Monkey attack SC 
ಸುದ್ದಿಗಳು

ವಾನರ ದಾಳಿ: ಸುಪ್ರೀಂ ಕೋರ್ಟ್ ಕ್ಲಿನಿಕ್‌ನಲ್ಲಿ ಔಷಧ ದೊರೆಯದ ಬಗ್ಗೆ ವಕೀಲೆ ಕಳವಳ

ಆಕೆ ಪ್ರಥಮ ಚಿಕಿತ್ಸೆ ಪಡೆಯಲೆಂದು ಸುಪ್ರೀಂ ಕೋರ್ಟ್‌ ಚಿಕಿತ್ಸಾಲಯಕ್ಕೆ ಬಂದಾಗ ಅದರ ನವೀಕರಣ ಕಾಮಗಾರಿ ನಡೆಯುತ್ತಿರುವುದು ತಿಳಿದುಬಂತು.

Bar & Bench

ಸುಪ್ರೀಂ ಕೋರ್ಟ್‌ ಆವರಣದಲ್ಲಿ ಗುರುವಾರ ವಕೀಲೆಯೊಬ್ಬರ ಮೇಲೆ ಕೋತಿಗಳು ದಾಳಿ ನಡೆಸಿದ್ದು ಅಲ್ಲೇ ಇದ್ದ ಚಿಕಿತ್ಸಾಲಯದಲ್ಲಿ ಅವರಿಗೆ ಸೂಕ್ತ ಔಷಧ ದೊರೆಯದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಯಿತು.

ನ್ಯಾಯವಾದಿ ಎಸ್ ಸೆಲ್ವಕುಮಾರಿ ಅವರು ಉನ್ನತ ನ್ಯಾಯಾಲಯದ ವಸ್ತುಸಂಗ್ರಹಾಲಯದ ಪಕ್ಕದಲ್ಲಿರುವ ಗೇಟ್ ನಂ. ಜಿ ಮೂಲಕ ಪ್ರವೇಶಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಕೋತಿಗಳ ಗುಂಪೊಂದು ಅವರೆಡೆಗೆ ನುಗ್ಗಿತು, ಈ ವೇಳೆ ಕೋತಿಯೊಂದು ಅವರ ಬಲತೊಡೆಯನ್ನು ಕಚ್ಚಿತು.

ಆಕೆ ಪ್ರಥಮ ಚಿಕಿತ್ಸೆ ಪಡೆಯಲೆಂದು ಸುಪ್ರೀಂ ಕೋರ್ಟ್‌ನ ಚಿಕಿತ್ಸಾಲಯಕ್ಕೆ ಬಂದಾಗ ಅದರ ನವೀಕರಣ ಕಾಮಗಾರಿ ನಡೆಯುತ್ತಿರುವುದು ತಿಳಿದುಬಂತು.   

ವಕೀಲೆಯನ್ನು ಆಕೆಯ ಸ್ನೇಹಿತರು ರಿಜಿಸ್ಟ್ರಾರ್ ನ್ಯಾಯಾಲಯದ ಬಳಿ ಇರುವ ಪಾಲಿಕ್ಲಿನಿಕ್‌ಗೆ ಕರೆದೊಯ್ದರಾದರೂ ಅಲ್ಲಿಯೂ ಅವರಿಗೆ ಔಷಧಗಳು ದೊರೆಯಲಿಲ್ಲ. ಪಾಲಿ ಕ್ಲಿನಿಕ್‌ನ ಕೆಲ ವೈದ್ಯರು ಆಕೆಯ ಗಾಯ ಸ್ವಚ್ಛಗೊಳಿಸಿದರಾದರೂ ಪ್ರಥಮ ಚಿಕಿತ್ಸೆ ಔಷಧಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದರು.   

ನಂತರ ದೆಹಲಿ ಹೈಕೋರ್ಟ್‌ ಚಿಕಿತ್ಸಾಲಯಕ್ಕೆ ಅವರನ್ನು ಕರೆದೊಯ್ದು ಚುಚ್ಚುಮದ್ದು ನೀಡಲಾಯಿತು. ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಖಾಯಂ ಸದಸ್ಯೆಯೂ ಆಗಿರುವ ಆಕೆ ಕೋತಿಗಳನ್ನು ಓಡಿಸಲು ಸಿಬ್ಬಂದಿ ಇಲ್ಲದಿರುವ ಹಾಗೂ ಕ್ಲಿನಿಕ್‌ನಲ್ಲಿ ಕನಿಷ್ಠ ಔಷಧ ವ್ಯವಸ್ಥೆ ಇಲ್ಲದಿರುವುದನ್ನು ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಹಂಚಿಕೊಂಡಿದ್ದಾರೆ.