Kerala HC, Woman Judge
Kerala HC, Woman Judge  
ಸುದ್ದಿಗಳು

ನ್ಯಾಯಮೂರ್ತಿಯೊಬ್ಬರಿಗೆ ಪ್ರತಿದಿನ ಕೇವಲ 20 ಪ್ರಕರಣಗಳು: ಕೇರಳ ಹೈಕೋರ್ಟ್‌ಗೆ ವಕೀಲ ದೂರು

Bar & Bench

ಹೈಕೋರ್ಟ್‌ ನ್ಯಾಯಮೂರ್ತಿಗಳಲ್ಲೊಬ್ಬರಿಗೆ ಪ್ರತಿದಿನ ಅತ್ಯಂತ ಸೀಮಿತ ಸಂಖ್ಯೆಯ ಪ್ರಕರಣಗಳನ್ನಷ್ಟೇ ಪಟ್ಟಿ ಮಾಡಲಾಗುತ್ತಿದೆ ಎಂದು ಆರೋಪಿಸಿ ವಕೀಲರೊಬ್ಬರು ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದಾರೆ [ಯಶವಂತ್ ಶೆಣೈ ಮತ್ತು ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಇನ್ನಿತರರ ನಡುವಣ ಪ್ರಕರಣ].

ಬೇರೆ ನ್ಯಾಯಮೂರ್ತಿಗಳಿಗೆ ಪ್ರತಿದಿನ 100ಕ್ಕೂ ಹೆಚ್ಚು ಪ್ರಕರಣಗಳನ್ನು ಪಟ್ಟಿ ಮಾಡುತ್ತಿದ್ದು, ನ್ಯಾ. ಮೇರಿ ಜೋಸೆಫ್‌ ಅವರಿಗೆ ಕೇವಲ 20 ಪ್ರಕರಣಗಳ ವಿಚಾರಣೆ ನಡೆಸುವಂತೆ ಸೂಚಿಸುತ್ತಿರುವುದನ್ನು ವಕೀಲ ಯಶವಂತ ಶೆಣೈ ಪ್ರಶ್ನಿಸಿದ್ದಾರೆ.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮಾಸ್ಟರ್‌ ಆಫ್‌ ರೋಸ್ಟರ್‌ (ವಿಚಾರಣೆ ಮಾಡಬೇಕಾದ ಪಟ್ಟಿಯನ್ನು ಅಂತಿಮಗೊಳಿಸುವವರು) ಆಗಿದ್ದು ಹೇಗೆ ಪಟ್ಟಿ ಮಾಡಬೇಕೆಂದು ಸೂಚಿಸುವ ಅಧಿಕಾರ ಅವರೊಬ್ಬರಿಗೆ ಇದ್ದು ಬೇರಾವ ನ್ಯಾಯಮೂರ್ತಿಗಳೂ ಇದರಲ್ಲಿ ಮಧ್ಯಪ್ರವೇಶಿಸುವಂತಿಲ್ಲ.  ಒಂದು ವೇಳೆ ನ್ಯಾಯಮೂರ್ತಿ ಜೋಸೆಫ್ ಅವರಗೆ ಪ್ರಕರಣಗಳ ಚಿಕ್ಕ ಪಟ್ಟಿ ಒದಗಿಸುವಂತೆ ಮುಖ್ಯ ನ್ಯಾಯಮೂರ್ತಿಗಳೇ ಸೂಚಿಸಿದ್ದರೆ ಅದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗುತ್ತದೆ” ಎಂದು ಶೆಣೈ ದೂರಿದ್ದಾರೆ.

ನ್ಯಾ. ಮೇರಿ ಅವರು ಕೇವಲ 20 ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದುದನ್ನು ಕೇಳಿ ಆಘಾತವಾಯಿತು. ಅದರಲ್ಲಿಯೂ ನ್ಯಾ. ಮೇರಿ ಅನೇಕ ಪ್ರಕರಣಗಳನ್ನು ಮುಂದೂಡುತ್ತಿದ್ದು ಅನೇಕ ಬಾರಿ ಕಿರುಪಟ್ಟಿಯಲ್ಲಿರುವ ಎಲ್ಲಾ ಪ್ರಕರಣಗಳನ್ನು ಅವರು ವಿಚಾರಣೆ ನಡೆಸುವುದೇ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಕರಣ ನ್ಯಾ. ಶಾಜಿ ಪಿ ಚಾಲಿ ಅವರ ಮುಂದೆ ವಿಚಾರಣೆಗೆ ಬಂದಾಗ “ಇತರ ನ್ಯಾಯಮೂರ್ತಿಗಳಿಗೆ ಅನ್ವಯಿಸುತ್ತಿರುವ ಮಾನದಂಡದಂತೆಯೇ ನ್ಯಾ. ಮೇರಿ ಅವರಿಗೂ ಪ್ರಕರಣಗಳನ್ನು ಹಂಚಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಅವರಿಗೆ ನಿರ್ದೇಶನ ರೂಪದ ಮಧ್ಯಂತರ ಪರಿಹಾರ ನೀಡಬೇಕೆಂದು ಕೋರುತ್ತಿದ್ದೇನೆ. ಇಂದು ಕೂಡ ಕೇವಲ 20 ಪ್ರಕರಣಗಳನ್ನು ನ್ಯಾ. ಮೇರಿ ಅವರೆದುರು ಪಟ್ಟಿ ಮಾಡಲಾಗಿದೆ” ಎಂದು ಶೆಣೈ ಹೇಳಿದರು.

ರಿಜಿಸ್ಟ್ರಾರ್‌ ಜನರಲ್‌ ಅವರನ್ನು ಯಾರೂ ಪ್ರತಿನಿಧಿಸುತ್ತಿಲ್ಲ ಎಂಬುದನ್ನು ಗಮನಿಸಿದ ನ್ಯಾ. ಶಾಜಿ ಅವರು ವಕೀಲರನ್ನು ತೊಡಗಿಸಿಕೊಳ್ಳಲು ಸೂಚಿಸಿ ಪ್ರಕರಣವನ್ನು ಮಾರ್ಚ್ 3, ಶುಕ್ರವಾರದಂದು ವಿಚಾರಣೆ ನಡೆಸುವುದಾಗಿ ತಿಳಿಸಿದರು.