Justice M Nagaprasanna 
ಸುದ್ದಿಗಳು

ಎಲ್‌ಸಿಎ ದತ್ತಾಂಶ ಕಳವು ಮಾಡಿ ಡಾರ್ಕ್‌ ವೆಬ್‌ ಮೂಲಕ ಮಾರಾಟ: ಎಂಜಿನಿಯರ್‌ ವಿರುದ್ಧದ ಪ್ರಕರಣ ವಜಾಕ್ಕೆ ನಕಾರ

ಇಂತಹ ಪ್ರಕರಣಗಳ ತನಿಖೆ ಯುದ್ದೋಪಾದಿಯಲ್ಲಿ ನಡೆಯಬೇಕು, ನಾಲ್ಕು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿರುವ ನ್ಯಾಯಾಲಯ.

Bar & Bench

ವೈಮಾನಿಕ ಅಭಿವೃದ್ಧಿ ಸಂಸ್ಥೆಯ ಲಘು ಯುದ್ದ ವಿಮಾನ (ಎಲ್‌ಸಿಎ) ಅಭಿವೃದ್ಧಿಗೆ ಸಂಬಂಧಿಸಿದ ದತ್ತಾಂಶವನ್ನು ಕಳವು ಮಾಡಿ ಡಾರ್ಕ್‌ ವೆಬ್‌ ಮೂಲಕ ಮಾರಾಟ ಮಾಡಿದ ಪ್ರಕರಣದಲ್ಲಿ 27 ವರ್ಷದ ವೈಮಾನಿಕ ಎಂಜಿನಿಯರ್‌ ವಿರುದ್ಧದ ಕ್ರಿಮಿನಲ್‌ ಕೇಸ್‌ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

2021ರಲ್ಲಿ ತನ್ನ ವಿರುದ್ಧ ಹೂಡಿದ್ದ ಪ್ರಕರಣ ರದ್ದು ಕೋರಿ ಶಿವರಾಮ ಕೃಷ್ಣ ಚೆನ್ನುಬೊಯಿನಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಜಾಗೊಳಿಸಿದೆ. ಇಂತಹ ಪ್ರಕರಣಗಳ ತನಿಖೆ ಯುದ್ದೋಪಾದಿಯಲ್ಲಿ ನಡೆಯಬೇಕು, ನಾಲ್ಕು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದೆ.

“ಪ್ರಕರಣದಲ್ಲಿ ತನಿಖೆಯನ್ನು ರಾತ್ರೋರಾತ್ರಿ ಪೂರ್ಣಗೊಳಿಸಲಾಗದು. ಹಲವು ಸೂಕ್ಷ್ಮ ಹಾಗೂ ಗೌಪ್ಯ ವಿಚಾರಗಳು ಇದರಲ್ಲಿ ಅಡಗಿವೆ. ಜೊತೆಗೆ ಅರ್ಜಿದಾರರು ರಾಷ್ಟ್ರದ ಭದ್ರತೆಯ ಹಿತಾಸಕ್ತಿಯೊಂದಿಗೆ ರಾಜಿ ಆಗುವಂತೆ ನಡೆದುಕೊಂಡಿದ್ದಾರೆ. ಅರ್ಜಿದಾರರು ಅತ್ಯಂತ ಸೂಕ್ಷ್ಮ ದತ್ತಾಂಶವನ್ನು ಡಾರ್ಕ್‌ ವೆಬ್‌ ಮೂಲಕ ಸೋರಿಕೆ ಮಾಡಿದ್ದಾರೆ ಎನ್ನಲಾಗಿದ್ದು, ಇದು ರಾಷ್ಟ್ರದ ಭದ್ರತೆಯನ್ನು ಅಸ್ಥಿರಗೊಳಿಸುವ ಯತ್ನವಾಗಿದೆ” ಎಂದು ಪೀಠ ಹೇಳಿದೆ.

“ಅಪರಾಧದಲ್ಲಿ ತೊಡಗಿರುವ ಯಾವುದೇ ವ್ಯಕ್ತಿ, ಯಾವುದೇ ರೀತಿಯಲ್ಲಿ ರಾಷ್ಟ್ರದ ಸುರಕ್ಷತೆಯನ್ನು ಅಸ್ಥಿರಗೊಳಿಸಲು ಮುಂದಾದರೆ ಅದನ್ನು ಲಘುವಾಗಿ ಪರಿಗಣಿಸಲಾಗದು. ಅರ್ಜಿದಾರರು ತನ್ನನ್ನು ತಾನು ಅಮಾಯಕ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ, ಇದು ಇಲ್ಲಿಗೆ ಬಿಡುವಂತಹ ಪ್ರಕರಣವಲ್ಲ, ಈ ಪ್ರಕರಣದಲ್ಲಿ ತನಿಖೆ ಆಗಲೇಬೇಕು. ಸತ್ಯಾಂಶ ಹೊರಬರಬೇಕು” ಎಂದು ನ್ಯಾಯಾಲಯ ಅಭಿಪಾಯಪಟ್ಟಿದೆ.

“ದತ್ತಾಂಶ ಸೋರಿಕೆ ಅಥವಾ ಕಳವು ಮತ್ತು ಡಾರ್ಕ್‌ವೆಬ್‌ ಮೂಲಕ ಅದರ ಮಾರಾಟ ನಮ್ಮ ರಾಷ್ಟ್ರ ಸೇರಿದಂತೆ ಎಲ್ಲ ದೇಶಗಳಿಗೂ ಆತಂಕದ ವಿಚಾರ. ಹೀಗಾಗಿ ದತ್ತಾಂಶ ಸೋರಿಕೆಯ ಮೂಲದವರೆಗೆ ತನಿಖೆ ಆಗಲೇಬೇಕು. ಅಕ್ರಮ ಹಣಕಾಸಿನ ವಹಿವಾಟು ನಡೆದಿದ್ದರೆ ಅದೂ ಹೊರಬರಬೇಕು ಮತ್ತು ಇಂತಹ ಸೂಕ್ಷ್ಮ ದತ್ತಾಂಶ ಸೋರಿಕೆ ಕೃತ್ಯದಲ್ಲಿ ಭಾಗಿಯಾದವರನ್ನು ಕಠಿಣ ರೀತಿಯಲ್ಲಿ ಹತ್ತಿಕ್ಕಬೇಕು” ಎಂದು ಪೀಠ ಆದೇಶಿಸಿದೆ.

ಕೇಂದ್ರ ಸರ್ಕಾರ ಪರ ವಾದ ಮಂಡಿಸಿದ್ದ ಸಹಾಯಕ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿ ಭೂಷಣ್‌ ಅವರು “18 ತಿಂಗಳ ನಂತರ ಸಿಐಡಿ ಅರ್ಜಿದಾರರನ್ನು ಬಂಧಿಸಿದೆ. ಆತ ದೇಶದ ಭದ್ರತೆಯೊಂದಿಗೆ ರಾಜೀ ಮಾಡಿಕೊಂಡಿದ್ದಾನೆ. ಪ್ರಕರಣದಲ್ಲಿ ಇತರರ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ” ಎಂದು ವಾದಿಸಿದ್ದರು.

ಅರ್ಜಿದಾರರ ಪರ ವಕೀಲರು “ಅತ್ಯಂತ ತಡವಾಗಿ ಪ್ರಕರಣ ದಾಖಲಿಸಲಾಗಿದೆ. ಆ ಕೃತ್ಯದಲ್ಲಿ ಅರ್ಜಿದಾರರು ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಜೊತೆಗೆ ತಮ್ಮಂತಹ ಪ್ರತಿಭಾವಂತ ವಿದ್ಯಾರ್ಥಿಯ ಮೇಲೆ ಮತ್ತಷ್ಟು ತನಿಖೆಗೆ ಅವಕಾಶ ನೀಡಿದರೆ, ಅದು ಕಾನೂನಿನ ದುರ್ಬಳಕೆಯಾಗಲಿದೆ. ಹೀಗಾಗಿ ಪ್ರಕರಣ ರದ್ದುಗೊಳಿಸಬೇಕು” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಭಾರತ ಸರ್ಕಾರದ ರಕ್ಷಣಾ ಇಲಾಖೆಯಡಿ ಬರುವ ವೈಮಾನಿಕ ಅಭಿವೃದ್ಧಿ ಸಂಸ್ಥೆಯು (ಎಡಿಎ) ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಜೊತೆ ಕೆಲವು ಯೋಜನೆಗಳ ಜಾರಿಗೆ  ಕಾರ್ಯ ನಿರ್ವಹಿಸುತ್ತಿತ್ತು. ಆಗ ಐಐಎಸ್‌ಸಿಯಲ್ಲಿ ಇಂಟರ್ನಿಯಾಗಿದ್ದ ಅರ್ಜಿದಾರರು ಯುದ್ದ ಸಮಯದಲ್ಲಿ ಬಳಕೆ ಮಾಡುವ ಲಘು ಯುದ್ಧ ವಿಮಾನಗಳ ತಯಾರಿಕೆಯಲ್ಲಿಯೂ ಇಂಟರ್ನಿಯಾಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ಅವರು ಸೋರ್ಸ್‌ ಕೋಡ್‌ ಪಡೆದು ಡಾರ್ಕ್‌ ವೆಬ್‌ ಮೂಲಕ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರಂಭದಲ್ಲಿ ಮಾಹಿತಿ ಯಾರಿಂದ ಸೋರಿಕೆಯಾಗಿದೆ ಎಂಬುದು ತಿಳಿದಿರಲಿಲ್ಲ. ಇಲಾಖೆ ಸತತ 18 ತಿಂಗಳು ನಡೆಸಿದ ಆಂತರಿಕ ತನಿಖೆಯಲ್ಲಿ ಅರ್ಜಿದಾರರು ಭಾಗಿಯಾಗಿರುವ ಅಂಶ ಕಂಡು ಬಂದಿತ್ತು.

Siva Rama Krushna Chennuboina Vs State of Karnataka.pdf
Preview