ಸುದ್ದಿಗಳು

ಸರ್ಕಾರದ ನಕಾರಾತ್ಮಕ ಗ್ರಹಿಕೆಯನ್ನು ಸ್ವಾತಂತ್ರ್ಯದ ಪ್ರಮಾಣಪತ್ರ ಎಂದುಕೊಳ್ಳಿ: ನ್ಯಾ. ಅಕಿಲ್ ಖುರೇಶಿ

Bar & Bench

ರಾಜಸ್ಥಾನ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಕಿಲ್‌ ಖುರೇಶಿ ಅವರು ಭಾನುವಾರ ನಿವೃತ್ತರಾಗಲಿದ್ದಾರೆ. ಎಲ್ಲಾ ನ್ಯಾಯಾಂಗ ತೀರ್ಪುಗಳನ್ನು ಪರಿಣಾಮ ಲೆಕ್ಕಿಸದೆ ನೀಡಿದ್ದೇನೆ. ಈ ಕಾರಣಕ್ಕೆ ಹೆಮ್ಮೆಯಿಂದ ಪೀಠ ತೊರೆಯುತ್ತಿರುವುದಾಗಿ ಶನಿವಾರ ನಡೆದ ಭಾವನಾತ್ಮಕ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಹೇಳಿದರು.

ಹೀಗೆ ತಾವು ನ್ಯಾಯದಾನದ ಹಾದಿಯಲ್ಲಿ ನಡೆದಿರುವುದು ತಮ್ಮ ಪ್ರಗತಿಗೆ ಅಡ್ಡಿಯಾಗಿದ್ದರೂ ತಮ್ಮ ಏಳಿಗೆಗಿಂತ ಹೆಚ್ಚಾಗಿ ತಾವು ವಕೀಲ ವರ್ಗದಿಂದ ಪಡೆದ ಪ್ರೀತಿ ಮತ್ತು ಬೆಂಬಲವನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.

"ಇತ್ತೀಚೆಗೆ ನಿವೃತ್ತ ಸಿಜೆಐ ಒಬ್ಬರು ತಮ್ಮ ಆತ್ಮಚರಿತ್ರೆ ಬರೆದಿದ್ದಾರೆ. ನಾನು ಅದನ್ನು ಓದಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ ʼಸರ್ಕಾರ ನನ್ನ (ನ್ಯಾ. ಖುರೇಶಿ) ಬಗ್ಗೆ ಹೊಂದಿದ್ದ ನಕಾರಾತ್ಮಕ ಗ್ರಹಿಕೆಯಿಂದಾಗಿ ನನ್ನನ್ನು ಮಧ್ಯಪ್ರದೇಶ ಹೈಕೋರ್ಟ್‌ನಿಂದ ತ್ರಿಪುರ ಹೈಕೋರ್ಟ್‌ಗೆ ವರ್ಗಾಯಿಸಿದರುʼ ಎಂದು ಅವರು ಹೇಳಿಕೊಂಡಿದ್ದಾರೆ. ಸಾಂವಿಧಾನಿಕ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನಾಗರಿಕರ ಮೂಲಭೂತ ಹಕ್ಕು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವುದು ನನ್ನ ಅತ್ಯಂತ ಪ್ರಾಥಮಿಕ ಕರ್ತವ್ಯವಾಗಿದ್ದು ನಾನು ಅದನ್ನು ಸ್ವಾತಂತ್ರ್ಯದ ಪ್ರಮಾಣಪತ್ರ ಎಂದುಕೊಂಡಿದ್ದೇನೆ" ಎಂಬುದಾಗಿ ಅವರು ಹೇಳಿದರು.

ನ್ಯಾ. ಅಕಿಲ್‌ ಖುರೇಶಿ ಅವರ ಅಧಿಕಾರಾವಧಿ ಮತ್ತು ವರ್ಗಾವಣೆಯು ಕೊಲಿಜಿಯಂ ವ್ಯವಸ್ಥೆ ಬಗ್ಗೆ ಹೆಚ್ಚು ಚರ್ಚೆ ಹುಟ್ಟುಹಾಕಿತ್ತು. ಹೈಕೋರ್ಟ್‌ಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ನ್ಯಾಯಮೂರ್ತಿಗಳಲ್ಲೇ ಅತ್ಯಂತ ಹಿರಿಯ ನ್ಯಾಯಮೂರ್ತಿಯಾದರೂ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಪದೋನ್ನತಿ ನೀಡದೇ ಇದ್ದ ಬಗ್ಗೆ ನ್ಯಾಯವಾದಿಗಳ ಸಮುದಾಯದಿಂದ ಅನೇಕ ಬಾರಿ ಆಕ್ಷೇಪ ವ್ಯಕ್ತವಾಗಿತ್ತು.