Rajasthan HC,  Jodhpur bench
ಸುದ್ದಿಗಳು

ನ್ಯಾಯಮೂರ್ತಿಗಳನ್ನು ಹಿಂದೆ ಸರಿಯಲು ಅಥವಾ ಪ್ರಕರಣವನ್ನು ವರ್ಗಾಯಿಸಲು ವಕೀಲರು ಒತ್ತಾಯಿಸಲಾಗದು: ರಾಜಸ್ಥಾನ ಹೈಕೋರ್ಟ್

ಪ್ರಕರಣವನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸುವಂತೆ ಕೋರಿದ ವಕೀಲರ ನಡವಳಿಕೆಗೆ ನ್ಯಾ. ವಿಜಯ್ ಬಿಷ್ಣೋಯ್ ಅಸಮಾಧಾನ ವ್ಯಕ್ತಪಡಿಸಿದರು.

Bar & Bench

ನ್ಯಾಯಮೂರ್ತಿಗಳು ಪ್ರಕರಣದಿಂದ ಹಿಂದೆ ಸರಿಯಬೇಕು ಅಥವಾ ಪ್ರಕರಣವನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸಬೇಕು ಎಂದು ವಕೀಲರು ಒತ್ತಾಯಿಸುವಂತಿಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಬುಧವಾರ ಹೇಳಿದೆ [ಮಾ. ಅರ್ಜುನ್ ಚೌಧರಿ ಮತ್ತು ಅಧ್ಯಕ್ಷರ ನಡುವಣ ಪ್ರಕರಣ].

ಪ್ರಕರಣವನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸುವಂತೆ ಕೋರಿದ ವಕೀಲೆ ಆರತಿ ಕುಮಾರಿ ಗುಪ್ತಾ ಅವರ ನಡೆಗೆ ನ್ಯಾಯಮೂರ್ತಿ ವಿಜಯ್ ಬಿಷ್ಣೋಯ್ ಅಸಮಾಧಾನ ವ್ಯಕ್ತಪಡಿಸಿದರು. ವಕೀಲರ ನಡವಳಿಕೆ ಅತ್ಯಂತ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಎಂದು ಏಕಸದಸ್ಯ ಪೀಠ ತಿಳಿಸಿತು.

ನ್ಯಾಯಾಲಯ ಇಂದು ಹೆಚ್ಚು ಪ್ರಕರಣಗಳನ್ನು ವಿಚಾರಣೆ ನಡೆಸಬೇಕಿರುವುದರಿಂದ ಪ್ರಕರಣವನ್ನು ಬೇರೊಂದು ಪೀಠಕ್ಕೆ ವರ್ಗಾಯಿಸಬೇಕೆಂದು ನ್ಯಾಯಾಲಯದ ಕಲಾಪ ಆರಂಭವಾಗುವ ವೇಳೆ ವಕೀಲೆ ಕೋರಿದ ಹಿನ್ನೆಲೆಯಲ್ಲಿ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಪ್ರಕರಣದ ವಿಚಾರಣೆಯ ಸಮಯ ಬಂದಾಗ ಅದನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಮೂರ್ತಿ ಬಿಷ್ಣೋಯ್ ಮನವರಿಕೆ ಮಾಡಿಕೊಡಲು ಯತ್ನಿಸಿದರೂ ವಕೀಲೆ ಬೇರೊಂದು ಪೀಠಕ್ಕೆ ಪ್ರಕರಣ ವರ್ಗಾಯಿಸಬೇಕು ಎಂಬ ತಮ್ಮ ವಾದವನ್ನು ಮುಂದುವರೆಸಿದರು. ಪ್ರಕರಣದ ಕುರಿತು ನ್ಯಾಯಾಲಯ ಮೌಖಿಕವಾಗಿ ಟೀಕೆ ಮಾಡಿದೆ ಎಂದು ವಕೀಲರು ಹೇಳಿದಾಗ ಪೀಠ “ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವಂತೆ ವಕೀಲರು ನ್ಯಾಯಾಲಯವನ್ನು ಒತ್ತಾಯಿಸಲು ಸಾಧ್ಯವಿಲ್ಲ" ಎಂದಿತು. ಇದರ ಹೊರತಾಗಿ ವಕೀಲರ ನಡೆ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡದೆ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠದೆದುರು ಪ್ರಸ್ತಾಪಿಸುವಂತೆ ಸೂಚಿಸಿತು.