ಸರ್ಕಾರ ಮತ್ತು ನ್ಯಾಯಂಗದ ನಡುವೆ ಇರುವ ಬಿಗುವಿನ ವಾತಾವರಣದ ಕುರಿತು ಪ್ರತಿಕ್ರಿಯಿಸುವ ಮೂಲಕ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ತಮ್ಮ ಲಕ್ಷ್ಮಣ ರೇಖೆ ದಾಟಿದ್ದಾರೆ ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಟೈಮ್ಸ್ ನೌ ಸಮಿಟ್- 2022ರಲ್ಲಿ 'ನ್ಯಾಯಾಂಗ ವ್ಯವಸ್ಥೆಯನ್ನು ಮಂದಗತಿಗೆ ದೂಡುತ್ತಿರುವುದು ಏನು?' ಎಂಬ ಕುರಿತು ಸಾಳ್ವೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರೂ ಇದ್ದರು.
ಸಾಳ್ವೆ ಅವರ ಮಾತಿನ ಪ್ರಮುಖಾಂಶಗಳು
ನನ್ನ ಅಭಿಪ್ರಾಯದಲ್ಲಿ ಹೇಳುವುದಾದರೆ ಕಾನೂನು ಸಚಿವರು ಲಕ್ಷ್ಮಣರೇಖೆ ದಾಟಿದ್ದಾರೆ.
ನಿರ್ಲಕ್ಷ್ಯದ ಅಸಾಂವಿಧಾನಿಕ ಕಾನೂನು ಕಂಡಾಗ ಸುಪ್ರೀಂ ಕೋರ್ಟ್ ಅದರ ಕೈ ಹಿಡಿಯಬೇಕು ಅದನ್ನು ತಿದ್ದುಪಡಿ ಮಾಡಲು ಸರ್ಕಾರದ ದಯೆಗೆ ಕಾಯಬೇಕು ಎಂದು ಅವರು (ಸಚಿವರು) ಭಾವಿಸಿದರೆ, ಕ್ಷಮಿಸಿ ಅದು ತಪ್ಪಾಗುತ್ತದೆ.
ನಾನೂ ಕೂಡ ಕೊಲಿಜಿಯಂ ವ್ಯವಸ್ಥೆಯ ಟೀಕಾಕಾರ ಮತ್ತು ಅದು ಮುಂದುವರೆಯುತ್ತದೆ. ಜಗತ್ತಿನ ಯಾವುದೇ ನ್ಯಾಯಾಂಗವು ತನ್ನನ್ನು ತಾನೇ ನೇಮಿಸಿಕೊಳ್ಳುವುದಿಲ್ಲ. ನನ್ನ ಪ್ರಕಾರ ಎನ್‌ಜೆಎಸಿ ಕುರಿತಾದ ತೀರ್ಪು ಆಳದಲ್ಲಿ ದೋಷಪೂರಿತವಾಗಿದೆ. ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ರಾಜಕೀಯ ಅಧಿಕಾರಸ್ಥರು ಯಾವುದೇ ಅಭಿಪ್ರಾಯ ಇರಿಸಿಕೊಳ್ಳಬಾರದು ಎನ್ನುವುದನ್ನು ನಾನು ಒಪ್ಪುವುದಿಲ್ಲ.
ನ್ಯಾಯಾಂಗದ ಒಬ್ಬ ವ್ಯಕ್ತಿಯ ಪ್ರತಿಭೆಯನ್ನು ನಿರ್ಣಯಿಸಲು ನ್ಯಾಯಮೂರ್ತಿಗಳ ವಿಮರ್ಶಾತ್ಮಕ ಸಲಹೆ ಅಗತ್ಯವಿದೆ. ಆದರೆ ನ್ಯಾಯಮೂರ್ತಿಗಳು ಯಾರನ್ನು ನೇಮಕ ಮಾಡಬೇಕೆಂಬುದರ ಬಗ್ಗೆ ಏಕೈಕ ತೀರ್ಪುಗಾರರಾಗಿರಬೇಕು ಎಂಬುದು ಇದರರ್ಥವಲ್ಲ.
ಇಂತಹ ನೇಮಕಾತಿ ಮತ್ತು ವರ್ಗಾವಣೆ ವೇಳೆ ಸಮಸ್ಯೆ ಉದ್ಭವಿಸಿದಾಗಲೆಲ್ಲಾ ಅದನ್ನು ಎದುರಿಸಲು ಸುಪ್ರೀಂ ಕೋರ್ಟ್ ಅಸಮರ್ಥವಾಗುತ್ತದೆ.
“ನ್ಯಾಯಾಂಗವು ತೀರ್ಪುಗಳ ಮೂಲಕ ಮಾತ್ರ ಮಾತನಾಡಬೇಕಾದ ಸಂಸ್ಥೆ. ನ್ಯಾಯಾಧೀಶರು ಅತ್ಯಂತ ಸೂಕ್ಷ್ಮ ಮತ್ತು ಕಷ್ಟಕರ ಪ್ರಕರಣಗಳನ್ನು ಎದುರಿಸಲಿದ್ದು ಅವರು ತಮ್ಮ ತೀರ್ಪುಗಳ ಮೂಲಕ ಧೈರ್ಯದಿಂದ ಮಾತನಾಡುತ್ತಾರೆ. ಹೀಗಾಗಿಯೇ ನ್ಯಾಯಾಧೀಶರ ತೀರ್ಪುಗಳನ್ನು ಟೀಕಿಸಿ ನ್ಯಾಯಾಧೀಶರನ್ನಲ್ಲ ಎಂದು ನಾವು ಹೇಳುತ್ತೇವೆ.
ನೇಮಕಾತಿ ಅಥವಾ ವರ್ಗಾವಣೆಯಲ್ಲಿನ ಭಿನ್ನಾಭಿಪ್ರಾಯಗಳನ್ನು ನ್ಯಾಯಮೂರ್ತಿಗಳು ಸಾರ್ವಜನಿಕವಾಗಿ ತೋರಿಸಿದರೆ ಅದು ಸಾರ್ವಜನಿಕರ ದೃಷ್ಟಿಯಲ್ಲಿ ಅವರ ಗೌರವವನ್ನು ಕಡಿಮೆ ಮಾಡುತ್ತದೆ.
ಇದು (ನ್ಯಾಯಾಧೀಶರ ನೇಮಕಾತಿ) ಮೂಲಭೂತವಾಗಿ ಭಿನ್ನವಾಗಿರಬೇಕಾದ ಪ್ರಕ್ರಿಯೆ. ಈ ಕೆಲಸ ಮಾಡುವ ಸಾಂಸ್ಥಿಕ ಕಾರ್ಯವಿಧಾನವನ್ನು ಸಂಸ್ಥೆ ಕಂಡುಕೊಳ್ಳಬೇಕೇ ವಿನಾ ಅದು ನ್ಯಾಯಾಲಯದ ಕೆಲಸವಲ್ಲ. ಇಲ್ಲದೇ ಹೋದರೆ ನ್ಯಾಯಮೂರ್ತಿಗಳು ತಮ್ಮ ಆಂತರಿಕ ಗೊಂದಲಗಳನ್ನು ಸಾರ್ವಜನಿಕಗೊಳಿಸುತ್ತಾರೆ.
ಎನ್‌ಜೆಎಸಿಯನ್ನು ಉತ್ತಮ, ಹೆಚ್ಚು ಪ್ರಾತಿನಿಧಿಕ ಸಂಸ್ಥೆಯಾಗಿ ರೂಪಿಸಬಹುದು. ಅದನ್ನು ಮಾಡುವ ಮಾರ್ಗ ಎಂದರೆ ಎನ್‌ಜೆಎಸಿ ಕಾನೂನನ್ನು ಮರುಪರಿಶೀಲಿಸುವುದು. ಕಾನೂನ್ನು ಸುಧಾರಿಸಲು ಸಾಧ್ಯವೇ ನೋಡಿ ಸಂಸತ್ತಿನ ಮೂಲಕ ಅದನ್ನು ಮರುಜಾರಿಗೊಳಿಸಿ. ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, ಆಗ ಹಿಂದಿನ ತೀರ್ಪು ಅನ್ವಯಿಸಿದಾಗ ಈ ಹಿಂದೆ ಪ್ರಕರಣವನ್ನು ತಪ್ಪಾಗಿ ಇತ್ಯರ್ಥಪಡಿಸಲಾಗಿದೆ ಎಂದು ವಾದಿಸುವ ಸಂದರ್ಭ ಒದಗಲಿದೆ.
ನ್ಯಾಯಮೂರ್ತಿಗಳನ್ನು ನೇಮಿಸುವ ಸಮಿತಿಯ ರಚನೆ ಮತ್ತು ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ವಿಧಾನವನ್ನು ಸಂಸತ್ತು ಮರುಪರಿಶೀಲಿಸಬಹುದು.