"ಕಠಿಣ ಕಾನೂನು ಕೈಗೊಳ್ಳದ ಹಿನ್ನೆಲೆಯಲ್ಲಿ ನಮ್ಮಲ್ಲಿ ಅಪರಾಧ ಎಸಗುವುದು ಸುಲಭವಾಗಿದೆ" ಎಂದು ಈಚೆಗೆ ಕರ್ನಾಟಕ ಹೈಕೋರ್ಟ್ ಹೇಳಿದ್ದು, ಅತ್ಯಾಚಾರ ಪ್ರಕರಣದಲ್ಲಿ ತೆಲಂಗಾಣದ 23 ವರ್ಷದ ಯುವಕನಿಗೆ ಜಾಮೀನು ನಿರಾಕರಿಸಿದೆ.
ಮಣಿಪಾಲ್ ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿಯಾಗಿದ್ದಾಗ ಸಹಪಾಠಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿ ಎರಡು ತಿಂಗಳಿಂದ ಜೈಲಿನಲ್ಲಿರುವ ಗೋಪಿ ರೆಡ್ಡಿ ಕಾರ್ತಿಕ್ ರೆಡ್ಡಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ನಟರಾಜ್ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಅಪರಾಧಿಗಳ ವಿರುದ್ಧ ಕಠಿಣ ನಿಲುವು ತಳೆಯದೇ ಇರುವುದರಿಂದ ಕಾನೂನು ತನ್ನ ಪ್ರಾಮುಖ್ಯತೆ ಕಳೆದುಕೊಂಡಿದೆ. ಈ ಕಾರಣಕ್ಕಾಗಿ ಅಪರಾಧ ಎಸಗುವುದು ಸುಲಭವಾಗಿದೆ” ಎಂದು ನ್ಯಾಯಾಲಯ ಹೇಳಿದೆ.
“ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮಾಡಿದ ರೀತಿ ಕಾಲೋ, ಕೈಯ್ಯೊ ಕತ್ತರಿಸಿದರೆ ಮಾತ್ರ ಜನರು ಕಾನೂನು ಪಾಲಿಸಬೇಕು ಎಂದು ಅರ್ಥೈಸಿಕೊಳ್ಳಬಹುದು. ನಮ್ಮಲ್ಲಿ ಪ್ರಜಾಪ್ರಭುತ್ವ ಇರುವುದರಿಂದ ಎಲ್ಲರೂ ಸರಾಗವಾಗಿ ತೆಗೆದುಕೊಳ್ಳುತ್ತಾರೆ” ಎಂದ ನ್ಯಾಯಾಲಯ ಹೇಳಿದೆ.
“ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ಆತ ಇನ್ನೂ ನಾಲ್ಕೈದು ದಿನ ಜೈಲಿನಲ್ಲಿರಲಿ ಬಿಡಿ. ಜೈಲಿನ ಅನುಭವವಾಗಲಿ. ಶಿಕ್ಷೆ ವಿಧಿಸಿದರೆ ನೀವು ಮತ್ತೆ ಜೈಲಿಗೆ ಹೋಗಬೇಕಾಗುವುದು, ಯಾರಿಗೆ ಗೊತ್ತು” ಎಂದಿತು. ಅಂತಿಮವಾಗಿ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜೂನ್ 8ಕ್ಕೆ ಮುಂದೂಡಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಅಯಾಂತಿಕ ಮೊಂಡಲ್ ಅವರು “ಆರೋಪಿಯು ಎರಡು ತಿಂಗಳಿಂದ ಜೈಲಿನಲ್ಲಿದ್ದಾರೆ. ಆತ ಯಾವುದೇ ಅಪರಾದ ಎಸಗಿಲ್ಲ. ಮೂರು ವರ್ಷಗಳ ಹಿಂದೆ ನಡೆದ ಪ್ರಕರಣದಲ್ಲಿ ಆರೋಪಿಯನ್ನು ನಿರಂತರವಾಗಿ ಜೈಲಿನಲ್ಲಿಟ್ಟಿದ್ದು, ಇದು ಅವರ ವೃತ್ತಿಪರ ಬದುಕಿಗೆ ಹಾನಿ ಮಾಡಲಿದೆ” ಎಂದರು.
ಆರೋಪಿ ಮತ್ತು ದೂರುದಾರ ಇಬ್ಬರೂ ಉಡುಪಿಯ ಮಣಿಪಾಲ್ ತಂತ್ರಜ್ಞಾನ ಸಂಸ್ಥೆಯಲ್ಲಿ ಸಹಪಾಠಿಗಳಾಗಿದ್ದು, 2023ರ ಜುಲೈನಲ್ಲಿ ಆತ ಪ್ರೇಮ ನಿವೇದನೆ ಮಾಡಿದ್ದ. ತಾನೂ ಅದಕ್ಕೆ ಸ್ಪಂದಿಸಿದ್ದು, ಕಾಲಾನಂತರದಲ್ಲಿ ಆತನ ನಡವಳಿಕೆಯ ಬಗ್ಗೆ ತಿಳಿದು ಅಂತರ ಕಾಯ್ದುಕೊಂಡಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
2023ರ ಸೆಪ್ಟೆಂಬರ್ 12ರಂದು ಸಂತ್ರಸ್ತೆಯನ್ನು ಆರೋಪಿಯು ಪುಸಲಾಯಿಸಿ ತಮ್ಮ ಸಂಬಂಧದ ಬಗ್ಗೆ ಚರ್ಚಿಸಲು ತಾನಿದ್ದ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದಿದ್ದನು. ಈ ವೇಳೆ ಆತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಇದರಿಂದ ಭಾರಿ ಆಘಾತಕ್ಕೆ ಒಳಗಾಗಿ ಮಣಿಪಾಲ್‌ನ ಕೆಎಂಸಿಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದೇನೆ.
ಆನಂತರ ಔಪಚಾರಿಕವಾಗಿ ಪ್ರಕರಣ ದಾಖಲಿಸುವುದಕ್ಕೂ ಮುನ್ನ ತಾನು ಬೆಂಗಳೂರಿನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ಭೇಟಿ ನೀಡಿದ್ದಾಗಿ ತಿಳಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಆರೋಪಿಯ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 375(a) ಮತ್ತು 376ರ ಅಡಿ ಪ್ರಕರಣ ದಾಖಲಿಸಲಾಗಿದೆ.