Lawyers
Lawyers 
ಸುದ್ದಿಗಳು

ವಕೀಲರ ಮೇಲಿನ ಹಲ್ಲೆ ಪ್ರಕರಣ ಮುನ್ನೆಲೆಗೆ: ಕಾಯಿದೆ ರೂಪ ಪಡೆಯಲಿದೆಯೇ ವಕೀಲರ ರಕ್ಷಣಾ ಮಸೂದೆ?

Bar & Bench

ರಾಜ್ಯದಲ್ಲಿ ಭಿನ್ನ ಕಾರಣಗಳಿಗಾಗಿ ವಕೀಲರ ಮೇಲೆ ಪದೇಪದೇ ಹಲ್ಲೆ, ಹತ್ಯೆಯಂತಹ ಘಟನೆಗಳು ನಡೆಯುತ್ತಿವೆ. ಕಳೆದ ಕೆಲ ದಿನಗಳ ಅವಧಿಯಲ್ಲಿಯೇ ಇಂತಹ ಎರಡು ಘಟನೆಗಳು ನಡೆದಿದ್ದು ವಕೀಲರ ಸಮುದಾಯ ಪ್ರತಿಭಟನೆಗಳನ್ನೂ ನಡೆಸಿದೆ. ಇದರ ಬೆನ್ನಿಗೇ ವಕೀಲರ ರಕ್ಷಣಾ ಕಾಯಿದೆಯನ್ನು ರಾಜ್ಯದಲ್ಲಿ ಜಾರಿಗೆ ತರಬೇಕು ಎನ್ನುವ ಆಗ್ರಹ ಮತ್ತೆ ಬಲವಾಗಿದೆ.

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ವಕೀಲರ ರಕ್ಷಣಾ ಮಸೂದೆಯ ಜಾರಿಗೆ ಆಗ್ರಹಿಸಿ ವಕೀಲ ಸಮುದಾಯದಿಂದ ಬೃಹತ್‌ ಪ್ರತಿಭಟನೆಗಳೂ ನಡೆದಿದ್ದವು. ಇದೀಗ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವುದರಿಂದ ವಕೀಲರ ರಕ್ಷಣಾ ಮಸೂದೆಯ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ವಕೀಲರ ರಕ್ಷಣಾ ಮಸೂದೆಗೆ ಬಲವಾದ ಒತ್ತಾಯ ವಕೀಲ ಸಮುದಾಯದಿಂದ ಕೇಳಿ ಬರಲು ಕಾರಣವಾದ ಕೆಲವು ಘಟನೆಗಳನ್ನು ಇಲ್ಲಿ ನೆನೆಯಬಹುದು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮಂಗಳೂರಿನ ಬೆಳ್ತಂಗಡಿ ತಾಲ್ಲೂಕಿನ ಪುಟ್ಟಿಲಾ ಗ್ರಾಮದ ವಕೀಲ ಕುಲದೀಪ್‌ ಶೆಟ್ಟಿ ಅವರ ಮೇಲೆ ಬಂಟ್ವಾಳದ ಪುಂಜಾಲಕಟ್ಟೆ ಠಾಣೆ ಪೊಲೀಸರು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಮಾನುಷವಾಗಿ ದಾಳಿ ನಡೆಸಿದ್ದರು. ಬೆಂಗಳೂರಿನ ಗಿರಿನಗರದ ವಕೀಲ ಲಕ್ಷ್ಮೀಶ ಅವರ ಮೇಲೆಯೂ ಕಳೆದ ವರ್ಷ ದಾಳಿ ನಡೆದಿತ್ತು. ಈಚೆಗೆ ಚಿಕ್ಕಮಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ವಕೀಲ ಪ್ರೀತಮ್‌ ಅವರಿಗೆ ಪೊಲೀಸರು ಮನಬಂದಂತೆ ಥಳಿಸಿರುವ ಘಟನೆಯು ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ. ಇದೆಲ್ಲದರ ನಡುವೆ ಕಲಬುರ್ಗಿಯಲ್ಲಿ ಗುರುವಾರ 40 ವರ್ಷದ ವಕೀಲ ಈರಣ್ಣಗೌಡ ಪಾಟೀಲ್‌ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊನೆಯ ಎರಡು ಘಟನೆಗಳಂತೂ ಇನ್ನೂ ಹಸಿರಾಗಿಯೇ ಇವೆ.

ವಕೀಲರ ಮೇಲೆ ಹಲ್ಲೆ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ವಕೀಲರ ರಕ್ಷಣಾ ಕಾಯಿದೆ ಜಾರಿಗೊಳಿಸಬೇಕು ಎಂಬ ಆಗ್ರಹ ರಾಜ್ಯದ ವಕೀಲರ ಸಮುದಾಯದ್ದಾಗಿದೆ. ವಕೀಲರ ಒಕ್ಕೊರಲ ಆಗ್ರಹಕ್ಕೆ ಮಣಿದಂತೆ ಕಂಡ ಹಿಂದಿನ ಬಿಜೆಪಿ ಸರ್ಕಾರವು 15ನೇ ವಿಧಾನಸಭೆಯ ಕೊನೆಯ ಅಧಿವೇಶನದಲ್ಲಿ ಮಸೂದೆ ಮಂಡಿಸಿತ್ತು. ಇನ್ನೇನು ಕಾಯಿದೆ ಆಗಿಯೇ ಹೋಯಿತು ಎಂದು ಬೀಗಿದ್ದ ವಕೀಲರಿಗೆ ನಿರಾಸೆ ಉಂಟಾಗಿತ್ತು. ಮಸೂದೆಯು ಚರ್ಚೆಗೆ ಬರಲೇ ಇಲ್ಲ. ಈ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‌ ವಕೀಲರ ರಕ್ಷಣಾ ಮಸೂದೆಗೆ ಬೆಂಬಲ ಸೂಚಿಸಿತ್ತು. ಸ್ವತಃ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಂದು ಮಸೂದೆಯ ಪರ ಪ್ರಬಲವಾಗಿ ದನಿ ಎತ್ತಿದ್ದರು.

ಅಧಿಕಾರಕ್ಕೆ ಬಂದ ನಂತರವೂ ಕೂಡ ಸಿದ್ದರಾಮಯ್ಯನವರು ವಿವಿಧ ಸಂದರ್ಭಗಳಲ್ಲಿ ಮಸೂದೆಯನ್ನು ಜಾರಿಗೊಳಿಸುವ ಬಗ್ಗೆ ವಕೀಲ ಸಮುದಾಯಕ್ಕೆ ಆಶ್ವಾಸನೆ ನೀಡಿದ್ದರು. ಬಹುಮುಖ್ಯವಾಗಿ ಈಚೆಗೆ ಮೈಸೂರಿನಲ್ಲಿ ನಡೆದಿದ್ದ ವಕೀಲರ ಸಮಾವೇಶದಲ್ಲಿ ಮಸೂದೆ ಜಾರಿಯ ಬಗ್ಗೆ ವಾಗ್ದಾನ ನೀಡಿದ್ದರು. ಸದ್ಯ ಬೆಳಗಾವಿಯಲ್ಲಿ ಡಿಸೆಂಬರ್‌ 15ರವರೆಗೆ ಅಧಿವೇಶನವೂ ನಡೆಯುತ್ತಿರುವುದರಿಂದ ಸಹಜವಾಗಿ ವಕೀಲರ ಸಮುದಾಯ ಮಸೂದೆಗೆ ಈಗಲಾದರೂ ಮೋಕ್ಷ ಸಿಗಬಹುದು ಎಂದು ಆಸೆಗಣ್ಣಿನಿಂದ ದೃಷ್ಟಿ ನೆಟ್ಟಿದೆ.

ಕಾಯಿದೆಯ ಶೀಘ್ರ ಜಾರಿಗೆ ಒತ್ತಾಯಿಸಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಅವರು 'ಬಾರ್‌ ಅಂಡ್‌ ಬೆಂಚ್‌'ನೊಂದಿಗೆ ಮಾತನಾಡಿ, “ಇತ್ತೀಚೆಗೆ ರಾಜ್ಯದ ಚಿಕ್ಕಮಗಳೂರು ಮತ್ತು ಕಲಬುರ್ಗಿಯಲ್ಲಿ ಘಟಿಸಿದ ವಕೀಲರ ಮೇಲಿನ ಹಲ್ಲೆ ಮತ್ತು ಹತ್ಯೆಗೆ ಸಂಬಂಧಿಸಿದ ಪ್ರಕರಣಗಳು ವಕೀಲ ಸಮುದಾಯವನ್ನು ಆಘಾತಕ್ಕೆ ಈಡುಮಾಡಿವೆ. ವಕೀಲರಿಗೆ ರಕ್ಷಣೆ ಇಲ್ಲ ಎಂಬುದು ಇದರಿಂದ ಮತ್ತೆ ಸಾಬೀತಾಗಿದೆ. ವಕೀಲರು ಅಪಾಯದಲ್ಲಿ ಬದುಕುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾಡಿದ್ದ ವಾಗ್ದಾನದಂತೆ ಹಾಲಿ ಬೆಳಗಾವಿ ಅಧಿವೇಶನದಲ್ಲಿ ವಕೀಲರ ರಕ್ಷಣಾ ಮಸೂದೆಗೆ ಕಾಯಿದೆ ರೂಪ ನೀಡಬೇಕು. ಕಾಯಿದೆ ಜಾರಿಗೊಳಿಸುವ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಲು ವಕೀಲರು ಬೆಳಗಾವಿಯಲ್ಲಿ ನೆರೆದು ಒತ್ತಾಯಿಸಲಿದ್ದೇವೆ” ಎಂದರು.

ಚಿಕ್ಕಮಗಳೂರಿನ ವಕೀಲ ಪ್ರೀತಮ್‌ ಮೇಲಿನ ಹಲ್ಲೆ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಅವರ ನೇತೃತ್ವದ ಪೀಠದ ಮುಂದೆ ವಕೀಲರ ರಕ್ಷಣಾ ಮಸೂದೆಯ ವಿಚಾರವೂ ಸಹ ಸುದೀರ್ಘವಾಗಿ ಚರ್ಚೆಯಾಗಿದೆ. ಮಸೂದೆಗೆ ಅಂತಿಮ ಸ್ಪರ್ಶ ನೀಡುವ ಕೆಲಸ ನಡೆಯುತ್ತಿದೆ ಎಂದು ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ನ್ಯಾಯಾಲಯಕ್ಕೆ ಈ ಸಂದರ್ಭದಲ್ಲಿ ವಿವರಿಸಿದ್ದರು.

ಮಸೂದೆಯನ್ನು ಜಾರಿಗೊಳಿಸುವ ಸಂಬಂಧ ಸರ್ಕಾರದಲ್ಲಿ ಪ್ರಸಕ್ತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ʼಬಾರ್‌ ಅಂಡ್‌ ಬೆಂಚ್‌ ʼ ಜೊತೆ ಮಾತನಾಡಿದ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಹಾಗೂ ಶಾಸಕ ಎ ಎಸ್‌ ಪೊನ್ನಣ್ಣ ಅವರು “ಮುಖ್ಯಮಂತ್ರಿ ಮತ್ತು ಕಾನೂನು ಸಚಿವರು ಮಸೂದೆ ಜಾರಿಗೆ ಒಪ್ಪಿದ್ದಾರೆ. ಈಗಾಗಲೇ ಸಂಪುಟ ಸಭೆ ಮುಂದೆ ವಕೀಲರ ರಕ್ಷಣಾ ಮಸೂದೆ ಬಂದಿತ್ತು. ಗೃಹ ಸಚಿವಾಲಯದ ಜೊತೆ ಚರ್ಚೆಯಾಗದಿರುವುದರಿಂದ ಅದನ್ನು ಚರ್ಚೆಗೆ ಇರಿಸಿಕೊಳ್ಳಲಾಗಿದೆ. ಆ ಚರ್ಚೆ ಮುಗಿದ ಬಳಿಕ ಅದನ್ನು ಸಂಪುಟ ಸಭೆ ಮುಂದೆ ಮಂಡಿಸಿ, ಅಧಿವೇಶನದಲ್ಲಿ ಮಂಡಿಸಲಾಗುವುದು. ಬಹುತೇಕ ಇದೇ ಅಧಿವೇಶದಲ್ಲಿ ಮಸೂದೆ ಜಾರಿಗೊಳಿಸಲು ಪ್ರಯತ್ನಿಸಲಾಗುವುದು” ಎಂದಿದ್ದಾರೆ.