Justice L Victoria Gowri 
ಸುದ್ದಿಗಳು

ವಕೀಲರ ರಾಜಕೀಯ ನಿಲುವು ಅವರನ್ನು ನ್ಯಾಯಮೂರ್ತಿ ಹುದ್ದೆಯಿಂದ ವಂಚಿತರನ್ನಾಗಿಸದು: ನ್ಯಾ. ಗೌರಿ ವಿವಾದಕ್ಕೆ ಸಿಜೆಐ ತೆರೆ

ಒಂದು ನಿರ್ದಿಷ್ಟ ಸಮಯದಲ್ಲಿ ತಳೆದಿದ್ದ ರಾಜಕೀಯ ನಿಲುವಿಗಾಗಿ ಒಬ್ಬರು ನ್ಯಾಯಮೂರ್ತಿಯಾಗುವುದನ್ನು ಎಲ್ಲಿಯವರೆಗೆ ತಡೆಯಲು ಸಾಧ್ಯ ಎಂಬುದು ಪ್ರಶ್ನೆಯಾಗಿದೆ ಸಿಜೆಐ ಚಂದ್ರಚೂಡ್ ಹೇಳಿದರು.

Bar & Bench

ವಕೀಲೆಯಾಗಿದ್ದ ಎಲ್ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿಗೊಳಿಸಲು ಶಿಫಾರಸು ಮಾಡುವ ಮೊದಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

ಈಚೆಗೆ ಅಮೆರಿಕದ ಹಾರ್ವರ್ಡ್ ಕಾನೂನು ಶಾಲೆಯ ಕಾನೂನು ವೃತ್ತಿ ಕೇಂದ್ರದಲ್ಲಿ ಸಭಿಕರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ʼರಾಜಕೀಯ ವಿಚಾರಧಾರೆಯೊಂದರ ಪರ ನ್ಯಾಯಾಲಯದಲ್ಲಿ ವಾದಿಸುವ ಅಥವಾ ಅದನ್ನು ಸಮರ್ಥಿಸಿಕೊಳ್ಳುವ ವಕೀಲರನ್ನು ನ್ಯಾಯಮೂರ್ತಿ ಹುದ್ದೆಯಿಂದ ದೂರ ಇಡಲಾಗದು ಎಂದು ತಿಳಿಸಿದರು.

ನ್ಯಾ. ಗೌರಿ ಅವರು ವಕೀಲರಾಗಿದ್ದಾಗ ಬಿಜೆಪಿ ಜೊತೆ ನಂಟು ಹೊಂದಿದ್ದರು ಎಂಬ ಆರೋಪ ಅವರನ್ನು ನ್ಯಾಯಮೂರ್ತಿಯಾಗಿ ಪದೋನ್ನತಿಗೊಳಿಸುವ ವೇಳೆ ಚರ್ಚೆಗೆ ಗ್ರಾಸವಾಗಿತ್ತು. ಗೌರಿ ಅವರಿಗೆ ಸೇರಿದೆ ಎನ್ನಲಾದ, ಪರಿಶೀಲನೆಗೆ ಒಳಪಟ್ಟಿರದ ಟ್ವಿಟರ್‌ ಖಾತೆಯಲ್ಲಿ ಅವರು ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂದು ಉಲ್ಲೇಖಿಸಲಾಗಿತ್ತು. ಗೌರಿ ಅವರ ಪ್ರಶ್ನೋತ್ತರದ ಯೂಟ್ಯೂಬ್‌ ವಿಡಿಯೋ ಒಂದರಲ್ಲಿ ಅವರು ಇಸ್ಲಾಂ ಮತ್ತು ಕ್ರೈಸ್ತ ಧರ್ಮೀಯರ ಬಗ್ಗೆ ಮಾಡಿರುವ ಟೀಕೆಗಳು ಸಹ ವೈರಲ್‌ ಆಗಿದ್ದವು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ತಮ್ಮ ವೃತ್ತಿ ಜೀವನದಾದ್ಯಂತ ವಕೀಲರುಗಳು ಪರಸ್ಪರ ವಿರೋಧಾಭಾಸದ ನಿಲುವುಳ್ಳ ಕಕ್ಷಿದಾರರ ಪರ ವಾದ ಮಂಡಿಸುತ್ತಾರೆ. ವಕೀಲರು ತಮ್ಮ ಕಕ್ಷಿದಾರರನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ.

  • ಯಾರೇ (ನ್ಯಾಯ ಕೋರಿ) ಬಂದರೂ ಅವರ ಪರ ವಾದಿಸುವುದು ವಕೀಲರಾದವರ ಕರ್ತವ್ಯ ಎಂಬುದು ನನ್ನ ದೃಢವಾದ ನಂಬಿಕೆ.

  • ವೈದ್ಯರು ತಮ್ಮ ಚಿಕಿತ್ಸಾಲಯಕ್ಕೆ ಬರುವವರಿಗೆ ವೈದ್ಯಕೀಯ ಸಹಾಯವನ್ನು ನೀಡಬೇಕಾಗುತ್ತದೆ. ಅಂತಹವರ ಬಳಿ ಬರುವವರ ಒಳಿತು ಕೆಡುಕುಗಳನ್ನು ಅವರು ಊಹಿಸಲು ಸಾಧ್ಯವಿಲ್ಲ.

  • ನಮ್ಮ ಶ್ರೇಷ್ಠ ನ್ಯಾಯವೇತ್ತರಲ್ಲಿ ಒಬ್ಬರಾದ ನ್ಯಾ. ಕೃಷ್ಣ ಅಯ್ಯರ್ ಅವರು ಕೆಲವು ಅತ್ಯುತ್ತಮ ತೀರ್ಪುಗಳನ್ನು ನೀಡಿದರು, ಅವರಿಗೆ ರಾಜಕೀಯ ಹಿನ್ನೆಲೆ ಇತ್ತು.

  • ಗೌರಿ ಅವರ ಪದೋನ್ನತಿ ಕುರಿತು ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ. ಅವರ ಭಾಷಣದ ಸ್ವರೂಪವನ್ನು ಅತೀವ ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ.

  • ನ್ಯಾಯಮೂರ್ತಿಗಳ ವಿವರಗಳನ್ನು ಕೊಲಿಜಿಯಂ ಪರಿಶೀಲಿಸಿದ ನಂತರವೂ, ಅನುಮಾನಗಳು ಉಳಿದಿದ್ದರೆ, ನ್ಯಾಯಮೂರ್ತಿ ಪದೋನ್ನತಿಗೊಳ್ಳುತ್ತಿರುವ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಂದ ವರದಿ ಪಡೆಯಲಾಗುತ್ತದೆ. ಅವರ ಪ್ರತಿಕ್ರಿಯೆಯನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲಾಗುತ್ತದೆ.

  • ನ್ಯಾಯಮೂರ್ತಿಗಳಾಗುವವರ ಪೂರ್ವಾಪರ ಪರಿಶೀಲನೆ ಮಾಡುವ ಪದೋನ್ನತಿ ಎಂಬುದು ಒಕ್ಕೂಟ ವ್ಯವಸ್ಥೆ, ರಾಜ್ಯಗಳು, ಕೇಂದ್ರ ಸರ್ಕಾರ ಹಾಗೂ ಗುಪ್ತಚರ ದಳದಂತಹ ತನಿಖಾ ಸಂಸ್ಥೆಗಳ ವಿವಿಧ ಸ್ತರಗಳನ್ನು ಒಳಗೊಂಡಿರುವ ಸಾಕಷ್ಟು ಸಂಕೀರ್ಣ ಪ್ರಕ್ರಿಯೆಯಾಗಿದೆ.

  • ವಿವಿಧ ರಾಜಕೀಯ ದೃಷ್ಟಿಕೋನಗಳನ್ನು ಹೊಂದಿರುವ ವ್ಯಕ್ತಿಗಳ ಪರವಾಗಿ ಹಾಜರಾದ ವಕೀಲರು ಅದ್ಭುತ ನ್ಯಾಯಮೂರ್ತಿಗಳಾಗಿ ಹೊರಹೊಮ್ಮಿದ್ದಾರೆ ಎಂಬುದು ನನ್ನ ಸ್ವಂತ ಅನುಭವದಿಂದ ವೇದ್ಯವಾಗಿದೆ.

  • ವ್ಯಕ್ತಿಯ ನಿಲುವಿಗಾಗಿ ಆತನ ನೇಮಕಾತಿ ಮಾಡಬಾರದೇ ಎಂಬುದರ ಬಗ್ಗೆ ನನಗೆ ಖಚಿತತೆ ಇಲ್ಲ. ಏಕೆಂದರೆ ನ್ಯಾಯಾಧೀಶ ವೃತ್ತಿ ನಿರ್ಲಿಪ್ತರನ್ನಾಗಿ ಇರುವಂತೆ ಮಾಡುತ್ತದೆ. ಕನಿಷ್ಟ ಕೆಲಸದ ವಿಚಾರದಲ್ಲಾದರೂ ನಿರ್ಲಿಪ್ತರಾಗಿರುವಂತೆ ಮಾಡುತ್ತದೆ.