ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ ರಾಷ್ಟ್ರಮಟ್ಟದಲ್ಲಿ ಪ್ರತ್ಯೇಕ ಕಾನೂನು ಪ್ರವೇಶ ಪರೀಕ್ಷೆ ನಡೆಸಲು (ಎನ್ಎಲ್ಎಟಿ 2020) ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಆದರೆ, ಪರೀಕ್ಷೆಯ ಫಲಿತಾಂಶ ನ್ಯಾಯಾಲಯದ ಅಂತಿಮ ತೀರ್ಮಾನದ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಶಾ ಅವರಿದ್ದ ನ್ಯಾಯಪೀಠ ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿತು.
ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ 2020) ವಿಳಂಬವಾದ ಕಾರಣ ಈ ವರ್ಷ ಪ್ರತ್ಯೇಕ ಕಾನೂನು ಪ್ರವೇಶ ಪರೀಕ್ಷೆ ನಡೆಸಲು ಕಾನೂನು ಶಾಲೆ ತೀರ್ಮಾನಿಸಿತ್ತು. ಇದನ್ನು ಪ್ರಶ್ನಿಸಿ ಕಾನೂನು ಶಾಲೆಯ ಮಾಜಿ ಉಪಕುಲಪತಿ ಪ್ರೊ. ವೆಂಕಟರಾವ್ ಅವರು ಪೋಷಕರೊಡನೆ ಇತ್ತೀಚೆಗೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಕಾನೂನು ಶಾಲೆಯ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವ ನಿರ್ಧಾರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟದ ನಿಯಮಾವಳಿಗಳ ಉಲ್ಲಂಘನೆಯಾಗುತ್ತದೆ ಎಂದು ಹಿರಿಯ ವಕೀಲ ನಿಧೇಶ್ ಗುಪ್ತಾ ಅವರು ವಾದಿಸಿದರು. ಕಾನೂನು ಶಾಲೆಯು ಎನ್‌ಎಲ್‌ಯು ಒಕ್ಕೂಟದ ಭಾಗವಾಗಿದೆ ಎಂದು ಗುಪ್ತಾ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಕಾನೂನು ಶಾಲೆಯ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅರವಿಂದ ದಾತಾರ್ ಶನಿವಾರ ಪರೀಕ್ಷೆ ನಡೆಯುತ್ತಿರುವ ವಿಚಾರವನ್ನು ತಿಳಿಸಿದರು. ಒಂದು ಹಂತದಲ್ಲಿ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವ ಹಿಂದಿನ ಕಾರಣವನ್ನು ವಿವರಿಸಿದರು.
"ಸೆಪ್ಟೆಂಬರ್ ವೇಳೆಗೆ ಪ್ರವೇಶ ಪೂರ್ಣಗೊಳ್ಳದಿದ್ದರೆ, 120 ಪದವಿ ವಿದ್ಯಾರ್ಥಿಗಳು ಮತ್ತು ಇತರೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗದೇ ಸಂಸ್ಥೆ (ಕಾನೂನು ಶಾಲೆ) 16 ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಬೇಕಾಗುತ್ತದೆ”ವಕೀಲ ಅರವಿಂದ ದಾತಾರ್
ಈ ವರ್ಷಕ್ಕೆ ಮಾತ್ರ ಈ ಪರೀಕ್ಷೆ ನಡೆಸಲಾಗುತ್ತಿದ್ದು ಮುಂದಿನ ವರ್ಷ ಮತ್ತೆ ಸಿಎಲ್ಎಟಿ ಪರೀಕ್ಷೆ ನಡಾವಳಿಯಲ್ಲಿ ಕಾನೂನು ಶಾಲೆ ಭಾಗಿಯಾಗುವುದಾಗಿ ದಾತಾರ್ ಕೋರ್ಟಿಗೆ ಭರವಸೆ ನೀಡಿದರು.
ಆಗ ನ್ಯಾಯಮೂರ್ತಿ ಭೂಷಣ್,
"ನೀವು ಈಗಾಗಲೇ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದ್ದೀರಿ. ವಿದ್ಯಾರ್ಥಿಗಳು ಸಿದ್ಧರಾಗಿದ್ದಾರೆ. ಪರೀಕ್ಷೆ ಆಯೋಜಿಸಿ. ಆದರೆ ವಿಚಾರಣೆಯ ಪೂರ್ಣಗೊಳ್ಳುವವರೆಗೆ ಯಾವುದೇ ಫಲಿತಾಂಶ ಘೋಷಿಸುವಂತಿಲ್ಲ” ಎಂದರು.
ನ್ಯಾಯಮೂರ್ತಿ ಎಂ ಆರ್ ಷಾ ಅವರು "ಎನ್ಎಲ್ಎಟಿ ಫಲಿತಾಂಶ ನ್ಯಾಯಾಲಯದ ವಿಚಾರಣೆಯ ವ್ಯಾಪ್ತಿಗೆ ಒಳಪಡುತ್ತದೆ" ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದರು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಸುಘೋಷ್ ಸುಬ್ರಮಣ್ಯಂ ಹಾಗೂ ವಿಪಿನ್ ನಾಯರ್ ಕಾನೂನು ಶಾಲೆಯ ಉಪಕುಲಪತಿ ಸುಧೀರ್ ಕೃಷ್ಣಸ್ವಾಮಿ ಅವರು ಕೈಗೊಂಡ ನಿರ್ಧಾರದಿಂದಾಗಿ ‘ಶ್ರೇಷ್ಠತೆಯ ನೆಲೆ’ ಎಂದು ಹೆಸರಾದ ಕಾನೂನು ಶಾಲೆ ‘ಪ್ರತ್ಯೇಕತೆಯ ನೆಲೆ’ಯಾಗಿ ಬಿಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಎನ್‌ಎಲ್‌ಯು ಒಕ್ಕೂಟದನ ಪರವಾಗಿ ಹಿರಿಯ ವಕೀಲ ಪಿ.ಎಸ್.ನರಸಿಂಹ ವಾದ ಮಂಡಿಸಿದರು,
"ಎಲ್ಲಾ ಕಾನೂನು ವಿಶ್ವವಿದ್ಯಾಲಯಗಳು ತಮ್ಮದೇ ಆದ ಪರೀಕ್ಷೆ ನಡೆಸಲಾರಂಭಿಸಿದ್ದವು. ನ್ಯಾಯಾಲಯ ಈ ವಿಷಯವನ್ನು ಪರಿಗಣಿಸಿತು, [ನಂತರ] ಒಕ್ಕೂಟ ಸ್ಥಾಪಿಸಲಾಯಿತು. ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಈ ಸಮಸ್ಯೆಯನ್ನು ಪರಿಶೀಲಿಸಿ ಇದನ್ನು ಸಾಂಸ್ಥೀಕರಣಗೊಳಿಸಲು ಪ್ರಯತ್ನಿಸಿದ್ದರು."ಪಿ.ಎಸ್.ನರಸಿಂಹ, ಎನ್ ಎಲ್ ಯು ಪರ ವಕೀಲ
ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಮೂರು ದಿನಗಳಲ್ಲಿ ತಮ್ಮ ಅಹವಾಲು ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ ಸೆ.16ಕ್ಕೆ ವಿಚಾರಣೆ ನಿಗದಿಪಡಿಸಿತು.