Madras High Court 
ಸುದ್ದಿಗಳು

ಚರಿತ್ರೆಗೆ ಪೊನ್ನಿಯಿನ್ ಸೆಲ್ವನ್ ಸಿನಿಮಾ ಅಪಚಾರ: ಮಣಿರತ್ನಂ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲ ದಾವೆ

Bar & Bench

ತಮ್ಮ ʼಪೊನ್ನಿಯನ್‌ ಸೆಲ್ವನ್‌: 1ʼ ಸಿನಿಮಾದಲ್ಲಿ ಚೋಳ ಸಾಮ್ರಾಜ್ಯದ ಇತಿಹಾಸವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿರುವ ವಕೀಲರೊಬ್ಬರು ತಮಿಳಿನ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಮಣಿರತ್ನಂ ಅವರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ವಾಣಿಜ್ಯ ಹಿತಾಸಕ್ತಿಗಾಗಿ ಚೋಳ ವಂಶದ ಚರಿತ್ರೆಯನ್ನು ಮಣಿರತ್ನಂ ಉದ್ದೇಶಪೂರ್ವಕವಾಗಿ ತಿರುಚಿದ್ದಾರೆ. ಜೊತೆಗೆ ಚರತ್ರೆ ತಿರುಚುವುದಕ್ಕಾಗಿ ಚಿತ್ರದಲ್ಲಿ ಐತಿಹಾಸಿಕ ವ್ಯಕ್ತಿಗಳ ಹೆಸರನ್ನು ಬಳಸಲಾಗಿದೆ ಎಂದು ಅರ್ಜಿದಾರರಾದ ವಕೀಲ ಎಲ್‌ ಕೆ ಚಾರ್ಲ್ಸ್ ಅಲೆಕ್ಸಾಂಡರ್ ಆರೋಪಿಸಿದ್ದಾರೆ.

ಹೀಗೆ ಇತಿಹಾಸ ತಿರುಚುವುದರಿಂದ ದೇಶದ ಏಕತೆಗೆ ಧಕ್ಕೆಯಾಗುತ್ತದೆ. ಪ್ರಾಚ್ಯವಸ್ತು ಮತ್ತು ಕಲಾನಿಧಿ ಕಾಯಿದೆ- 1972 ಹಾಗೂ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳ ಹಾಗೂ ಅವಶೇಷಗಳ ಕಾಯಿದೆ- 1958ನ್ನು ಉಲ್ಲಂಘಿಸಿದ ಆರೋಪದ ಮೇಲೆ ಸರ್ಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮಣಿರತ್ನಂ ಅವರ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಬೇಕಿತ್ತು ಎಂದು ಅವರು ಹೇಳಿದ್ದಾರೆ.

ಆದ್ದರಿಂದ ಮಣಿರತ್ನಂ ವಿರುದ್ಧ ಕೇಂದ್ರ ಸಂಸ್ಕೃತಿ ಸಚಿವಾಲಯ, ಎಎಸ್‌ಐ ಮತ್ತು ಸಿಬಿಎಫ್‌ಸಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ಮಧ್ಯಂತರ ನಿರ್ದೇಶನ ನೀಡಬೇಕು ಎಂದು ಅವರು ಕೋರಿದ್ದಾರೆ . ಅರ್ಜಿಯನ್ನು ಇನ್ನಷ್ಟೇ ನ್ಯಾಯಾಲಯ ಆಲಿಸಬೇಕಿದೆ.