ ಆದೇಶಿಸಿದೆ.

“ತನಿಖಾಧಿಕಾರಿಯು ಪೊಲೀಸ್‌ ವರದಿಯ ಜೊತೆಗೆ ಹೆಚ್ಚುವರಿ ಪ್ರತಿಯನ್ನು ದೂರುದಾರರು ಅಥವಾ ಮಾಹಿತಿದಾರರಿಗೆ ನೀಡಲು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸುವುದು ಕಾನೂನಿನ ಪಾಲನೆಯಾಗಿದೆ. ಸಕ್ಷಮ ನ್ಯಾಯಾಲಯದಿಂದ ಹೆಚ್ಚುವರಿ ಪ್ರತಿಯನ್ನು ಪಡೆದುಕೊಳ್ಳುವುದು ದೂರುದಾರರು ಅಥವಾ ಮಾಹಿತಿದಾರರ ಜವಾಬ್ದಾರಿಯಾಗಿದೆ. ಸಕ್ಷಮ ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದಕ್ಕೂ ಮುನ್ನ ದೂರುದಾರರು ಅಥವಾ ಮಾಹಿತಿದಾರರಿಗೆ ಪೊಲೀಸ್‌ ವರದಿಯ ಪ್ರತಿ ನೀಡಬೇಕು ಎಂದು ಕಾನೂನು ಹೇಳುವುದಿಲ್ಲ. ದೂರುದಾರರು ಅಥವಾ ಮಾಹಿತಿದಾರರು ಸಕ್ಷಮ ನ್ಯಾಯಾಲಯ ಸಂಪರ್ಕಿಸಿದರೂ ಪೊಲೀಸ್‌ ವರದಿಯ ಪ್ರತಿ ನೀಡಿಲ್ಲ ಎಂಬುದನ್ನು ತೋರಿಸಲು ಅರ್ಜಿದಾರರು ಯಾವುದೇ ದಾಖಲೆಗಳನ್ನೂ ನೀಡಿಲ್ಲ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ತಮ್ಮ ವಾದದ ಸಮರ್ಥನೆಗೆ ಅರ್ಜಿದಾರ ವಕೀಲರು ಭಗವಂತ್‌ ಸಿಂಗ್‌ ವರ್ಸಸ್‌ ಪೊಲೀಸ್‌ ಆಯುಕ್ತರು ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ಆಧರಿಸಿದ್ದರು. ಆ ತೀರ್ಪಿನಲ್ಲಿ ಪೊಲೀಸ್‌ ವರದಿಯನ್ನು ದೂರುದಾರರು ಅಥವಾ ಮಾಹಿತಿದಾರರಿಗೆ ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಸಕ್ಷಮ ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದಕ್ಕೂ ಮುನ್ನ ದೂರುದಾರರು ಅಥವಾ ಮಾಹಿತಿದಾರರಿಗೆ ಪೊಲೀಸ್‌ ವರದಿಯ ಪ್ರತಿ ನೀಡಲು ಆದೇಶಿಸಬೇಕು ಎಂಬ ಅರ್ಜಿದಾರರ ವಾದವನ್ನು ಒಪ್ಪಲು ನಮಗೆ ಸಾಧ್ಯವಾಗಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದ್ದು, ಮನವಿ ವಜಾ ಮಾಡಿದೆ.

ವಕೀಲರಾಗಿದ್ದುಕೊಂಡು ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸುವ ಮೂಲಕ ನ್ಯಾಯಾಲಯದ ಅತ್ಯಮೂಲ್ಯ ಸಮಯ ವ್ಯರ್ಥ ಮಾಡಿರುವುದಕ್ಕೆ ಅರ್ಜಿದಾರರಿಗೆ ₹50 ಸಾವಿರ ದಂಡ ವಿಧಿಸಲಾಗಿದೆ. ಇದನ್ನು ಅವರು ಒಂದು ತಿಂಗಳಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಸ್‌ಎಲ್‌ಎಸ್‌ಎ) ಸಲ್ಲಿಸಬೇಕು. ದಂಡದ ಮೊತ್ತವನ್ನು ಪಾವತಿಸಲು ಅರ್ಜಿದಾರ ವಕೀಲ ವಿಫಲವಾದರೆ ಕೆಎಸ್‌ಎಲ್‌ಎಸ್‌ಎ ಅದನ್ನು ವಸೂಲಿ ಮಾಡಬೇಕು ಎಂದು ಪೀಠವು ಆದೇಶದಲ್ಲಿ ಹೇಳಿದೆ.

Amar Correa V. State of Karnataka.pdf
Preview