ವಕೀಲರ ಮೇಲಿನ ದೌರ್ಜನ್ಯ ತಡೆಗಟ್ಟುವ ದಿಸೆಯಲ್ಲಿ ಕರ್ನಾಟಕ ವಕೀಲರ ರಕ್ಷಣಾ ಕಾಯಿದೆ ಜಾರಿಗೊಳಿಸುವಂತೆ ಒತ್ತಾಯಿಸಿ ವಿಧಾನಸೌಧ ಮುತ್ತಿಗೆ ಹಾಕಲು ಹೊರಟ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ನೂರಾರು ವಕೀಲರನ್ನು ನಗರದ ಕೆ ಆರ್ ವೃತ್ತದಲ್ಲಿ ಪೊಲೀಸರು ತಡೆದು ವಶಕ್ಕೆ ಪಡೆದ ಘಟನೆ ಸೋಮವಾರ ನಡೆಯಿತು.
ಕಾಯಿದೆ ಜಾರಿಗೆ ಆಗ್ರಹಿಸಿ ವಕೀಲರು ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿ ಭಾರಿ ಪ್ರತಿಭಟನೆ ನಡೆಸಿದ್ದರು. ಸೋಮವಾರದಿಂದ ವಿಧಾನಸೌಧದಲ್ಲಿ ಬಜೆಟ್ ಅಧಿವೇಶನ ಆರಂಭಗೊಂಡ ಹಿನ್ನೆಲೆಯಲ್ಲಿ ಕಾಯಿದೆಯನ್ನು ಮಂಡಿಸಿ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದ ವಕೀಲರು ವಿಧಾನಸೌಧ ಮುತ್ತಿಗೆ ಹಾಕಲು ಮುಂದಾಗಿದ್ದರು. ಬೆಂಗಳೂರಿನ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ಸಂಕೀರ್ಣದ ಆವರಣದಲ್ಲಿ ಮಧ್ಯಾಹ್ನ ವೇಳೆ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ ವಕೀಲರು, ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ ವಿಧಾನಸೌಧದ ಕಡೆಗೆ ಮೆರವಣಿಗೆ ಹೊರಟರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಧ್ಯಾಹ್ನ ಸದನ ಸಮಿತಿ ಸಭೆಯಲ್ಲಿ ಕಾಯಿದೆ ಕರಡನ್ನು ಮಂಡಿಸುವ ಸಂಬಂಧ ಒಪ್ಪಿಗೆ ಪಡೆಯಲಾಗುವುದು ಎಂದು ತಿಳಿದಿದ್ದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಸದನ ಸಮಿತಿ ಸಭೆ ನಡೆದಿಲ್ಲ. ನಾಳೆ ಮಂಡಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.ವಿವೇಕ್ ಸುಬ್ಬಾರೆಡ್ಡಿ, ಅಧ್ಯಕ್ಷ, ಬೆಂಗಳೂರು ವಕೀಲರ ಸಂಘ
ಪೊಲೀಸರು ಕೆ ಆರ್ ವೃತ್ತದಲ್ಲಿ ವಕೀಲರನ್ನು ಬ್ಯಾರಿಕೇಡ್ ಹಾಕಿ ತಡೆದರು. ವಿಧಾನಸೌಧ ಕಡೆಗೆ ತೆರಳಲು ಅವಕಾಶ ನೀಡದಿದ್ದಾಗ ವಕೀಲರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಜನಪ್ರತಿನಿಧಿಗಳು ಬರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಕೆ ಆರ್ ವೃತ್ತವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಸಾಕಷ್ಟು ಸಮಯ ಸಂಚಾರ ದಟ್ಟಣೆ ಏರ್ಪಟ್ಟು, ವಾಹನ ಸವಾರರು ತೊಂದರೆ ಅನುಭವಿಸಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಅರಿತ ಪೊಲೀಸರು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಮಾಜಿ ಅಧ್ಯಕ್ಷ ಎ ಪಿ ರಂಗನಾಥ್ ಸೇರಿದಂತೆ ಅನೇಕ ವಕೀಲರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು. ಉಳಿದ ಕೆಲ ವಕೀಲರು ಕೆ ಆರ್ ವೃತ್ತದಲ್ಲೇ ಪ್ರತಿಭಟನೆ ಮುಂದುವರಿಸಿದರೆ, ಹಲವು ವಕೀಲರು ಪ್ರತಿಭಟನೆ ಕೈಬಿಟ್ಟು ನ್ಯಾಯಾಲಯದ ಕಡೆಗೆ ಹೆಜ್ಜೆ ಹಾಕಿದರು.
ವಕೀಲರನ್ನು ಬೆಳಿಗ್ಗೆಯಿಂದಲೂ ದಾರಿ ತಪ್ಪಿಸಲಾಗಿದೆ. ಪ್ರಧಾನ ಮಂತ್ರಿಗಳು ಬಂದಿದ್ದರಿಂದ ಸಿಎಂ ಆದಿಯಾಗಿ ಎಲ್ಲರೂ ಅಲ್ಲಿದ್ದರು. ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರು ವಕೀಲರ ವಿಚಾರದಲ್ಲಿ ಪೂರ್ವಗ್ರಹ ಪೀಡಿತರಾಗಿದ್ದಾರೆ. ನಾಳೆಯೊಳಗೆ ಕಾಯಿದೆ ವಿಚಾರದಲ್ಲಿ ಸ್ಪಷ್ಟತೆ ಸಿಗದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು.ಎ ಪಿ ರಂಗನಾಥ್, ಮಾಜಿ ಅಧ್ಯಕ್ಷ, ಬೆಂಗಳೂರು ವಕೀಲರ ಸಂಘ
500ಕ್ಕೂ ಹೆಚ್ಚು ಪೊಲೀಸರು: ವಕೀಲರು ವಿಧಾನಸೌಧ ಮುತ್ತಿಗೆ ಹಾಕುವುದನ್ನು ತಡೆಯಲು ಅಪಾರ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಬೆಳಗ್ಗೆಯಿಂದಲೇ ನಗರ ಸಿವಿಲ್ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಪೊಲೀಸರು ಬೀಡುಬಿಟ್ಟಿದ್ದರು. ನ್ಯಾಯಾಲಯದ ಆವರಣದಲ್ಲಿಯೇ ಪ್ರತಿಭಟನೆ ನಡೆಸುವಂತೆ ಪೊಲೀಸರು ಮಾಡಿದ ಮನವಿಯನ್ನು ಬದಿಗೆ ಸರಿಸಿ ರಸ್ತೆಗೆ ಇಳಿದ ವಕೀಲರು, ಬೃಹತ್ ಮೆರವಣಿಯೊಂದಿಗೆ ಕೆ ಆರ್ ವೃತ್ತಕ್ಕೆ ಬಂದರು. ಅಲ್ಲಿ ಮಾನವ ಸರಳಿ ನಿರ್ಮಿಸಿದ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಮೂವರು ಡಿಸಿಪಿ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿದಂತೆ ಐನೂರಕ್ಕು ಹೆಚ್ಚು ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದರು.