Marriage
Marriage 
ಸುದ್ದಿಗಳು

ದೇಶದ ಕಾನೂನು ಕೇವಲ ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯ ನಡುವಿನ ಮದುವೆಗೆ ಮಾತ್ರ ಮಾನ್ಯತೆ ನೀಡುತ್ತದೆ: ಕೇಂದ್ರ

Bar & Bench

ದೇಶದ ಕಾನೂನಿನಂತೆ ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯ ನಡುವೆ ಮಾತ್ರ ವಿವಾಹ ನಡೆಯಬಹುದು ಎಂದು ಕೇಂದ್ರ ಸರ್ಕಾರ ಸೋಮವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಹಿಂದೂ ವಿವಾಹ ಕಾಯಿದೆಯಂತಹ ವಿವಿಧ ಕಾನೂನುಗಳ ಅಡಿಯಲ್ಲಿ ಸಲಿಂಗ ಮದುವೆ ಅಥವಾ ಇನ್ನಿತರ ಭಿನ್ನ ವಿವಾಹಗಳಿಗೆ ಮನ್ನಣೆ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠದೆದುರು ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಮೇಲಿನಂತೆ ವಾದ ಮಂಡಿಸಿದರು.

ಸಲಿಂಗಿ ದಂಪತಿಗಳ ನಡುವಿನ ಮದುವೆಗೆ ಅನುಮತಿ ಇದೆಯೇ ಎಂಬುದು ಪ್ರಕರಣದ ಅಂಶ ಎಂದು ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು. "ನವತೇಜ್ ಸಿಂಗ್ ಜೋಹರ್ ಪ್ರಕರಣ ಆಧರಿಸಿ ತಪ್ಪು ಕಲ್ಪನೆ ಮೂಡಿಸಲಾಗಿದೆ. ಇದು ಬರೀ ಸಲಿಂಗ ಸಂಬಂಧಗಳನ್ನು ನಿರಪರಾಧೀಕರಣಗೊಳಿಸುತ್ತದೆ. ಮದುವೆಯ ಬಗ್ಗೆ ಮಾತನಾಡುವುದಿಲ್ಲ… (ವಿವಾಹದ ವಿಚಾರದಲ್ಲಿ) ಕಾನೂನು ಇದಾಗಲೇ ಇತ್ಯರ್ಥವಾಗಿದೆ, ವೈಯಕ್ತಿಕ ಕಾನೂನುಗಳು ಇತ್ಯರ್ಥವಾಗಿವೆ. ವಿವಾಹ ಎಂಬುದು ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯ ನಡುವೆ ನಡೆಯುತ್ತದೆ” ಎಂದು ಅವರು ವಿವರಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿರಿಯ ನ್ಯಾಯವಾದಿ ಸೌರಭ್ ಕಿರ್ಪಾಲ್ “ನವತೇಜ್ ಸಿಂಗ್ ಜೋಹರ್ ತೀರ್ಪನ್ನು ಭಿನ್ನ ರೀತಿಯಲ್ಲಿ ಅರ್ಥೈಸಬೇಕಾಗುತ್ತದೆ ಎಂದರು. ಈ ಮಧ್ಯೆ ಇನ್ನೊಬ್ಬ ಅರ್ಜಿದಾರರ ವಾದ ಮಂಡಿಸಿದ ವಕೀಲರಾದ ಕರುಣಾ ನಂದಿ, ತಮ್ಮ ವಾದ ವಿದೇಶಿ ವಿವಾಹ ಕಾಯಿದೆಗೆ ಸಂಬಂಧಿಸಿದ ಭಿನ್ನ ಪ್ರಶ್ನೆಯನ್ನು ಕುರಿತಾದದ್ದು ಎಂದರು. ಸಲಿಂಗ ವಿವಾಹವನ್ನು ಅನುಮತಿಸುವ ದೇಶದಲ್ಲಿ ಮದುವೆಯಾದ ದಂಪತಿ ಭಾರತದಲ್ಲಿ ತಮ್ಮ ವಿವಾಹ ನೋಂದಾಯಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಅವರು ಕೋರಿದರು.

“(ಸಂಗಾತಿ ಅಥವಾ ವಧು ಬೇರೆ ಬೇರೆ ಲಿಂಗಕ್ಕೆ ಸೇರಿರಬೇಕು ಎಂದು) ಪ್ರತ್ಯೇಕಿಸುವ ಅವಶ್ಯಕತೆ ಇಲ್ಲ ಎಂಬುದು ನಮ್ಮ ವಾದ. ಇದಲ್ಲದೆ ನನ್ನ ಅರ್ಜಿ ಬೇರೊಂದು ಪ್ರಶ್ನೆಗೆ ಸಂಬಂಧಿಸಿದ್ದಾಗಿದೆ. (ಸಂಬಂಧಪಟ್ಟ ಕಾನೂನುಗಳ ಅಡಿ) ಜೈವಿಕ ಪುರುಷ ಅಥವಾ ಜೈವಿಕ ಮಹಿಳೆ ಅಥವಾ ವಧು ಇಲ್ಲವೇ ವರ ಎಂದು ಸೂಚಿಸುವ ಯಾವುದೇ ಅವಶ್ಯಕತೆ ಇಲ್ಲ ಎಂದು ನಂದಿ ಹೇಳಿದ್ದಾರೆ.

ಪ್ರತಿವಾದಿಗಳು ಇನ್ನೂ ಮನವಿ ಸಲ್ಲಿಸಬೇಕಾಗಿದೆ ಎಂದು ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತಿಳಿಸಲಾಯಿತು. ಆದರೆ ಮೆಹ್ತಾ ಅವರು ಮನವಿಗಳನ್ನು ಸಲ್ಲಿಸಿಯಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿತು.

"ಈ ಮಧ್ಯೆ ಯಾರಾದರೂ ಪ್ರತಿಕ್ರಿಯೆ ಅಥವಾ ಪ್ರತ್ಯುತ್ತರ ಅರ್ಜಿ ಸಲ್ಲಿಸಲು ಬಯಸಿದರೆ ಅವರು ಹಾಗೆ ಮಾಡಬಹುದು" ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ಐಪಿಸಿ ಸೆಕ್ಷನ್‌ 377ನ್ನು ಅಮಾನ್ಯಗೊಳಿಸಿರುವುದರ ಹೊರತಾಗಿಯೂ ಸಲಿಂಗ ವಿವಾಹ ಮೂಲಭೂತ ಹಕ್ಕು ಅಲ್ಲ ಎಂದು ಕೇಂದ್ರ ಸರ್ಕಾರ ಈ ಹಿಂದೆ ವಾದಿಸಿತ್ತು.