NLAT 
ಕಾನೂನು ಶಾಲೆಗಳು

ಎನ್ಎಲ್ಎಟಿ ಪ್ರವೇಶಾತಿ: ನ್ಯಾಯಾಂಗ ವ್ಯಾಪ್ತಿಗೆ ಒಳಪಡದ ಕಾರಣ ಅರ್ಜಿ ಹಿಂಪಡೆಯುವಂತೆ ಸೂಚಿಸಿದ ಮಧ್ಯಪ್ರದೇಶ ಹೈಕೋರ್ಟ್

ನ್ಯಾಯಾಂಗ ವ್ಯಾಪ್ತಿಗೆ ಒಳಪಡದ ಕಾರಣ ಅರ್ಜಿಯ ವಿಚಾರಣೆ ಸಾಧ್ಯವಿಲ್ಲ, ಅಲ್ಲದೆ, ವ್ಯಾಜ್ಯ ಕಾರಣದ ಮೂಲವೂ ಇಲ್ಲಿಲ್ಲ ಎಂದು ಮಧ್ಯಪ್ರದೇಶ ಹೈಕೊರ್ಟ್ ತಿಳಿಸಿದ್ದು ಸೂಕ್ತ ನ್ಯಾಯಾಲಯದಲ್ಲಿ ಮನವಿಯನ್ನು ಕೋರುವಂತೆ ಸೂಚಿಸಿದೆ.

Bar & Bench

ಕಾನೂನು ಕೋರ್ಸುಗಳಿಗೆ ಪ್ರವೇಶ ಪಡೆಯಲು ಸಿಎಲ್ಎಟಿ ಬದಲಿಗೆ ಎನ್ಎಲ್ಎಟಿ ಪ್ರವೇಶಾತಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ ಕ್ರಮ ಪ್ರಶ್ನಿಸಿ ಅಭ್ಯರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯುವಂತೆ ಮಧ್ಯಪ್ರದೇಶ ಹೈಕೋರ್ಟ್ ಸೂಚಿಸಿದೆ. ಪ್ರಕರಣ ತನ್ನ ನ್ಯಾಯಾಂಗ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ಕಾರಣಕ್ಕೆ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ.

ಸಿಎಲ್ಎಟಿ ಆಕಾಂಕ್ಷಿಯೊಬ್ಬರು ವಕೀಲ ಸೊಮಿತ್ ರೈಜಾದಾ ಅವರ ಮೂಲಕ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಸಂಜಯ್ ಯಾದವ್ ಮತ್ತು ಬಿ.ಕೆ. ಶ್ರೀವಾಸ್ತವ ಅವರಿದ್ದ ನ್ಯಾಯಪೀಠ ಶುಕ್ರವಾರ ಬೆಳಿಗ್ಗೆ ಅರ್ಜಿಯ ವಿಚಾರಣೆ ಆರಂಭಿಸಿತು. ಜಾರ್ಖಂಡ್ ಹೈಕೋರ್ಟ್ ಇದೇ ರೀತಿಯ ಮನವಿಯ ಆದೇಶಗಳನ್ನು ಕಾಯ್ದಿರಿಸಿದೆ ಮತ್ತು ಸುಪ್ರೀಂ ಕೋರ್ಟ್ ಶುಕ್ರವಾರ ಮತ್ತೊಂದು ಮನವಿಯನ್ನು ಆಲಿಸಲಿದೆ ಎಂದು ನ್ಯಾಯಾಲಯಕ್ಕೆ ಎನ್‌ಎಲ್‌ಎಸ್‌ಐಯು ಪರ ವಕೀಲರು ತಿಳಿಸಿದರು.

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಪರವಾಗಿ ಹಾಜರಾದ ಹಿರಿಯ ವಕೀಲ ಸಜನ್ ಪೂವಯ್ಯ ಪ್ರಕರಣಗಳ ಬೆಳವಣಿಗೆ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕಿರುವುದರಿಂದ ವಿಚಾರಣಾ ಪಟ್ಟಿಯ ಕೊನೆಯಲ್ಲಿ ಪ್ರಕರಣವನ್ನು ಪರಿಗಣಿಸುವಂತೆ ಕೋರಿದರು.

ಆದರೆ, ಅರ್ಜಿಯ ನಿರ್ವಹಣೆಯ ಬಗ್ಗೆ ಈಗಾಗಲೇ ಪ್ರಾಥಮಿಕ ಕಚೇರಿ ಆಕ್ಷೇಪಣೆಗಳನ್ನು ದಾಖಲಿಸಲಾಗಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಅರ್ಜಿ ಸ್ವೀಕರಿಸಲು ಅದು ತನ್ನ ವ್ಯಾಪ್ತಿಗೆ ಬರುತ್ತದೆಯೇ ಎಂದು ಪ್ರಶ್ನಿಸಿತು.

"ನೀವು ಪ್ರಕರಣವನ್ನು ಮುಂದುವರೆಸಲು ಬಯಸುತ್ತೀರಾ ಅಥವಾ ಹಿಂಪಡೆದು, ಕರ್ನಾಟಕ ಹೈಕೋರ್ಟಿನಲ್ಲಿ ಅರ್ಜಿ ವಿಚಾರಣೆ ನಡೆಸಲು ಪ್ರಯತ್ನ ಪಡುತ್ತೀರಾ?" ಎಂದು ಕೇಳಿತು. ಅರ್ಜಿದಾರರು ಮಧ್ಯಪ್ರದೇಶ ಹೈಕೋರ್ಟಿನಲ್ಲಿಯೇ ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ಆದರೆ ಕೋರ್ಟ್ ಇದಕ್ಕೆ ಸಮ್ಮತಿ ನೀಡಲಿಲ್ಲ. ಬದಲಿಗೆ ಸೂಕ್ತ ನ್ಯಾಯಾಲಯದಲ್ಲಿ ಮನವಿ ಸಲ್ಲಿಸುವಂತೆ ಸೂಚಿಸಿತು. ಅಲ್ಲದೆ ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡುವವರೆಗೆ ಪ್ರಕರಣವನ್ನು ಬಾಕಿ ಉಳಿಸುವಂತೆ ಅರ್ಜಿದಾರರು ಮಾಡಿದ ಮನವಿಯನ್ನು ಕೂಡ ಕೋರ್ಟ್ ನಿರಾಕರಿಸಿತು.

ಅಲ್ಲದೆ, ಮಧ್ಯಪ್ರದೇಶದಲ್ಲಿ ವ್ಯಾಜ್ಯಕ್ಕೆ ಸಂಬಂಧಿಸಿದ ಕಾರಣವು ತಲೆದೋರದೆ ಇರುವುದರಿಂದ (ಕಾಸ್‌ ಆಫ್‌ ಆಕ್ಷನ್‌) ತಾನು ಮನವಿಯನ್ನು ಪುರಸ್ಕರಿಸಲಾಗದು ಎಂದೂ ಪೀಠವು ಅಭಿಪ್ರಾಯಪಟ್ಟಿತು.

ಕಾನೂನು ಶಾಲೆಯ ಮಾಜಿ ಉಪಕುಲಪತಿ, ಪ್ರೊ ವೆಂಕಟ ರಾವ್ ಮತ್ತು ಪ್ರವೇಶಾತಿ ಸಂಬಂಧ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟಿನ ತ್ರಿಸದಸ್ಯರ ಪೀಠ ಇಂದು (ಶುಕ್ರವಾರ) ನಡೆಸಲಿದೆ.

ಈ ಮಧ್ಯೆ ನ್ಯಾಯಾಂಗ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ಕಾರಣಕ್ಕೆ ಜಾರ್ಖಂಡ್ ಹೈಕೋರ್ಟಿಗೆ ಸಲ್ಲಿಸಲಾಗಿದ್ದ ಅರ್ಜಿ ಇಂದು (ಶುಕ್ರವಾರ) ಬೆಳಗ್ಗೆ ವಜಾಗೊಂಡಿದೆ.