pregnant woman and kerala high court
pregnant woman and kerala high court  
ಸುದ್ದಿಗಳು

ಅಪ್ರಾಪ್ತೆಯ ಗರ್ಭಪಾತಕ್ಕೆ ಅನುಮತಿ: ಕೇರಳ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿದ ವಕೀಲ

Bar & Bench

ತನ್ನ ಸಹೋದರನಿಂದ ಗರ್ಭಧರಿಸಿದ 15 ವರ್ಷದ ಬಾಲಕಿಯ 7 ತಿಂಗಳ ಭ್ರೂಣದ ವೈದ್ಯಕೀಯ ಗರ್ಭಪಾತಕ್ಕೆ ಅನುಮತಿಸಿ ಕೇರಳ ಹೈಕೋರ್ಟ್‌ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ವಕೀಲರೊಬ್ಬರು ಕೇರಳ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ [ಕೂಳತ್ತೂರು ಜೈಸಿಂಗ್‌ ಮತ್ತು ಎಕ್ಸ್‌ಎಕ್ಸ್‌ಎಕ್ಸ್‌ ಹಾಗೂ ಇನ್ನಿತರರ ನಡುವಣ ಪ್ರಕರಣ].

ಈ ಹಿನ್ನೆಲೆಯಲ್ಲಿ ಅದೇ ಏಕಸದಸ್ಯ ಪೀಠದೆದುರು ತಮ್ಮನ್ನು ಪ್ರಕರಣದ ಪಕ್ಷಕಾರರನ್ನಾಗಿ ಮಾಡಿಕೊಳ್ಳುವಂತೆ ಕೋರಲು ಅರ್ಜಿದಾರ ವಕೀಲ ಕೂಳತ್ತೂರು ಜೈಸಿಂಗ್‌ ಅವರಿಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್ ವಿ ಭಟ್ಟಿ ಮತ್ತು ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರಿದ್ದ ವಿಭಾಗೀಯ ಪೀಠ ಗುರುವಾರ ಸ್ವಾತಂತ್ರ್ಯ ನೀಡಿತು.

ಒಡಹುಟ್ಟಿದವರಿಬ್ಬರಿಂದಲೇ ಮಗು ಜನಿಸುವುದರಿಂದ ವಿವಿಧ ಸಾಮಾಜಿಕ ಮತ್ತು ವೈದ್ಯಕೀಯ ತೊಡಕುಗಳು ಉದ್ಭವಿಸುವ ಸಾಧ್ಯತೆ ಇದೆ ಎಂದು ಏಕಸದಸ್ಯ ಪೀಠ ಕೆಲ ದಿನಗಳ ಹಿಂದೆ ನೀಡಿದ ಆದೇಶದಲ್ಲಿ ತಿಳಿಸಿತ್ತು.

ಆದರೆ ಗರ್ಭದಲ್ಲಿರುವ ಮಗು ʼಸರ್ವಶಕ್ತನಿಂದ ದೊರೆತ ಕೊಡುಗೆ'ಯಾಗಿದ್ದು ಸಂತ್ರಸ್ತ ಬಾಲಕಿಯ ಕುಟುಂಬವನ್ನು ಸಾಮಾಜಿಕ ಮತ್ತು ಮಾನಸಿಕ ಕಳಂಕದಿಂದ ರಕ್ಷಿಸುವುದಕ್ಕಾಗಲಿ ಅಥವಾ 'ಹುಸಿ ಗರ್ವ'ದ ಕಾರಣಕ್ಕಾಗಲಿ ಗರ್ಭಪಾತಕ್ಕೆ ಅವಕಾಶ ನೀಡಬಾರದು ಎಂದು ಅರ್ಜಿದಾರರು ಕೋರಿದ್ದಾರೆ.

ಏಕಸದಸ್ಯ ನ್ಯಾಯಮೂರ್ತಿಗಳು ಕೇವಲ ಎಫ್‌ಐಆರ್‌ ಮಾಹಿತಿ ಆಧರಿಸಿ ಸಹೋದರನಿಂದ ಗರ್ಭಧಾರಣೆಯಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಮಗುವನ್ನು ಗುಟ್ಟಾಗಿ ಇನ್ನೂ 2 ತಿಂಗಳ ಗರ್ಭದಲ್ಲಿ ಉಳಿಸಿಕೊಂಡರೆ ಮಗುವಿನ ಜೀವನದ ಜೊತೆಗೆ ಆರೋಪಿಸಲಾಗಿರುವ ಸಾಮಾಜಿಕ ಮತ್ತು ವೈದ್ಯಕೀಯ ಸಂಕೀರ್ಣತೆಗಳನ್ನೂ ನಿವಾರಿಸಬಹುದಾಗಿದೆ. ಅಲ್ಲದೆ, ಮಗುವಿನ ತಂದೆ ಯಾರೆಂಬುದು ವೈದ್ಯಕೀಯವಾಗಿ ಸಾಬೀತಾಗಲಿದೆ ಎಂದು ಅರ್ಜಿದಾರರ ಮನವಿ ಮಾಡಿದ್ದಾರೆ.  

ಹೆರಿಗೆಯ ಸಮಯದಲ್ಲಿ ಮಗುವಿನ ಜೀವಕ್ಕೆ ಅಪಾಯವಿದೆ ಅಥವಾ ಗರ್ಭಾವಸ್ಥೆಯನ್ನು ಮುಂದುವರೆಸಿದರೆ ತಾಯಿಗೆ ವೈದ್ಯಕೀಯ ಸಮಸ್ಯೆಗಳಿರುತ್ತವೆ ಎಂದು ವೈದ್ಯಕೀಯ ವರದಿಯಲ್ಲಿ ತಿಳಿಸಿಲ್ಲ ಎಂದು ಕೂಡ ಅರ್ಜಿಯಲ್ಲಿ ವಾದಿಸಲಾಗಿದೆ.  

"ನ್ಯಾಯಾಲಯದ ಮಧ್ಯಂತರ ಆದೇಶ ಸಾಮಾನ್ಯರ ಆತ್ಮಸಾಕ್ಷಿಗೆ ವಿರುದ್ಧವಾಗಿದ್ದು ಹೃದಯ ವಿದ್ರಾವಕ ಭಾವನೆ ಉಂಟುಮಾಡಬಹುದು" ಎಂದು ಅರ್ಜಿದಾರರು ತಿಳಿಸಿದ್ದಾರೆ. ಪ್ರಕರಣದ ವಿಚಾರಣೆ ಸೋಮವಾರ ನಡೆಯಲಿದೆ.