Karnataka High Court 
ಸುದ್ದಿಗಳು

[ಪಚ್ಚನಾಡಿ ತ್ಯಾಜ್ಯ ನಿರ್ವಹಣೆ] ಕೆಲಸ ಆರಂಭಿಸದಿದ್ದಲ್ಲಿ ಮಂಗಳೂರು ಪಾಲಿಕೆ ಆಯುಕ್ತರ ಹಾಜರಾತಿಗೆ ಹೈಕೋರ್ಟ್ ನಿರ್ದೇಶನ

ತ್ಯಾಜ್ಯ ನಿರ್ವಹಣೆಗಾಗಿ ರಾಜ್ಯ ಸರ್ಕಾರವು ಒಂದಷ್ಟು ಅನುದಾನ ಬಿಡುಗಡೆ ಮಾಡಿದೆ. ಇದನ್ನು ಬಳಸಿ ಕೆಲಸ ಆರಂಭಿಸಬೇಕು ಎಂದು ವಕೀಲ ಶ್ರೀಧರ್‌ ಪ್ರಭು.

Bar & Bench

ಮಂಗಳೂರಿನ ಪಚ್ಚನಾಡಿ ಕಸ ಸುರಿಯುವ ಸ್ಥಳದಲ್ಲಿ ಸುದೀರ್ಘ ಕಾಲದಿಂದ ಸಂಗ್ರಹವಾಗಿರುವ ತ್ಯಾಜ್ಯವನ್ನು ಸ್ಥಳಾಂತರಿಸುವ ಮತ್ತು ನಿರ್ವಹಿಸುವ ಸಂಬಂಧ ಮುಂದಿನ ವಿಚಾರಣೆಯ ಒಳಗೆ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕದೇ, ಕೆಲಸ ಆರಂಭಿಸದಿದ್ದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಆದೇಶಿಸಿದೆ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ (ಪಿಐಎಲ್‌) ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುತಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ಮಂಗಳವಾರ ನಡೆಸಿತು.

“ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) ಮುಂದಿನ ವಿಚಾರಣೆಯ ಒಳಗೆ ಕಲುಷಿತ ನೀರಿನ ಮಾದರಿ ಸಂಗ್ರಹಿಸಿ ಅದನ್ನು ಪರೀಕ್ಷೆ ಮತ್ತು ವಿಶ್ಲೇಷಣೆ ನಡೆಸಿ ವರದಿ ಸಲ್ಲಿಸಬೇಕು. ಸುದೀರ್ಘ ಕಾಲದಿಂದ ಸಂಗ್ರಹವಾಗಿರುವ ತ್ಯಾಜ್ಯದ ಸ್ಥಳಾಂತರ ಮತ್ತು ನಿರ್ವಹಣೆಗೆ ಸಂಬಂಧಿಸಿದ ಟೆಂಡರ್‌ ಮೊತ್ತವು ರೂ. 50 ಕೋಟಿ ದಾಟುವುದರಿಂದ ಹಣಕಾಸು ಇಲಾಖೆಯ ಅನುಮೋದನೆಗೆ ಕಳುಹಿಸಿಕೊಡಲಾಗಿದೆ. ಇದಕ್ಕೆ ಅನುಮೋದನೆ ನೀಡುವುದನ್ನು ರಾಜ್ಯ ಸರ್ಕಾರವು ಪರಿಗಣಿಸಬೇಕು. ವಿಳಂಬ ನೀತಿ ಅನುಸರಿಸದೇ ಟೆಂಡರ್‌ ಪ್ರಕ್ರಿಯೆಯನ್ನು ಅಂತಿಮಗೊಳಿಸಬೇಕು. ಮುಂದಿನ ವಿಚಾರಣೆಯ ವೇಳೆಗೆ ಕೆಲಸ ಆರಂಭವಾಗಬೇಕು. ಇಲ್ಲವಾದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ನ್ಯಾಯಾಲಯದ ಮುಂದೆ ಹಾಜರಾಗಬೇಕು” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ಕೆಎಸ್‌ಎಲ್‌ಎಸ್‌ಎ ಪ್ರತಿನಿಧಿಸಿದ್ದ ವಕೀಲ ಶ್ರೀಧರ್‌ ಪ್ರಭು ಅವರು “ಕಲುಷಿತ ನೀರಿನ ಮಾದರಿ ಸಂಗ್ರಹಿಸಿ ಅದರ ಪರೀಕ್ಷೆ ಮತ್ತು ವಿಶ್ಲೇಷಣೆ ನಡೆಸಿ ವರದಿ ಸಲ್ಲಿಸಲು ಸಿಪಿಸಿಬಿಗೆ ನಿರ್ದೇಶಿಸಲಾಗಿತ್ತು. ಸುದೀರ್ಘ ಕಾಲದಿಂದ ಸಂಗ್ರಹವಾಗಿರುವ ತ್ಯಾಜ್ಯ ಸ್ಥಳಾಂತರ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಗುತ್ತಿಗೆದಾರರನ್ನು ಪತ್ತೆ ಹಚ್ಚಿ ಟೆಂಡರ್‌ ಅಂತಿಮಗೊಳಿಸಲು ಮಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶಿಸಲಾಗಿತ್ತು” ಎಂದು ಪೀಠಕ್ಕೆ ವಿವರಿಸಿದರು.

“ತ್ಯಾಜ್ಯ ನಿರ್ವಹಣೆಗಾಗಿ ರಾಜ್ಯ ಸರ್ಕಾರವು ಒಂದಷ್ಟು ಅನುದಾನ ಬಿಡುಗಡೆ ಮಾಡಿದೆ. ಇದನ್ನು ಬಳಸಿ ಕೆಲಸ ಆರಂಭಿಸಬೇಕು” ಎಂದರು.

ಸಿಪಿಸಿಬಿ ಪ್ರತಿನಿಧಿಸಿದ್ದ ವಕೀಲೆ ಗಿರಿಜಾ ಅವರು “ಕಲುಷಿತ ನೀರನ್ನು ಪರಿಶೀಲಿಸಲು ಹಲವು ಕಡೆ ನೀರಿನ ಮಾದರಿ ಸಂಗ್ರಹಿಸಲಾಗಿದ್ದು, ಪರೀಕ್ಷೆ ಮತ್ತು ವಿಶ್ಲೇಷಣೆ ನಡೆಯುತ್ತಿದೆ. ಇದಕ್ಕಾಗಿ ನಾಲ್ಕು ವಾರಗಳ ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಇದಕ್ಕೆ ಪೀಠವು ಕಳೆದ ನವೆಂಬರ್‌ನಲ್ಲಿ ನಿಮಗೆ ನಿರ್ದೇಶನ ನೀಡಲಾಗಿದೆ ಎಂದಿತು.

ಮಂಗಳೂರು ಮಹಾನಗರ ಪಾಲಿಕೆ ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರು “ಟೆಂಡರ್‌ ನೀಡಲು ಗುತ್ತಿಗೆದಾರರನ್ನು ಗುರುತಿಸಲಾಗಿದೆ. ಟೆಂಡರ್‌ ಮೊತ್ತವು ರೂ. 50 ಕೋಟಿ ದಾಟಿರುವುದರಿಂದ ಅದಕ್ಕೆ ಹಣಕಾಸು ಇಲಾಖೆ ಅನುಮತಿ ನೀಡಬೇಕಿದೆ. ಇದಕ್ಕಾಗಿ ದಾಖಲೆಯನ್ನು ಹಣಕಾಸು ಇಲಾಖೆಗೆ ಕಳುಹಿಸಿಕೊಡಲಾಗಿದೆ. ಹಣಕಾಸು ಇಲಾಖೆಗೆ ಒಪ್ಪಿಗೆ ನೀಡಿದ ಬಳಿಕ ಗುತ್ತಿಗೆದಾರರಿಗೆ ಕೆಲಸ ಆರಂಭಿಸಲು ಅನುಮತಿಸಲಾಗುವುದು” ಎಂದರು.