CJI UU Lalit 
ಸುದ್ದಿಗಳು

ಭಾರತದಲ್ಲಿ ಕಾನೂನು ನೆರವು ನಿರ್ಲಕ್ಷಿಸಲಾಗಿದೆ, ಸ್ವಲ್ಪ ಸಮಯ ವಿನಿಯೋಗಿಸಿ: ವಿದ್ಯಾರ್ಥಿಗಳಿಗೆ ಸಿಜೆಐ ಕಿವಿಮಾತು

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಹಿಂದಿನ ಕಾರ್ಯಕಾರಿ ಅಧ್ಯಕ್ಷರಾಗಿದ್ದ ಹಾಲಿ ಸಿಜೆಐ ಲಲಿತ್‌ ಅವರು ಒಡಿಶಾದ ಕಟನ್‌ನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

Bar & Bench

ಭಾರತದಲ್ಲಿ ಕಾನೂನು ನೆರವು ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ ಎಂದಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌ ಅವರು ಯುವ ವಕೀಲರು ಸ್ವಲ್ಪ ಸಮಯವನ್ನು ಅದಕ್ಕಾಗಿ ಮೀಸಲಿಡುವಂತೆ ಸಲಹೆ ನೀಡಿದರು.

ಒಡಿಶಾದ ಕಟಕ್‌ನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಹಿಂದಿನ ಕಾರ್ಯಕಾರಿ ಅಧ್ಯಕ್ಷರಾಗಿದ್ದ ಸಿಜೆಐ ಲಲಿತ್‌ ಅವರು ಮಾತನಾಡಿದರು.

“ಕಾನೂನು ನೆರವು ಕೆಲಸದ ಜೊತೆ ಒಡನಾಡಿದ್ದರಿಂದ ನಾನು ದೂರು ಅಥವಾ ಅದಕ್ಕೆ ಅಗೌರವ ತೋರುತ್ತಿಲ್ಲ. ಆದರೆ, ದೇಶದಲ್ಲಿ ಕಾನೂನು ನೆರವಿನ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಈ ದೃಷ್ಟಿಯಲ್ಲಿ ಯೋಚಿಸಿ, ಸ್ವಲ್ಪ ಸಮಯವನ್ನು ಅದಕ್ಕಾಗಿ ವಿನಿಯೋಗಿಸಿ. ಸಹಾನುಭೂತಿಯಿಂದ ಯೋಚಿಸಿ, ಅದು ಸಮಾಜಕ್ಕೆ ಮರಳಿ ನೀಡಲು ಹಾದಿ ತೋರುತ್ತದೆ. ನಿಮ್ಮೆಲ್ಲರಿಗೂ ಶುಭವಾಗಲಿ” ಎಂದು ವಿದ್ಯಾರ್ಥಿಗಳನ್ನು ಕುರಿತು ಹೇಳಿದರು.

“ದೇಶವಾಸಿಗಳ ಬಗ್ಗೆ ನೀತಿ ಸಂಹಿತೆ ಇಟ್ಟುಕೊಳ್ಳಬೇಕು. ಕಾರ್ಪೊರೇಟ್ ಕಾನೂನು ಮತ್ತು ದಾವೆಗಳ ಹೊರತಾಗಿ ಪರಿಗಣಿಸಬೇಕಾದ ಆಯ್ಕೆಗಳಲ್ಲಿ ನ್ಯಾಯಾಂಗ ಸೇವೆಯೂ ಒಂದು. ಇದು ಅತ್ಯಂತ ಭರವಸೆಯ ಮತ್ತು ತೃಪ್ತಿದಾಯಕ ಕ್ಷೇತ್ರವಾಗಿದೆ” ಎಂದರು.

“ಪ್ರತಿ ದೇಶದ ಇತಿಹಾಸವನ್ನು ನೋಡಿದರೆ ಕಾನೂನು ತರಬೇತಿ ಪಡೆದವರು ಹೊಸ ಮಾರ್ಗ ಸೃಷ್ಟಿಸಿದ್ದು, ದಾರಿದೀಪವಾಗಿದ್ದಾರೆ. ಅನ್ಯಾಯದ ವಿರುದ್ದ ಧ್ವನಿ ಎತ್ತುವ ಮೂಲಕ ಎಲ್ಲರ ಕೇಂದ್ರಬಿಂದುವಾಗಿದ್ದಾರೆ” ಎಂದು ಸಿಜೆಐ ಅವರು ವಕೀಲರನ್ನು ಉದ್ದೇಶಿಸಿ ಹೇಳಿದರು.