D V Sadanandagowda, Karnataka HighCourt, C T Ravi
D V Sadanandagowda, Karnataka HighCourt, C T Ravi 
ಸುದ್ದಿಗಳು

ಕೇಂದ್ರ ಸಚಿವ ಸದಾನಂದಗೌಡ, ಸಿ ಟಿ ರವಿ ವಿರುದ್ಧ ಸ್ವಪ್ರೇರಿತ ನ್ಯಾಯಾಂಗ ನಿಂದನೆ ಮೊಕದ್ದಮೆಗೆ ಕೋರಿ ಹೈಕೋರ್ಟ್‌ಗೆ ಪತ್ರ

Ramesh DK

ನ್ಯಾಯಾಲಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ಅವರ ವಿರುದ್ಧ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳುವಂತೆ ಕೋರಿ ಬೆಳಗಾವಿಯ ವಕೀಲ ಭೀಮನಗೌಡ ಪರಗೊಂಡ ಅವರು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ಪತ್ರ ಬರೆದಿದ್ದಾರೆ.

ಹೈಕೋರ್ಟ್‌ ರೆಜಿಸ್ಟ್ರಿಗೆ ಈ ಸಂಬಂಧ ಇಮೇಲ್‌ ಮಾಡಿರುವ ಪರಗೊಂಡ ಅವರು ಕೋವಿಡ್‌ ಕುರಿತಾದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ, “ ನಮ್ಮ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಕೂಡಾ ಎತ್ತಿ ಹಿಡಿದಿದೆ. ಇದರ ಬಗ್ಗೆ ಅತೃಪ್ತಿ ಹೊಂದಿದ್ದ ವ್ಯಕ್ತಿಗಳು ಇಲ್ಲವೇ ಜನಪ್ರತಿನಿಧಿಗಳು ಇಲ್ಲವೇ ಸರ್ಕಾರದ ಅಧಿಕಾರಿಗಳು ಮತ್ತೆ ನ್ಯಾಯಾಲಯದ ಗಮನಕ್ಕೆ ತರುವ; ಆದೇಶದ ಬಗ್ಗೆ ನ್ಯಾಯಾಲಯದಲ್ಲಿ ಅತೃಪ್ತಿ ವ್ಯಕ್ತಪಡಿಸುವ ಅವಕಾಶ ಇದೆ. ಆದರೆ ಇದು ಗೊತ್ತಿದ್ದೂ ಸನ್ಮಾನ್ಯ ನ್ಯಾಯಾಧೀಶರು ನೀಡಿದ ಆದೇಶವನ್ನು ಉದ್ದೇಶಪೂರ್ವಕವಾಗಿ ದುರುದ್ದೇಶದಿಂದ, ಖಚಿತವಾದ ತಿಳುವಳಿಕೆಯಿಂದ ಉಚ್ಚ ನ್ಯಾಯಾಲಯ ಬೆಂಗಳೂರು ಹಾಗೂ ನವದೆಹಲಿಯ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ನೀಡಿದ ಆದೇಶವನ್ನು ದಿನಾಂಕ 14/05/2021 ರಂದು ಟೀಕೆ ಮಾಡಿರುವ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ಮತಕ್ಷೇತ್ರದ ಶಾಸಕ ಹಾಗೂ ಬಿ‌ಜೆ‌ಪಿ ಪಕ್ಷದ ಯುವ ಮೋರ್ಚಾದ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೇಂದದ್ರ ಸಚಿವ ಡಿ ವಿ ಸದಾನಂದಗೌಡ ಅವರ ವಿರುದ್ಧ ಸುಮೊಟೊ ಬಳಸಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳುವಂತೆ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ.

ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ದಾಖಲೆಗಳನ್ನು ಪರಗೊಂಡ ಅವರು ಇಮೇಲ್‌ ಮೂಲಕ ರವಾನಿಸಿದ್ದಾರೆ. ಇಬ್ಬರೂ ರಾಜಕೀಯ ನಾಯಕರ ಹೇಳಿಕೆಗಳು ಪ್ರಕಟವಾಗಿರುವ ಟೈಮ್ಸ್‌ ಆಫ್‌ ಇಂಡಿಯಾ, ಇಂಡಿಯನ್‌ ಎಕ್ಸ್ ಪ್ರೆಸ್‌, ಪಬ್ಲಿಕ್‌ ಟಿವಿ, ನ್ಯೂ ಇಂಡಿಯನ್‌ ಎಕ್ಸ್ ಪ್ರೆಸ್‌, ಡೆಕನ್‌ ಹೆರಾಲ್ಡ್‌, ದ ಹಿಂದೂ ಪತ್ರಿಕೆ ವರದಿಗಳ ಲಿಂಕ್‌ಗಳನ್ನು ಉಲ್ಲೇಖಿಸಿದ್ದಾರೆ.

ಇಬ್ಬರೂ ಜನಪ್ರತಿನಿಧಿಗಳ ಹೇಳಿಕೆ ರಾಜ್ಯದಲ್ಲಿ ಪರ ವಿರೋಧದ ಚರ್ಚೆಗೆ ಗ್ರಾಸವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ವಿವಿಧ ನ್ಯಾಯಾಂಗ ತಜ್ಞರು ಈ ಹೇಳಿಕೆಗಳನ್ನು ವಿರೋಧಿಸಿದ್ದು ಮಾಧ್ಯಮಗಳಲ್ಲಿ ಕೂಡ ವರದಿಯಾಗಿತ್ತು.

ಕೆಲವು ದಿನಗಳ ಹಿಂದೆ ಡಿ ವಿ ಸದಾನಂದ ಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ “ಕೆಲ ರಾಷ್ಟ್ರಗಳಿಂದ ಕಚ್ಚಾ ಸಾಮಗ್ರಿ ಬರುವುದು ತಡವಾಗಿ ಲಸಿಕೆ ತಯಾರಿಕೆ ಮೇಲೆ ಪರಿಣಾಮ ಬೀರಿದೆ. ನಾಳೆಯೇ ಲಸಿಕೆ ಕೊಡಿ ಎಂದು ನ್ಯಾಯಾಲಯ ಹೇಳಿದರೆ ಹೇಗೆ ಸಾಧ್ಯ? ಲಸಿಕೆಯೇ ತಯಾರಾಗದಿದ್ದರೆ ನಾವು ನೇಣು ಹಾಕಿಕೊಳ್ಳಲು ಆಗುತ್ತದಾ?"ಎಂದು ಪ್ರಶ್ನಿಸಿದ್ದರು.

ಸದಾನಂದಗೌಡರ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಸಿ ಟಿ ರವಿ ಅವರು “ ನ್ಯಾಯಾಧೀಶರೇನು ಸರ್ವಜ್ಞರಲ್ಲ. ಕೇಂದ್ರವಿರಲಿ ರಾಜ್ಯ ಸರ್ಕಾರಗಳೇ ಇರಲಿ ತಜ್ಞರ ಸಮಿತಿ ನೀಡುವ ವರದಿ ಆಧರಿಸಿಯೇ ಕೆಲಸ ಮಾಡುತ್ತವೆ. ಸುಪ್ರೀಂಕೋರ್ಟ್‌ಗೂ ಕೇಂದ್ರ ಸರ್ಕಾರ ಈ ವಿಚಾರ ತಿಳಿಸಿದೆ. ಕೇಂದ್ರದ ವಾದವನ್ನು ಸುಪ್ರೀಂಕೋರ್ಟ್‌ ಕೂಡ ಒಪ್ಪಿದೆ” ಎಂದಿದ್ದರು.