<div class="paragraphs"><p>City Civil Court and K M Jagadesh Kumar</p></div>

City Civil Court and K M Jagadesh Kumar

 
ಸುದ್ದಿಗಳು

ಜಾತಿ ನಿಂದನೆ ಪ್ರಕರಣದಲ್ಲಿ ವಕೀಲ ಜಗದೀಶ್‌ಗೆ ಜಾಮೀನು; ನಾಳೆ ಜೈಲಿನಿಂದ ಬಿಡುಗಡೆ

Bar & Bench

ವಕೀಲ ಕೆ ಎಂ ಜಗದೀಶ್‌ ಕುಮಾರ್‌ ಅಲಿಯಾಸ್‌ ಜಗದೀಶ್‌ ಮಹದೇವ್‌ ಅವರಿಗೆ ಜಾತಿ ನಿಂದನೆ ಪ್ರಕರಣದಲ್ಲಿ ಸೋಮವಾರ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಮಾರ್ಚ್‌ 5ರಂದು ಜಗದೀಶ್‌ ಅವರಿಗೆ ಜಾಮೀನು ದೊರೆತಿರುವುದರಿಂದ ಅವರು ನಾಳೆ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ.

ಜಗದೀಶ್‌ ಅವರ ವಿರುದ್ದದ ಜಾತಿ ನಿಂದನೆ ಪ್ರಕರಣದ ಜಾಮೀನು ಮನವಿಯ ವಿಚಾರಣೆ ನಡೆಸಿ, ಶನಿವಾರ ಆದೇಶ ಕಾಯ್ದಿರಿಸಿದ್ದ 68ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಕಾಶಿಂ ಚೂರಿಖಾನ್‌ ಅವರು ಇಂದು ಜಾಮೀನು ಮನವಿಯನ್ನು ಪುರಸ್ಕರಿಸಿದರು. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ನಿವಾಸಿಯಾದ ಮುತ್ತಯ್ಯ ಎಂಬವರು ಫೆಬ್ರವರಿ 14ರಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯಿದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಕೊಡಿಗೇಹಳ್ಳಿ ಠಾಣೆಯಲ್ಲಿ ಜಗದೀಶ್‌ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಜಗದೀಶ್‌ ಅವರ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್‌ನಲ್ಲಿ ವಕೀಲ ನಾರಾಯಣ ಸ್ವಾಮಿ ದೂರು ನೀಡಿದ್ದರು. ಇದನ್ನು ಆಧರಿಸಿ ಫೆಬ್ರವರಿ 13ರಂದು ಪೊಲೀಸರು ಜಗದೀಶ್‌ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಮಾರ್ಚ್‌ 5ರಂದು ಅವರಿಗೆ ಜಾಮೀನು ದೊರೆತಿದೆ.

ಬೆಂಗಳೂರಿನ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಆಯುಕ್ತರ ಸಹಾಯಕ ಸಿಬ್ಬಂದಿ ರಮೇಶ್‌ ಎಂಬವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆಯೊಡ್ಡಿದ ಆರೋಪದ ಹಿನ್ನೆಲೆಯಲ್ಲಿ ರಮೇಶ್‌ ಅವರ ಪರವಾಗಿ ಪೊಲೀಸ್‌ ಸಿಬ್ಬಂದಿ ನಾಗರಾಜ್‌ ಕೇನಿಕರ್‌ ಅವರು ನೀಡಿದ ದೂರು ಆಧರಿಸಿ ಫೆಬ್ರವರಿ 13ರಂದು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಜಗದೀಶ್‌ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 506, 290, 353ರ ಅಡಿ ಇನ್ನೊಂದು ಪ್ರಕರಣ ದಾಖಲಿಸಲಾಗಿದೆ.

“ಎರಡು ಪ್ರಕರಣಗಳಲ್ಲಿ ಜಗದೀಶ್‌ ಅವರಿಗೆ ಜಾಮೀನು ದೊರೆತಿದೆ. ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ. ಸದರಿ ಪ್ರಕರಣದಲ್ಲಿ ಬಾಡಿ ವಾರೆಂಟ್‌ ಜಾರಿ ಮಾಡಲಾಗಿಲ್ಲ. ಹೀಗಾಗಿ, ಅವರ ಬಂಧನವಾಗುವುದಿಲ್ಲ. ತಾಂತ್ರಿಕ ಪ್ರಕ್ರಿಯೆಗಳು ಮುಗಿದು ಜಗದೀಶ್‌ ಅವರು ಮಂಗಳವಾರ ಜೈಲಿನಿಂದ ಹೊರಬರಲಿದ್ದಾರೆ. ಬಳಿಕ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರುತ್ತೇವೆ” ಎಂದು ಜಗದೀಶ್‌ ಪರ ವಕೀಲ ಹರೀಶ್‌ ಪ್ರಭು ಅವರು “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದ್ದಾರೆ.