Justice BV Nagarathna 
ಸುದ್ದಿಗಳು

ಕೆಲ ವಕೀಲರು ವೈವಾಹಿಕ ಪ್ರಕರಣಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಯ ಹುಟ್ಟಿಸುತ್ತಿದ್ದಾರೆ: ನ್ಯಾ. ಬಿ ವಿ ನಾಗರತ್ನ

ಇದೇ ವೇಳೆ ಕ್ಷುಲ್ಲಕ ಮೊಕದ್ದಮೆಗಳನ್ನು ತಪ್ಪಿಸುವಂತೆ ಅವರು ಯುವ ವಕೀಲರಿಗೆ ಸಲಹೆ ನೀಡಿದ್ದು ವ್ಯಾಜ್ಯಕಾರರು ಅಥವಾ ಪ್ರಭುತ್ವಕ್ಕೆ ಕಿರುಕುಳ ನೀಡಲು ಮಗ್ನರಾಗಿರುವವರು ತಮ್ಮನ್ನು ಬಳಸಿಕೊಳ್ಳಲು ಬಿಡದಂತೆ ನೋಡಿಕೊಳ್ಳಿ ಎಂದರು.

Bar & Bench

ಸಾಮಾಜಿಕ ಮಾಧ್ಯಮಗಳಲ್ಲಿ ಕಾನೂನು ಸಾಕ್ಷರತೆ ಮೂಡಿಸುವ ನೆಪದಲ್ಲಿ ಕೆಲ ವಕೀಲರು ವಿಶೇಷವಾಗಿ ವೈವಾಹಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಯದ ಭಾವನೆ  ಹರಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಶನಿವಾರ ಹೇಳಿದ್ದಾರೆ.

ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಎನ್ಎಲ್‌ಯು) 11ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

ಕಕ್ಷಿದಾರರಿಗೆ ಸಲಹೆ ನೀಡುವಾಗ ವಕೀಲರು ಜವಾಬ್ದಾರಿಯುತವಾಗಿರಬೇಕಿದ್ದು, ಕಕ್ಷಿದಾರರ ಬಗೆಗಿನ ಕರ್ತವ್ಯ ಮತ್ತು ನ್ಯಾಯಾಲಯದೆಡೆಗಿನ ಕರ್ತವ್ಯದ ನಡುವೆ ಸಮತೋಲನ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಕ್ಷುಲ್ಲಕ ಮೊಕದ್ದಮೆಗಳನ್ನು ತಪ್ಪಿಸುವಂತೆ ಅವರು ಯುವ ವಕೀಲರಿಗೆ ಸಲಹೆ ನೀಡಿದ್ದು ವ್ಯಾಜ್ಯಕಾರರು ಅಥವಾ ಪ್ರಭುತ್ವಕ್ಕೆ ಕಿರುಕುಳ ನೀಡಲು ಮಗ್ನರಾಗಿರುವವರು ತಮ್ಮನ್ನು ಬಳಸಿಕೊಳ್ಳಲು ಬಿಡದಂತೆ ನೋಡಿಕೊಳ್ಳಿ ಎಂದರು

ನ್ಯಾಯಾಲಯಗಳನ್ನು ದುರುಪಯೋಗಪಡಿಸಿಕೊಳ್ಳದಿರುವ ಜವಾಬ್ದಾರಿ ವಕೀಲರ ಮೇಲಿದ್ದು ಅವರು, ಹಾಗೆ ದುರುಪಯೋಗಪಡಿಸಿಕೊಳ್ಳುವವರ ಮುಖವಾಡಗಳಾಗಬಾರದು ಎಂದರು.

ಈಚೆಗಷ್ಟೇ ಪದವಿ ಪಡೆದವರನ್ನುದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ನಾಗರತ್ನ ಅವರು ತಮ್ಮ ನೈತಿಕ, ಬೌದ್ಧಿಕ, ಪ್ರಾಯೋಗಿಕ ಶಿಕ್ಷಣದ ಕಾರಣದಿಂದಾಗಿ ಹಾಗೂ ಕಾನೂನಿನ ಮತ್ತು ಭಾರತೀಯ ಸಮಾಜದ ತಿಳಿವಳಿಕೆಯಿಂದಾಗಿ ವಕೀಲರು ರಚನಾತ್ಮಕ ನಾಗರಿಕರಾಗಲು ಹೆಚ್ಚು ಸೂಕ್ತರು ಎಂದು ಹೇಳಿದರು.

ಮೊಕದ್ದಮೆಗಳ ಕುರಿತು ಮಾತನಾಡಿದ ಅವರು,ಕೇಸ್‌ ಫೈಲಿಂಗ್‌ ಎಂಬುದು ಕೇವಲ ಕಾಲಾನುಕ್ರಮ ಅಥವಾ ಘಟನೆಗಳ ಸೂಚ್ಯಂಕವಾಗಿರದೆ ಜೀವನದ ಎಲ್ಲಾ ಹಂತಗಳಲ್ಲಿ ಮಾನವನ ಹೋರಾಟಗಳು ಮತ್ತು ನೋವುಗಳ ಬಗ್ಗೆ ಮಾತನಾಡುತ್ತದೆ ಎಂದು ಅಭಿಪ್ರಾಯಪಟ್ಟರು.

ಧ್ರುವೀಕರಣ ಹೆಚ್ಚಿರುವ ಜಗದಲ್ಲಿ ಕಂದಕಗಳಿಗೆ ಸೇತುವೆಯಾಗಲು ಮತ್ತು ಅರಿವು ಮೂಡಿಸಲು ವಕೀಲರಿಗೆ ಅವಕಾಶವಿದೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.