ಸುದ್ದಿಗಳು

ವಕೀಲೆ ಜೀವಾ ಆತ್ಮಹತ್ಯೆ: ಸಿಬಿಐ ಅಧಿಕಾರಿ ವರ್ಮಾ ಒಳಗೊಂಡ ಎಸ್‌ಐಟಿಗೆ ತಕ್ಷಣ ತನಿಖೆ ಆರಂಭಿಸಲು ಹೈಕೋರ್ಟ್‌ ನಿರ್ದೇಶನ

ಯಾವ ಅಧಿಕಾರಿಯೂ ಮತ್ತೊಬ್ಬರ ಅಧೀನದಲ್ಲಿ ಕೆಲಸ ಮಾಡುವುದಿಲ್ಲ. ಇದೇನೂ ತಿರುಪತಿ ಲಡ್ಡು ವಿವಾದದಷ್ಟು ದೊಡ್ಡ ಪ್ರಕರಣವಲ್ಲ. ಮೂವರು ಪೊಲೀಸ್‌ ವರಿಷ್ಠಾಧಿಕಾರಿಗಳೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದಿರುವ ಹೈಕೋರ್ಟ್‌.

Bar & Bench

ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿಗಳ ಅವ್ಯವಹಾರ ಪ್ರಕರಣದ ಆರೋಪಿಯಾಗಿದ್ದ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಯ ಜೊತೆ ಇಬ್ಬರು ಪೊಲೀಸ್‌ ವರಿಷ್ಠಾಧಿಕಾರಿ ಶ್ರೇಣಿಯ ಪೊಲೀಸ್‌ ಅಧಿಕಾರಿಗಳ ಎಸ್ಐಟಿ ನೇಮಕ ಮಾಡಿದ್ದ ತನ್ನ ಈ ಹಿಂದಿನ ಆದೇಶವನ್ನು ಹೈಕೋರ್ಟ್‌ ಅಧಿಕೃತಗೊಳಿಸಿದ್ದು, ಕೂಡಲೇ ತನಿಖೆ ಆರಂಭಿಸುವಂತೆ ಎಸ್‌ಐಟಿಗೆ ನಿರ್ದೇಶಿಸಿದೆ.

ರಾಜ್ಯ ಪ್ರಾಸಿಕ್ಯೂಷನ್‌ ತೆಗೆದಿದ್ದ ತಕರಾರನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಮಂಗಳವಾರ ಪರಿಶೀಲಿಸಿತಲ್ಲದೆ, ಹೈಕೋರ್ಟ್‌ ನೀಡಿರುವ ಆದೇಶವನ್ನು ಸಿಬಿಐ ಸಂಪೂರ್ಣ ಅನುಪಾಲನೆ ಮಾಡುತ್ತೇವೆ ಎಂದು ತಿಳಿಸಿರುವ ಕಾರಣ ಈ ಹಿಂದೆ ನೀಡಲಾದ ಆದೇಶದಲ್ಲಿ ಯಾವುದೇ ಮಾರ್ಪಾಡು ಮಾಡುವುದಿಲ್ಲ ಎಂದು ಆದೇಶಿಸಿತು.

ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ಅವರು “ಪೀಠ ನೀಡಿರುವ ಆದೇಶವನ್ನು ಪಾಲಿಸಲು ಸಿಬಿಐ ಬದ್ಧವಾಗಿದೆ. ಆದೇಶದಲ್ಲಿ ಯಾವುದೇ ಮಾರ್ಪಾಡು ಮಾಡುವಂತೆ ನಾವು ಕೇಳುತ್ತಿಲ್ಲ. ತಮ್ಮ ಆದೇಶದ ಪ್ರಕಾರ ತನಿಖೆ ನಡೆಸುತ್ತೇವೆ. ಯಾರನ್ನೂ ಬದಲಾಯಿಸುವುದಿಲ್ಲ” ಎಂದು ತಿಳಿಸಿದರು. ಇದಕ್ಕೆ ಪ್ರತಿಯಾಗಿ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕರಾದ ಬಿ ಎನ್‌ ಜಗದೀಶ್‌ ಅವರು ಸಿಬಿಐ ವಿವರಣೆ ಮತ್ತು ಪೀಠದ ಆದೇಶಕ್ಕೆ ಸಹಮತ ವ್ಯಕ್ತಪಡಿಸಿದರು.

“ಈ ಹಿಂದೆ ಇದೇ ಪೀಠ ಈ ಕುರಿತಾದ ಅರ್ಜಿ ವಿಚಾರಣೆ ನಡೆಸಿ ಜೀವಾ ಆತ್ಮಹತ್ಯೆಯ ತನಿಖೆಗೆ ಎಸ್‌ಐಟಿ ರಚನೆ ಮಾಡಿ ಆದೇಶಿಸಿತ್ತು. ‘ಎಸ್‌ಐಟಿಯಲ್ಲಿ ಸಿಬಿಐನ ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ ವರ್ಮಾ,  ಕರ್ನಾಟಕ ಗೃಹ ರಕ್ಷಕ ದಳದ ಪೊಲೀಸ್‌ ವರಿಷ್ಠಾಧಿಕಾರಿ ಹಕಾಯ ಅಕ್ಷಯ್‌ ಮಛ್ಛೀಂದ್ರ ಮತ್ತು ಆಂತರಿಕ ಭದ್ರತಾ ವಿಭಾಗದ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಸದಸ್ಯರಾಗಿ ಇರುತ್ತಾರೆ” ಎಂದು ಆದೇಶಿಸಿತ್ತು.

ಈ ಆದೇಶದ ಬಗ್ಗೆ ಪ್ರಾಸಿಕ್ಯೂಷನ್‌ ವಿವರಣೆ ಬಯಸಿ ತಕರಾರು ವ್ಯಕ್ತಪಡಿಸಿತ್ತು. “ತಂಡದ ಮೂವರೂ ಅಧಿಕಾರಿಗಳು ಪೊಲೀಸ್‌ ವರಿಷ್ಠಾಧಿಕಾರಿ ಶ್ರೇಣಿ ಅಧಿಕಾರಿಗಳಾಗಿದ್ದು, ಒಬ್ಬರು ಮತ್ತೊಬ್ಬರ ಅಧೀನದಲ್ಲಿ ಕೆಲಸ ಮಾಡುವುದು ಹೇಗೆ” ಎಂದು ಪ್ರಶ್ನಿಸಿತ್ತು. ಅಂತೆಯೇ, “ತಂಡಕ್ಕೆ ಡಿಜಿ ಅಥವಾ ಡಿಐಜಿ ದರ್ಜೆಯ ಅಧಿಕಾರಿಯನ್ನು ನಿಯುಕ್ತಿಗೊಳಿಸಬೇಕು” ಎಂದು ಮನವಿ ಮಾಡಿತ್ತು.

ಇದಕ್ಕೆ ಮಂಗಳವಾರ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು “ಯಾವ ಅಧಿಕಾರಿಯೂ ಮತ್ತೊಬ್ಬರ ಅಧೀನದಲ್ಲಿ ಕೆಲಸ ಮಾಡುವುದಿಲ್ಲ. ಇದೇನೂ ತಿರುಪತಿ ಲಡ್ಡು ವಿವಾದದಷ್ಟು ದೊಡ್ಡ ಪ್ರಕರಣವಲ್ಲ. ಆ ಪ್ರಕರಣದಲ್ಲಿ ಐಜಿಯನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು ಎಂದರೆ ಇದರಲ್ಲಿ ಅಂತಹ ಅವಶ್ಯಕತೆ ಕಾಣುತ್ತಿಲ್ಲ. ಮೂವರು ಪೊಲೀಸ್‌ ವರಿಷ್ಠಾಧಿಕಾರಿಗಳೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಾರೆ. ಹೀಗಾಗಿ, ತರತಮದ ಭಾವನೆ ಉದ್ಭವವಾಗವುದಿಲ್ಲ” ಎಂದು ಸ್ಪಷ್ಟಪಡಿಸಿತು. ಅಂತೆಯೇ, ʼತನಿಖೆಯನ್ನು ಕೂಡಲೇ ಪ್ರಾರಂಭಿಸಬೇಕುʼ ಎಂದು ಎಸ್‌ಐಟಿಗೆ ತಾಕೀತು ಮಾಡಿತು.‌