Lawyers 
ಸುದ್ದಿಗಳು

ವಕೀಲರ ಕಲ್ಯಾಣ ನಿಧಿ ಸ್ಟ್ಯಾಂಪ್‌ ಶುಲ್ಕ: ಕಾನೂನು ಆಯೋಗದ ವರದಿ ಕುರಿತ ಮಾಹಿತಿ ನೀಡಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಕಾನೂನು ಆಯೋಗವು 76ನೇ ವರದಿ ಸಿದ್ಧಪಡಿಸಿದ್ದು, ಅದರಲ್ಲಿ ಹೈಕೋರ್ಟ್‌ನಲ್ಲಿ ಹಾಲಿ ₹50 ಶುಲ್ಕವನ್ನು ₹60ಕ್ಕೆ ಹೆಚ್ಚಿಸಲು ಸಲಹೆ ನೀಡಲಾಗಿದೆ. ಇದರಲ್ಲಿ ₹10 ಅನ್ನು ವಕೀಲರ ಗುಮಾಸ್ತರಿಗೆ ನೀಡಬೇಕು ಎಂದು ಹೇಳಲಾಗಿದೆ ಎಂದು ಮೂರ್ತಿ ನಾಯ್ಕ್‌.

Bar & Bench

ವಕೀಲರ ಕಲ್ಯಾಣ ನಿಧಿ ಸ್ಟ್ಯಾಂಪ್‌ ಶುಲ್ಕ ಹೆಚ್ಚಳದ ಅಂಶಗಳನ್ನು ಒಳಗೊಂಡಿರುವ ಕಾನೂನು ಆಯೋಗದ 76ನೇ ವರದಿಗೆ ಒಪ್ಪಿಗೆ ಮತ್ತು ಅದಕ್ಕೆ ಸಂಬಂಧಿಸಿದ ಬೆಳವಣಿಗೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಕರ್ನಾಟಕ ವಕೀಲ ಗುಮಾಸ್ತರ ಕಲ್ಯಾಣ ನಿಧಿಗೆ ಹಣ ಬರುವಂತೆ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಕೋರಿ ಕರ್ನಾಟಕ ರಾಜ್ಯಮಟ್ಟದ ವಕೀಲ ಗುಮಾಸ್ತರ ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. 

ವಕೀಲರ ಗುಮಾಸ್ತರ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲ ಮೂರ್ತಿ ಡಿ. ನಾಯ್ಕ್‌ ಅವರು “ಕಾನೂನು ಆಯೋಗವು 76ನೇ ವರದಿ ಸಿದ್ಧಪಡಿಸಿದ್ದು, ಅದರಲ್ಲಿ ಹೈಕೋರ್ಟ್‌ನಲ್ಲಿ ಹಾಲಿ ₹50 ಶುಲ್ಕವನ್ನು ₹60 ರೂಪಾಯಿಗೆ ಹೆಚ್ಚಿಸಲು ಸಲಹೆ ನೀಡಲಾಗಿದೆ. ಇದರಲ್ಲಿ ₹10 ಅನ್ನು ವಕೀಲರ ಗುಮಾಸ್ತರಿಗೆ ನೀಡಬೇಕು ಎಂದು ಹೇಳಲಾಗಿದೆ. ಜಿಲ್ಲಾ ನ್ಯಾಯಾಲಯಗಳಲ್ಲಿ ₹35ಕ್ಕೆ ಹೆಚ್ಚಿಸಿ, ₹5 ಅನ್ನು ವಕೀಲರ ಗುಮಾಸ್ತರಿಗೆ ನೀಡಬೇಕು ಎಂದು ಹೇಳಲಾಗಿದೆ. ಕಾನೂನು ಆಯೋಗದ ವರದಿಯನ್ನು ಜಾರಿಗೊಳಿಸಿದರೆ ಎಲ್ಲವೂ ಸರಿಯಾಗುತ್ತದೆ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಮೊಹಮ್ಮದ್‌ ಜಾಫರ್‌ ಅವರು “ಕಾನೂನು ಆಯೋಗದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದರು.

ಅದಕ್ಕೆ ಪೀಠವು “ಎರಡು ವಾರ ಸಮಯ ನೀಡೋಣ, ಏನಾಗುತ್ತೋ ನೋಡೋಣ” ಎಂದಿತು. ಅಲ್ಲದೇ, ವಕೀಲರ ಕಲ್ಯಾಣ ನಿಧಿ ಸ್ಟ್ಯಾಂಪ್‌ ಅನ್ನು ಹೈಕೋರ್ಟ್‌ನಲ್ಲಿ ₹60 ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ₹35ಕ್ಕೆ ಹೆಚ್ಚಿಸಲು ಕಾನೂನು ಆಯೋಗವು ವರದಿಯಲ್ಲಿ ಶಿಫಾರಸ್ಸು ಮಾಡಿದ್ದು, ಅದನ್ನು ಒಪ್ಪಬೇಕಿದೆ. ಈ ಪೈಕಿ ಕ್ರಮವಾಗಿ ₹10 ಮತ್ತು ₹5 ಅನ್ನು ವಕೀಲರ ಗುಮಾಸ್ತರ ಕಲ್ಯಾಣ ನಿಧಿಗೆ ನೀಡಲು ಸಲಹೆ ನೀಡಲಾಗಿದೆ. ಕಾನೂನು ಆಯೋಗದ ವರದಿಯ ಕುರಿತಾದ ಬೆಳವಣಿಗೆ ಮತ್ತು ಆಯೋಗದ ವರದಿಗೆ ಒಪ್ಪಿಗೆ ನೀಡುವ ಕುರಿತಾದ ವಿಚಾರ ಏನಿದ್ದರೂ ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯ ಮುಂದಿಡಬೇಕು” ಎಂದು, ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು.

ಅಂತಿಮವಾಗಿ ಪೀಠವು ಮೌಖಿಕವಾಗಿ “ಪ್ರತಿಯೊಂದು ಸ್ಟ್ಯಾಂಪ್‌ನಲ್ಲಿನ ₹10 ನೀಡಿದರೆ ಅವರಿಗೆ ವಕೀಲರ ಗುಮಾಸ್ತರಿಗೆ ಖಂಡಿತವಾಗಿಯೂ ನೆರವಾಗುತ್ತದೆ” ಎಂದಿತು.

ಇದಕ್ಕೆ ಮೂರ್ತಿ ನಾಯ್ಕ್‌ ಅವರು “ರಾಜ್ಯದಲ್ಲಿ ಪ್ರತಿ ದಿನ ₹25 ಸಾವಿರ ವಕಾಲತ್ತು ಫೈಲ್‌ ಆಗುತ್ತವೆ. ಇದರಿಂದ ಸಾಕಷ್ಟು ಅನುಕೂಲವಾಗುತ್ತದೆ” ಎಂದರು.