CJI DY Chandrachud 
ಸುದ್ದಿಗಳು

ನ್ಯಾಯಾಲಯದಲ್ಲಿ ಐಪ್ಯಾಡ್, ಲ್ಯಾಪ್‌ಟಾಪ್‌ ಬಳಸಲು ಅವಕಾಶ ನೀಡಬೇಕು; ಸಿನಿಮಾ ವೀಕ್ಷಿಸದಿದ್ದರೆ ಸಾಕು: ಸಿಜೆಐ

ನ್ಯಾಯಾಲಯದ ಕೊಠಡಿಗಳಲ್ಲಿ ಅಂತಹ ಸಾಧನಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರುವ ಮಟ್ಟಕ್ಕೆ ನ್ಯಾಯಾಲಯಗಳ ಶಿಸ್ತು ಮತ್ತು ಶಿಷ್ಟಾಚಾರ ಹೋಗಬಾರದು ಎಂದು ಕಿವಿಮಾತು ಹೇಳಿದ ಸಿಜೆಐ.

Bar & Bench

ಸಿನಿಮಾ ನೋಡದೆ ರಚನಾತ್ಮಕ ಉದ್ದೇಶಗಳಿಗೆ ಬಳಸುವುದಾದರೆ ಐಪ್ಯಾಡ್‌ ಮತ್ತು ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ನ್ಯಾಯಾಲಯದೊಳಗೆ ಬಳಸಲು  ವಕೀಲರಿಗೆ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಬುಧವಾರ ಅಭಿಪ್ರಾಯಪಟ್ಟರು.

ಕಲ್ಕತ್ತಾ ಹೈಕೋರ್ಟ್‌ನ ಮೊಬೈಲ್ ಅಪ್ಲಿಕೇಶನ್ ಮತ್ತು ವರ್ಚುವಲ್ ಜಸ್ಟೀಸ್ ಕ್ಲಾಕ್‌, ಹೊಸ ಆಡಳಿತಾತ್ಮಕ ವಿಭಾಗ ಹಾಗೂ ವಿವಿಧ ಇ- ಯೋಜನೆಗಳ ವರ್ಚುವಲ್ ಉದ್ಘಾಟನಾ ಸಮಾರಂಭದಲ್ಲಿ ಸಿಜೆಐ ಗುರುವಾರ ಪಾಲ್ಗೊಂಡು ಮಾತನಾಡಿದರು.

ನ್ಯಾಯಾಲಯದ ಕೊಠಡಿಗಳಲ್ಲಿ ಅಂತಹ (ಎಲೆಕ್ಟ್ರಾನಿಕ್) ಸಾಧನಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರುವ ಮಟ್ಟಕ್ಕೆ ನ್ಯಾಯಾಲಯಗಳ ಶಿಸ್ತು, ಶಿಷ್ಟಾಚಾರ ಹೋಗಬಾರದು ಎಂದು ಸಿಜೆಐ ಕಿವಿಮಾತು ಹೇಳಿದರು.

“ಒಬ್ಬ ಜೂನಿಯರ್‌ ಆಗಲಿ ಅಥವಾ ಹಿರಿಕಿರಿಯ ವಕೀಲರು ಯಾರೇ ಆಗಲಿ ನ್ಯಾಯಾಲಯದೊಳಗೆ ಐಪ್ಯಾಡ್‌ ಬಳಸುತ್ತಿದ್ದರೆ ಅದಕ್ಕೆ ಅನುಮತಿಸಬೇಕು, ಅವರು ಆ ಐಪ್ಯಾಡ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ (ನ್ಯಾಯಾಲಯದೊಳಗೆ) ಚಲನಚಿತ್ರ ವೀಕ್ಷಿಸದೆ ಇದ್ದರೆ ಸಾಕು. ನಾವು ಜನರನ್ನು ನಂಬಬೇಕಾಗುತ್ತದೆ," ಎಂದು ಚಟಾಕಿ ಹಾರಿಸಿದರು.

ತಮ್ಮ ಭಾಷಣದಲ್ಲಿ, ಸಿಜೆಐ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ನ್ಯಾಯಾಲಯಗಳಲ್ಲಿ ಇಂಟರ್ನೆಟ್ ಸೌಲಭ್ಯಗಳನ್ನು ಒದಗಿಸುವ ಅಗತ್ಯವನ್ನು ಒತ್ತಿ ಹೇಳಿದರು. ಇಂದಿನ ಕಾಲದಲ್ಲಿ ದಾವೆದಾರರು ಮತ್ತು ವಕೀಲರಿಗೆ ಮೊಬೈಲ್‌ಗಳಲ್ಲಿ ಪ್ರಕರಣಗಳ ಮಾಹಿತಿಯನ್ನು ಪಡೆಯುವುದು ಸುಲಭವೆನಿಸುತ್ತದೆ, ಇದು ನ್ಯಾಯಿಕ ವ್ಯವಸ್ಥೆಯನ್ನು ಸಹ ಸುಲಭ ಲಭ್ಯವಾಗಿಸುತ್ತದೆ ಎಂದು ಹೇಳಿದರು.