ಸುದ್ದಿಗಳು

ನ್ಯಾಯಾಂಗ ನಿಂದನೆ ಪ್ರಕರಣದ ನೇರ ಪ್ರಸಾರ ಮಾಡುವಂತೆ ಅರ್ಜಿ; ಭೂಷಣ್‌ರನ್ನು ಮಾಧ್ಯಮಗಳು ವೈಭವೀಕರಿಸಿವೆ ಎಂದ ನ್ಯಾಯವಾದಿ

Bar & Bench

ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ನೇರ ಪ್ರಸಾರ ಮಾಡುವಂತೆ ಕೋರಿ ವಕೀಲ ಅಮ್ರಿತ್‌ ಪಾಲ್ ಸಿಂಗ್ ಖಾಲ್ಸಾ ಅವರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.

ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವು ಭಾರತವಷ್ಟೇ ಅಲ್ಲದೇ ವಿಶ್ವಾದ್ಯಂತ ಇರುವ ವಕೀಲರ ಒಕ್ಕೂಟ ಮತ್ತು ನ್ಯಾಯಪೀಠಗಳ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಅರ್ಜಿದಾರರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಮುದ್ರಣ ಮತ್ತು ಡಿಜಿಟಲ್ ಮಾಧ್ಯಮಗಳು ತಮ್ಮ ವರದಿಗಾರಿಕೆಯ ಮೂಲಕ ಭೂಷಣ್ ಅವರನ್ನು ವೈಭವೀಕರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ನೇರ ಪ್ರಸಾರ ಮಾಡುವ ಜೊತೆಗೆ ವಿಡಿಯೋ ರೆಕಾರ್ಡಿಂಗ್ ಮಾಡಬೇಕಾದ ಅಗತ್ಯವಿದೆ ಎಂದು ಖಾಲ್ಸಾ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಸ್ಥಾಪನೆಯಾದಂದಿನಿಂದ ಇಲ್ಲಿಯವರೆಗೆ ಭೂಷಣ್ ವಿರುದ್ಧದ "ನ್ಯಾಯಾಂಗ ನಿಂದನೆ ಪ್ರಕರಣವು ಅತ್ಯಂತ ರೋಚಕ ಪ್ರಕರಣಗಳಲ್ಲಿ ಒಂದಾಗಿದೆ," ಎಂದು ಅರ್ಜಿದಾರರು ಹೇಳಿದ್ದಾರೆ. "ಮುದ್ರಣ ಮತ್ತು ಡಿಜಿಟಲ್ ಮಾಧ್ಯಮಗಳು ತಮ್ಮ ವರದಿಗಾರಿಕೆಯ ಮೂಲಕ ಸುಪ್ರೀಂ ಕೋರ್ಟ್‌ನ ಗೌರವ ಮತ್ತು ಘನತೆಯನ್ನು ಕುಗ್ಗಿಸುವಂತೆ ನಡೆದುಕೊಳ್ಳುತ್ತಿರುವ ಭೂಷಣ್ ಅವರನ್ನು ವೈಭವೀಕರಿಸುತ್ತಿವೆ” ಎಂದು ಅವರು ಅರ್ಜಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಪ್ರೀಂಕೋರ್ಟ್ ನ‌ ಸಾಂಸ್ಥಿಕತೆಯನ್ನು ಶಿಥಿಲಗೊಳಿಸುವ ವ್ಯವಸ್ಥಿತವಾದ "ಲಾಬಿ"ಯೊಂದು ನಡೆಯುತ್ತಿದ್ದು, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಈ ಲಾಬಿಯ "ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. ತನ್ನ ಹಿತಾಸಕ್ತಿಗೆ ಪೂರಕವಾದ ತೀರ್ಪುಗಳು ಹೊರಬೀಳದೇ ಇದ್ದಾಗ ಸುಪ್ರೀಂ ಕೋರ್ಟ್ ಅನ್ನು"ಅತ್ಯಂತ ನಿಕೃಷ್ಟವಾಗಿ ಟೀಕಿಸುವ" ಕೆಲಸವನ್ನು ಈ ಲಾಬಿ ಮಾಡುತ್ತದೆ. ಇದೇ ಲಾಬಿಯು ಹಿಂದಿನ ಮುಖ್ಯ ನ್ಯಾಯಮೂರ್ತಿಗಳನ್ನು ಗುರಿಯಾಗಿಸಿಕೊಂಡಿತ್ತು ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಮುಂದುವರೆದು, “ಸದರಿ ಲಾಬಿಯು ಸುಪ್ರೀಂ ಕೋರ್ಟ್ ಮೇಲೆ ಸಾರ್ವಜನಿಕರು ಹೊಂದಿರುವ ಗೌರವವನ್ನು ಮಣ್ಣುಪಾಲು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಈ ಲಾಬಿಯ ವಿರುದ್ಧ ಇದುವರೆಗೆ ಯಾರೂ ಕ್ರಮ ಕೈಗೊಂಡಿಲ್ಲ ಹಾಗೂ ಅದರ ಕಾರ್ಯಚಟುವಟಿಕೆಯನ್ನು ಪರಿಶೀಲಿಸುವ ಗೋಜಿಗೆ ಹೋಗಿಲ್ಲ” ಎಂದು ದೂರಿದ್ದಾರೆ.

ಈ ಹಿನ್ನೆಲೆಯಲ್ಲಿ, ಸ್ವಪ್ನಿಲ್ ತ್ರಿಪಾಠಿ ವರ್ಸಸ್ ಸುಪ್ರೀಂ ಕೋರ್ಟ್ ಆಫ್‌ ಇಂಡಿಯಾ ನಡುವಿನ ಪ್ರಕರಣದಲ್ಲಿ ವಿಚಾರಣಾ ಪ್ರಕ್ರಿಯೆಯ ನೇರ ಪ್ರಸಾರವನ್ನು (ಲೈವ್ ಸ್ಟ್ರೀಮಿಂಗ್) ಸೂಕ್ತ ಪ್ರಕರಣಗಳಲ್ಲಿ ಮಾಡಬಹುದು ಎಂದು ಹಿಂದೆಯೇ ಸುಪ್ರೀಂ ಕೋರ್ಟ್‌ ತಿಳಿಸಿದೆ ಎಂದು ಖಾಲ್ಸಾ ತಮ್ಮ ಅರ್ಜಿಯಲ್ಲಿ ವಿವರಿಸಿದ್ದಾರೆ.

ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ನೇರ ಪ್ರಸಾರಕ್ಕೆ ಆಗ್ರಹಿಸಿರುವ ಖಾಲ್ಸಾ ತಮ್ಮ ಅರ್ಜಿಯಲ್ಲಿ ಈ ರೀತಿ ವಿವರಿಸಿದ್ದಾರೆ:

ಭೂಷಣ್ ವಿರುದ್ಧದ ಪ್ರಕರಣದ ತೀರ್ಪು ಐತಿಹಾಸಿಕವಾಗಿದ್ದು, ಇದರ ನೇರ ಪ್ರಸಾರ ಮತ್ತು ವಿಡಿಯೋ ರೆಕಾರ್ಡಿಂಗ್ ಮಾಡುವುದರಿಂದ ಸಾರ್ವಜನಿಕರ ಮನದಲ್ಲಿ ಈ ಲಾಬಿ ಗುಂಪು ಹುಟ್ಟುಹಾಕಿರುವ ಪರದೆ ಕಳಚಿ ಬೀಳಲಿದೆ. ಸುಪ್ರೀಂ ಕೋರ್ಟ್‌ನಿಂದ ಪ್ರಶಾಂತ್ ಭೂಷಣ್ ಅವರಿಗೆ ಅನ್ಯಾಯವಾಗಿದೆ ಎಂಬ ಸಾರ್ವಜನಿಕ ನಂಬಿಕೆ ಸುಳ್ಳಾಗಲಿದೆ. ಸಂಸ್ಥೆಯ ಮೇಲೆ ಸಾರ್ವಜನಿಕರ ನಂಬಿಕೆಗೆ ಧಕ್ಕೆ ಉಂಟುಮಾಡುವ ಹಾಗೆ ನಡೆದುಕೊಳ್ಳವವರ ವಿರುದ್ಧ ಅತ್ಯಂತ ಕಠಿಣವಾಗಿ ನಡೆದುಕೊಳ್ಳಲಾಗುತ್ತದೆ ಎಂಬ ಸಂದೇಶವೂ ವಿಚಾರಣೆಯಿಂದ ರವಾನೆಯಾಗಲಿದೆ.
ಅಮ್ರಿತ್‌ ಪಾಲ್ ಸಿಂಗ್ ಖಾಲ್ಸಾ, ವಕೀಲ

ಆಗಸ್ಟ್‌ 25ರಂದು ನಡೆಯುವ ವಿಚಾರಣೆಯ ನೇರ ಪ್ರಸಾರ ಹಾಗೂ ವಿಡಿಯೋ ರೆಕಾರ್ಡಿಂಗ್ ಗೆ ತಗುಲುವ ವೆಚ್ಚ ಭರಿಸಲು ತಾವು ಸಿದ್ಧವಿರುವುದಾಗಿಯೂ ಖಾಲ್ಸಾ ತಿಳಿಸಿದ್ದಾರೆ.