ಪೊಲೀಸ್ ಅಧಿಕಾರಿ
ಪೊಲೀಸ್ ಅಧಿಕಾರಿ 
ಸುದ್ದಿಗಳು

ನಮಾಜ್ ಮಾಡುತ್ತಿದ್ದವರಿಗೆ ಥಳಿತ: ಡಿಸಿಪಿ ವರದಿ ಕೇಳಿದ ದೆಹಲಿ ನ್ಯಾಯಾಲಯ

Bar & Bench

ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಗಳ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಶನಿವಾರ ಸಂಬಂಧಪಟ್ಟ ಜಿಲ್ಲಾ ಪೊಲೀಸ್ ಆಯುಕ್ತರ (ಡಿಸಿಪಿ) ವರದಿ ಕೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 1ರೊಳಗೆ ಕ್ರಮ ಕೈಗೊಂಡ ಕುರಿತ ವರದಿ ಸಲ್ಲಿಸುವಂತೆ ತೀಸ್ ಹಜಾರಿ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮನೋಜ್ ಕೌಶಲ್ ಅವರು ಆದೇಶಿಸಿದ್ದಾರೆ.

ದೆಹಲಿಯ ಮಕ್ಕಿ ಜಾಮಾ ಮಸೀದಿ ಬಳಿಯ ಇಂದರ್‌ಲೋಕ್‌ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರಿಗೆ ಸಬ್ ಇನ್‌ಸ್ಪೆಕ್ಟರ್‌ (ಎಸ್ಐ) ಮನೋಜ್ ತೋಮರ್ ಥಳಿಸುವ ದೃಶ್ಯ ವಿಡಿಯೋ ವೈರಲ್ ಆಗಿತ್ತು.

ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಜನರನ್ನು ಒದೆಯುುತ್ತಾ, ತಳ್ಳುತ್ತಾ ಹಾಗೂ ಕೂಗುತ್ತಾ ಪ್ರಾರ್ಥನೆಗೆಂದು ಬಳಸುತ್ತಿದ್ದ ಚಾಪೆಯನ್ನು ತುಳಿಯುತ್ತಾ ಸಾಗುವುದು ಕಂಡುಬಂದಿತ್ತು.

ವ್ಯಾಪಕ ಪ್ರತಿಭಟನೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎಸ್ಐಯನ್ನು ಮಾರ್ಚ್ 8ರಂದು ಅಮಾನತುಗೊಳಿಸಲಾಗಿತ್ತು.

ಘಟನೆಯ ಬಗ್ಗೆ ಪ್ರಸ್ತುತ ತನಿಖೆ ನಡೆಯುತ್ತಿದೆ. ಈ ಬೆಳವಣಿಗೆ ಮೂಲಭೂತ ಹಕ್ಕುಗಳ ಉಲ್ಲಂಘನೆ. ಅಲ್ಲದೆ ಆರೋಪಿಗಳು ಮತ್ತವರ ತಂಡ ಸಮಾಜದ ಸಾಮರಸ್ಯ ಮತ್ತು ಶಾಂತಿಯನ್ನು ಭಂಗಗೊಳಿಸಿದೆ ಎಂದು ದೂರುದಾರ ವಕೀಲ ಫರಾಜ್ ಖಾನ್ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಕುರಿತು ವರದಿ ಸಲ್ಲಿಸುವಂತೆ ನ್ಯಾಯಾಲಯ ಅಂತಿಮವಾಗಿ ಸೂಚಿಸಿದೆ.