ಕೊಲಿಜಿಯಂ ವ್ಯವಸ್ಥೆಯಲ್ಲಿನ ಪಾರದರ್ಶಕತೆಯ ಕೊರತೆಯ ವಿಚಾರದ ಕುರಿತು ಕೇಂದ್ರ ಸರ್ಕಾರ ಮೌನವಹಿಸುವುದಿಲ್ಲ ಎಂದು ಈಚೆಗೆ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಹೇಳಿಕೆಯ ಬೆನ್ನಿಗೇ ಸುಪ್ರೀಂ ಕೋರ್ಟ್‌ನ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳಾದ ಮದನ್ ಲೋಕೂರ್ ಮತ್ತು ದೀಪಕ್ ಗುಪ್ತ ಅವರು ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಪಾರದರ್ಶಕತೆಯನ್ನು ಪ್ರಶ್ನಿಸಿದ್ದಾರೆ.
ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನ್ಯಾ. ಲೋಕೂರ್ ಅವರು “ನ್ಯಾಯಾಂಗವಲ್ಲ, ಬದಲಿಗೆ ಸರ್ಕಾರ ಸಮಸ್ಯೆ ಸೃಷ್ಟಿಸುತ್ತಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಹಾಲಿ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾದ ದೀಪಂಕರ್ ದತ್ತ ಅವರನ್ನು ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಏನನ್ನೂ ಮಾಡದೇ, ಕಡತವನ್ನು ಹಾಗೆ ಇಟ್ಟುಕೊಂಡಿದೆ. ನ್ಯಾಯಮೂರ್ತಿ ಎಸ್ ಮುರಳೀಧರ್ ಅವರ ವರ್ಗಾವಣೆ ವಿಚಾರದಲ್ಲೂ ಯಾವುದೇ ನಿರ್ಧಾರ ಕೈಗೊಂಡಿಲ್ಲ” ಎಂದು ಹೇಳಿದ್ದಾರೆ.
“ಕೊಲಿಜಿಯಂನಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳಾಗಬೇಕಿದೆ. ಹಾಲಿ ಕೊಲಿಜಿಯಂ ಸದಸ್ಯರು ಎಲ್ಲವನ್ನೂ ಕೂಲಂಕಷವಾಗಿ ಚರ್ಚಿಸಬೇಕು. ಸರ್ಕಾರವು ಕೊಲಿಜಿಯಂನ ಮೇಲೆ ದಾಳಿ ನಡೆಸಿ, ಅದನ್ನು ಬದಲಾಯಿಸುವುದಕ್ಕೂ ಮುನ್ನ ತಕ್ಷಣ ಅದನ್ನು ಮಾಡಬೇಕು. ಕಾನೂನು ಸಚಿವರ ಈಚೆಗಿನ ಹೇಳಿಕೆಯು ಸರ್ಕಾರ ತಕ್ಷಣ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಲಿದೆ ಎಂಬುದರ ಸೂಚನೆಯಾಗಿದೆ” ಎಂದು ಎಚ್ಚರಿಸಿದ್ದಾರೆ.
ನ್ಯಾ. ದೀಪಕ್ ಗುಪ್ತ ಅವರು, “ನ್ಯಾ. ದತ್ತ ಅವರ ಹೆಸರನ್ನು ಸರ್ವಸಮ್ಮತದಿಂದ ಶಿಫಾರಸ್ಸು ಮಾಡಲಾಗಿದೆ. 2006ನೇ ಸಾಲಿನ ನ್ಯಾಯಮೂರ್ತಿಯಾದ ದತ್ತ ಅವರನ್ನು ಮೊದಲಿಗೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗುವುದರಿಂದ ತಪ್ಪಿಸಲಾಯಿತು. ಈ ಮೂಲಕ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗದಂತೆ ತಡೆಯುವ ಉದ್ದೇಶ ಹೊಂದಲಾಗಿದೆ. ಸರ್ಕಾರ ಭಿನ್ನ ನಿಲುವು ತಳೆಯುವ ಹಕ್ಕು ಹೊಂದಿದೆ. ಆದರೆ, ಕೊಲಿಜಿಯಂ ಪ್ರಶ್ನಿಸುವ ಸರ್ಕಾರದ ಭಿನ್ನಾಭಿಪ್ರಾಯವನ್ನು ಎಲ್ಲಿ ದಾಖಲಿಸಲಾಗಿದೆ?” ಎಂದಿದ್ದಾರೆ.
“ಕಡತ ಇಟ್ಟುಕೊಂಡು ಕುಳಿತುಕೊಳ್ಳುವ ಸರ್ಕಾರದ ಹೊಸ ವಿಧಾನವು ಗಂಭೀರ ಹಾನಿ ಮಾಡಲಿದೆ… ತನ್ನದಲ್ಲದ ತಪ್ಪಿಗೆ ಅವರು (ನ್ಯಾ.ದತ್ತ) ಯಾತನೆ ಅನುಭವಿಸುತ್ತಿದ್ದಾರೆ. ಈಗಾಗಲೇ ಶಿಫಾರಸ್ಸು ಮಾಡಲಾಗಿರುವ ನ್ಯಾಯಮೂರ್ತಿಗಳನ್ನು ನೇಮಕ ಮಾಡಿದ ಬಳಿಕ ಹೊಸ ಹೆಸರುಗಳನ್ನು ಶಿಫಾರಸ್ಸು ಮಾಡಲಾಗುವುದು ಎಂದು ಕೊಲಿಜಿಯಂ ಸರ್ಕಾರಕ್ಕೆ ತಿಳಿಸಬೇಕು. ಇಲ್ಲವಾದಲ್ಲಿ ಇದೊಂದು ತರಹದಲ್ಲಿ ಕೊಲಿಜಿಯಂ ಅನ್ನು ಒತ್ತಾಯಕ್ಕೊಳಪಡಿಸುವ ಹೊಸ ವಿಧಾನವಾಗಲಿದೆ. ಈಗಾಗಲೇ ಕಳುಹಿಸಿರುವ ಕಡತಗಳನ್ನು ಉಳಿಸಿಕೊಳ್ಳುತ್ತೇವೆ. ನೀವು ಹೊಸ ಹೊಸ ಹೆಸರುಗಳನ್ನು ಶಿಫಾರಸ್ಸು ಮಾಡಿ ಎಂದಾಗುತ್ತದೆ” ಎಂದರು.
“ಸರ್ಕಾರ ಕಾರ್ಯನಿರ್ವಹಿಸುತ್ತಿರುವ ರೀತಿಯನ್ನು ನೋಡಿದರೆ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸರ್ಕಾರದ ಸಂಪೂರ್ಣ ನಿಯಂತ್ರಣ ಇರುವುದಕ್ಕೆ ಅವಕಾಶ ನೀಡಲಾಗದು. ಇದು ವಿನಾಶಕ್ಕೆ ನಾಂದಿಯಾಗಲಿದೆ” ಎಂದಿದ್ದಾರೆ.