Bombay HC , Bitcoin
Bombay HC , Bitcoin  
ಸುದ್ದಿಗಳು

ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ನಿಯಂತ್ರಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋದ ವಕೀಲ

Bar & Bench

ದೇಶದಲ್ಲಿ ಕ್ರಿಪ್ಟೋಕರೆನ್ಸಿಯ ಬಳಕೆ ವ್ಯಾಪಾರ ನಿಯಂತ್ರಣಕ್ಕಾಗಿ ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಮುಂಬೈ ಮೂಲದ ವಕೀಲರೊಬ್ಬರು ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ಹೂಡಿದ್ದಾರೆ.

ದೇಶದಲ್ಲಿ ಕ್ರಿಪ್ಟೊಕರೆನ್ಸಿಯ ಅನಿಯಂತ್ರಿತ ವ್ಯವಹಾರ ನಡೆಯುತ್ತಿದೆ. ಇದು ಹೂಡಿಕೆದಾರರ ಹಕ್ಕುಗಳ ಮೇಲೆ ಪರಿಣಾಮ ಬೀರಲಿದ್ದು ಅವರ ಸಮಸ್ಯೆಗಳನ್ನು ಈಡೇರಿಸುವ ಅಂಶ ಕಾನೂನಿನಲ್ಲಿ ಇಲ್ಲ ಎಂದು ವಕೀಲ ಆದಿತ್ಯ ಕದಮ್‌ ತಿಳಿಸಿದ್ದಾರೆ.

ಇಂಟರ್ನೆಟ್ ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹೊರತಾಗಿಯೂ ಜನರ ಹಿತಾಸಕ್ತಿ ಕಾಪಾಡಲು ಸೂಕ್ತ ನಿಯಮಾವಳಿ ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಪಿಐಎಲ್‌ ಹೇಳಿದೆ.

“ಹಣದ ಅಕ್ರಮ ವರ್ಗಾವಣೆ, ಮಾದಕವಸ್ತುಗಳ ವ್ಯಾಪಾರ, ಕ್ರಿಪ್ಟೋ ಕರೆನ್ಸಿ ವಹಿವಾಟಿನ ಮೂಲಕ ಭಯೋತ್ಪಾದನೆಗೆ ಹಣಕಾಸು ಒದಗಿಸುವ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುವ ಅಪಾಯವಿದ್ದು ಇದನ್ನು ಹತ್ತಿಕ್ಕಲು ಸರ್ಕಾರಿ ಅಧಿಕಾರಿಗಳು ವಿಫಲವಾಗಿದ್ದಾರೆ” ಎಂದು ಅರ್ಜಿ ವಿವರಿಸಿದೆ. ಈ ಬಗ್ಗೆ ಹಲವು ಅರ್ಜಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಇದಕ್ಕೆ ಸಂಬಂಧಪಟ್ಟವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಕೀಲರು ಪ್ರಸ್ತಾಪಿಸಿದ್ದಾರೆ.

ಅಧಿಕಾರಿಗಳ ನಿಷ್ಕ್ರಿಯತೆಯಿಂದ ಸಾರ್ವಜನಿಕ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕಾಗಿ ಹೈಕೋರ್ಟ್‌ ಮಧ್ಯಪ್ರವೇಶಿಸುವಂತೆ ತಾವು ಕೋರಬೇಕಾಯಿತು ಎಂದು ಅವರು ಹೇಳಿದ್ದಾರೆ. ಕ್ರಿಪ್ಟೊ ಕರೆನ್ಸಿ ನಿಯಂತ್ರಣಕ್ಕೆ ಅವರು ನೀಡಿರುವ ಕಾರಣಗಳು ಹೀಗಿವೆ:

  • ಕ್ರಿಪ್ಟೋಕರೆನ್ಸಿಯ ಕುರಿತು ಸ್ಪಷ್ಟ ನೀತಿ ಇಲ್ಲದ ಕಾರಣ ಸರ್ಕಾರದ ಆದಾಯಕ್ಕೆ ಅಗಾಧವಾದ ನಷ್ಟ ಉಂಟಾಗಿದೆ.

  • ಯಾವುದೇ ನಿಯಮ ಇಲ್ಲದಿರುವುದರಿಂದ ಯಾರು ಬೇಕಾದರೂ ವ್ಯಾಪಾರದ ವೇದಿಕೆ ಸೃಷ್ಟಿಸಬಹುದಾಗಿದ್ದು ವಂಚನೆ ಮತ್ತು ಭಯೋತ್ಪಾದನೆಗೆ ಹಣ ಒದಗಿಸುವುದು ಸೇರಿದಂತೆ ಕಾನೂನುಬಾಹಿರ ಉದ್ದೇಶಕ್ಕಾಗಿ ಅಮಾಯಕ ಹೂಡಿಕೆದಾರರನ್ನು ವಂಚಿಸಬಹುದಾಗಿದೆ.

  • ಲಭ್ಯವಿರುವ ಮಾಹಿತಿಯ ಪ್ರಕಾರ, ಸಿಂಗಪುರ, ಸ್ವಿಜರ್‌ಲೆಂಡ್‌, ಯುನೈಟೆಡ್ ಕಿಂಗ್‌ಡಮ್, ಅಮೇರಿಕ, ಐರೋಪ್ಯ ಒಕ್ಕೂಟ, ಜಪಾನ್, ಇತ್ಯಾದಿ ದೇಶಗಳು ಕ್ರಿಪ್ಟೋಕರೆನ್ಸಿ ವ್ಯಾಪಾರ ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಎದುರಿಸಲು ಶಾಸನಬದ್ಧ ಕಾನೂನು ಜಾರಿಗೆ ತಂದಿವೆ.