High Court
High Court 
ಸುದ್ದಿಗಳು

[ವಕೀಲರ ಧರಣಿ] ನ್ಯಾಯಾಲಯಗಳು ಕಾರ್ಯನಿರ್ವಹಿಸದಿದ್ದರೆ ಸಮಾಜಕ್ಕೆ ಅಪಾರ ಹಾನಿಯಾಗಲಿದೆ: ಕರ್ನಾಟಕ ಹೈಕೋರ್ಟ್‌

Bar & Bench

ವಕೀಲರ ಧರಣಿಯಿಂದಾಗಿ ನ್ಯಾಯಾಲಯಗಳು ಕಾರ್ಯನಿರ್ವಹಿಸದಿದ್ದರೆ ಕಕ್ಷಿದಾರರಿಗೆ ಹೆಚ್ಚಿನ ಸಮಸ್ಯೆಯಾಗಲಿದೆ. ಇದು ಸಮಾಜದ ಮೇಲೂ ಗಣನೀಯ ಪರಿಣಾಮ ಉಂಟು ಮಾಡಲಿದೆ ಎಂದು ಹೈಕೋರ್ಟ್‌ ಹೇಳಿದೆ.

ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿದ್ದಕ್ಕಾಗಿ ವಕೀಲರ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್‌ ಮೇಲಿನಂತೆ ಹೇಳಿತು.

ನ್ಯಾಯಾಲಯದ ಕಲಾಪಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ವಕೀಲರ ಪರಿಷತ್‌, ಸಂಘಗಳ ಕರ್ತವ್ಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ.

“ಸದಸ್ಯರು ಹುರುಪಿನಿಂದ ಸಕ್ರಿಯವಾಗಿರುವುದನ್ನು ಎಲ್ಲರೂ ಮೆಚ್ಚುತ್ತಾರೆ. ನ್ಯಾಯಾಲಯದ ಕಲಾಪಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ವಕೀಲರ ಕರ್ತವ್ಯವಾಗಿದೆ. ನ್ಯಾಯಾಲಯದ ಚಟುವಟಿಕೆಗಳಿಗೆ ಸಮಸ್ಯೆಯಾದರೆ ಸಾಮಾನ್ಯ ಜನರಿಗೆ ತೀವ್ರ ಸಮಸ್ಯೆಯಾಗಲಿದೆ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಕೋವಿಡ್‌ ಅಪಾಯದ ನಡುವೆಯೂ ನ್ಯಾಯಾಲಯದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂಬುದನ್ನು ಸಂಘದ ಸದಸ್ಯರು ಮನನ ಮಾಡಿಕೊಳ್ಳಬೇಕು. “ಸುಪ್ರೀಂ ಕೋರ್ಟ್‌ ರೂಪಿಸಿರುವ ಕಾನೂನು ಪಾಲಿಸುವುದಾಗಿ ಮುಚ್ಚಳಿಕೆ ನೀಡಲು ನೀವು ಸಿದ್ಧರಿದ್ದೀರಾ? ಸುಪ್ರೀಂ ಕೋರ್ಟ್‌ ಇದಕ್ಕೆ ಅನುಮತಿಸುವುದಿಲ್ಲ (ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸುವುದು)” ಎಂದು ಪೀಠ ಹೇಳಿದೆ.

ನ್ಯಾಯಾಲಯದ ಕಲಾಪಗಳು ಸರಾಗವಾಗಿ ನಡೆಯದಿದ್ದರೆ ಕಕ್ಷಿದಾರರಿಗೆ ತೀವ್ರ ತರಹದ ಸಮಸ್ಯೆಗಳಾಗಲಿವೆ. “ಕಕ್ಷಿದಾರರಿಗೆ ತೀವ್ರ ಸಮಸ್ಯೆಯಾಗಲಿದೆ. ನಾವೆಲ್ಲರೂ ಇಲ್ಲಿ ಕಕ್ಷಿದಾರರಿಗಾಗಿ ಇದ್ದೇವೆ. ಒಂದು ದಿನದ ನ್ಯಾಯಾಲಯ ನಡೆಸಲು ಎಷ್ಟು ಹಣ ವೆಚ್ಚ ಮಾಡಲಾಗುತ್ತದೆ? ಇದು ಜನ ಸಾಮಾನ್ಯರ ಹಣ” ಎಂದು ನ್ಯಾಯಾಲಯ ಹೇಳಿದೆ.

ಮುಚ್ಚಳಿಕೆ ನೀಡಿದರೆ ವಿಚಾರವು ಇಲ್ಲಿಗೆ ಮುಗಿಯಲಿದೆ ಎಂದು ನ್ಯಾಯಾಲಯ ಹೇಳಿತು. ಆಗ ಆರೋಪಿಗಳ ಪರ ವಕೀಲರು ಮಂಡ್ಯ ನ್ಯಾಯಾಲಯದ ಆವರಣದಲ್ಲಿ ಈಚೆಗೆ ವಕೀಲರ ಬರ್ಬರ ಹತ್ಯೆಯ ಹಿನ್ನೆಲೆಯಲ್ಲಿ ವಕೀಲರು ಪ್ರತಿಭಟನೆ ನಡೆಸಿದರು ಎಂದು ಪೀಠದ ಗಮನಸೆಳೆದರು.

“ಎಫ್‌ಐಆರ್‌ ದಾಖಲಾಗದಿದ್ದರೆ ಧರಣಿ ನಡೆಸಿ. ರಿಟ್‌ ಸಲ್ಲಿಸಿ, ಅದನ್ನು ನ್ಯಾಯಾಲಯ ವಿಚಾರಣೆ ನಡೆಸಲಿದೆ. ಆದರೆ, ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಸಂಘದ ಸದಸ್ಯರ ವಿರುದ್ಧ ಹೋಗುವುದಕ್ಕೆ ನಮಗೆ ಇಷ್ಟವಿಲ್ಲ. ಆದರೆ, ಧರಣಿಯಿಂದ ಸಮಾಜಕ್ಕೆ ಅಪಾರ ನಷ್ಟ ಉಂಟು ಮಾಡಿದಂತಾಗುತ್ತದೆ” ಎಂದು ಪೀಠ ಹೇಳಿತು.

ನ್ಯಾಯಾಂಗ ನಿಂದನೆ ಅರ್ಜಿಯ ಉದ್ದೇಶ ಯಾವುದೇ ವಕೀಲರನ್ನು ಸರಳುಗಳ ಹಿಂದೆ ತಳ್ಳುವುದಲ್ಲ. ಬದಲಿಗೆ ವಕೀಲರ ಸಹಕಾರ ಗಿಟ್ಟಿಸುವುದಾಗಿದೆ ಎಂದು ನ್ಯಾಯಾಲಯ ಹೇಳಿದೆ. ಈ ಮಧ್ಯೆ, ವಕೀಲರು ಪಶ್ಚಾತಾಪ ವ್ಯಕ್ತಪಡಿಸಿ, ಮುಚ್ಚಳಿಕೆ ನೀಡಿದರೆ ಉದಾರವಾದ ನಿಲುವು ತಳೆಯಬೇಕು ಎಂದು ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್‌ ರೂಪಿಸಿರುವ ಕಾನೂನನ್ನು ಪಾಲಿಸಲಿಸುತ್ತೇವೆ ಎಂದು ಹೇಳಿ ಅಫಿಡವಿಟ್‌ ಸಲ್ಲಿಸುವುದರ ಜೊತೆಗೆ ಬೇಷರತ್‌ ಕ್ಷಮೆ ಕೋರುವಂತೆ ಆರೋಪಿತರ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿತು. ಏಪ್ರಿಲ್‌ 22ಕ್ಕೆ ವಿಚಾರಣೆ ಮುಂದೂಡಲಾಗಿದೆ.