Murder 
ಸುದ್ದಿಗಳು

ವಕೀಲ ಅಮಿತ್‌ ಕೊಲೆ: ರಾಜೇಶ್‌ ಗೌಡಗೆ ಜೀವಾವಧಿ ಶಿಕ್ಷೆ, ₹ 1 ಲಕ್ಷ ದಂಡ ವಿಧಿಸಿದ ಬೆಂಗಳೂರು ಗ್ರಾಮಾಂತರ ನ್ಯಾಯಾಲಯ

ದೋಷಿ ರಾಜೇಶ್‌ಗೆ ಐಪಿಸಿ ಸೆಕ್ಷನ್‌ 302ರ ಅಡಿಯಲ್ಲಿ ಜೀವಾವಧಿ ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ 30ರ ಅಡಿಯಲ್ಲಿ 4 ತಿಂಗಳ ಜೈಲು ಶಿಕ್ಷೆ ಹಾಗೂ ₹ 2 ಸಾವಿರ ದಂಡ ವಿಧಿಸಿ ಆದೇಶಿಸಿದ ನ್ಯಾಯಾಲಯ.

Bar & Bench

ನೆಲಮಂಗಲದ ವಕೀಲ ಕೇಶವಮೂರ್ತಿ ಅವರ ಪುತ್ರ ವಕೀಲ ಅಮಿತ್‌ ಕೇಶವಮೂರ್ತಿ ಕೊಲೆ ಪ್ರಕರಣದಲ್ಲಿ ದೋಷಿ ರಾಜೇಶ್‌ ಗೌಡಗೆ ಜೀವಾವಧಿ ಶಿಕ್ಷೆ ಮತ್ತು ₹ 1 ಲಕ್ಷ ದಂಡ ವಿಧಿಸಿ ಬೆಂಗಳೂರಿನ ಗ್ರಾಮಾಂತರ ನ್ಯಾಯಾಲಯ ಗುರುವಾರ ಆದೇಶ ಪ್ರಕಟಿಸಿದೆ.

ನಿನ್ನೆ ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಹೊಸಮನಿ ಪುಂಡಲೀಕ ಅವರು ಇಂದು ಶಿಕ್ಷೆ ಪ್ರಕಟಿಸಿದರು.

ದೋಷಿ ರಾಜೇಶ್‌ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 302ರ ಅಡಿಯಲ್ಲಿ ಜೀವಾವಧಿ ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್‌ 30ರ ಅಡಿಯಲ್ಲಿ 4 ತಿಂಗಳ ಸಾಧಾರಣ ಜೈಲು ಶಿಕ್ಷೆ ಹಾಗೂ ₹ 2 ಸಾವಿರ ದಂಡ ವಿಧಿಸಲಾಗಿದೆ. ₹ 1 ಲಕ್ಷ ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷ ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಲಾಗಿದೆ.

ಪ್ರಕರಣದ ತನಿಖೆ ನಡೆಸಿದ್ದ ಸರ್ಕಲ್ ಇನ್ ಸ್ಪೆಕ್ಟರ್ ಜಿ. ಪ್ರವೀಣ್ ಬಾಬು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ವಿಶೇಷ ಅಭಿಯೋಜಕರಾಗಿ ಹಿರಿಯ ವಕೀಲ ಸಿ ಎಚ್ ಹನುಮಂತರಾಯ ವಾದ ಮಂಡಿಸಿದ್ದರು.

ಏನಿದು ಘಟನೆ: ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆಚಾರ್ಯ ಎಂಜಿನಿಯರಿಂಗ್ ಕಾಲೇಜು ಬಳಿ 2017ರ ಜನವರಿ 13ರಂದು ಮಧ್ಯಾಹ್ನ 3.15ರ ಸಮಯದಲ್ಲಿ ಅಮಿತ್‌ ಕೇಶವಮೂರ್ತಿ ಅವರು ಆರೋಪಿ ರಾಜೇಶ್‌ ಅವರ ಪತ್ನಿ ಪಿಡಿಒ ಶ್ರುತಿಗೌಡ ಅವರೊಂದಿಗೆ ಸ್ವಿಫ್ಟ್ ಕಾರಿನಲ್ಲಿ ಕುಳಿತಿದ್ದರು. ಶ್ರುತಿ ಗೌಡ ಅವರಿಗೆ ಸೇರಿದ ಈ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ರಾಜೇಶ್, ಕಾರಿನ ಬಾಗಿಲು ತೆರೆದು ತಮ್ಮ ಬಳಿ ಇದ್ದ ಪಿಸ್ತೂಲಿನಿಂದ ಅಮಿತ್‌ ಮೇಲೆ ಏಕಾಏಕಿ ಗುಂಡು ಹಾರಿಸಿ ಕೊಂದಿದ್ದರು. ಶ್ರುತಿ ಗೌಡ ಅವರ ನಡೆ ಮತ್ತು ಚಟುವಟಿಕೆಗಳ ಮೇಲೆ ಸದಾ ಸಂಶಯ ವ್ಯಕ್ತಪಡಿಸುತ್ತಿದ್ದ ರಾಜೇಶ್‌, ಶ್ರುತಿ ಬಳಸುವ ಕಾರಿಗೆ ಜಿಪಿಎಸ್‌ ಅಳವಡಿಸಿ ಅದರ ಮುಖಾಂತರ ಅವರಿದ್ದ ಸ್ಥಳಕ್ಕೆ ಹಿಂಬಾಲಿಸಿಕೊಂಡು ಬಂದಿದ್ದರು. ಅಮಿತ್‌ ಮೃತಪಟ್ಟ ಸುದ್ದಿ ತಿಳಿದ ನಂತರ ಶ್ರುತಿಗೌಡ ಲಾಡ್ಜ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ. ಈ ಪ್ರಕರಣದ ಮತ್ತೊಬ್ಬ ಆರೋಪಿಯಾಗಿದ್ದ ರಾಜೇಶ್‌ ತಂದೆ ಗೋಪಾಲಕೃಷ್ಣ (82) ವಿಚಾರಣೆಗೂ ಮುನ್ನವೇ ಸಾವನ್ನಪ್ಪಿದ್ದರು.