Justice Surya Kant  
ಸುದ್ದಿಗಳು

ಕಾನೂನು ಶಿಕ್ಷಣ ಕ್ರಿಮಿನಲ್, ಸಾಂವಿಧಾನಿಕ ಕಾನೂನು ಕಲಿಕೆಗೆ ಸೀಮಿತವಲ್ಲ: ಸಿಜೆಐ ಸೂರ್ಯಕಾಂತ್

ಭಿನ್ನ ಅಭಿಪ್ರಾಯಗಳನ್ನು ಆಲಿಸುವುದು, ತಮ್ಮ ನಿಲುವುಗಳನ್ನು ಪರೀಕ್ಷೆಗೆ ಒಡ್ಡುವುದು ಹಾಗೂ ಸಂವಾದದ ಮೂಲಕ ಚಿಂತನೆಗಳನ್ನು ರೂಪಿಸಿಕೊಳ್ಳುವುದು ಕಾನೂನು ಶಿಕ್ಷಣದ ಪ್ರಮುಖ ಭಾಗ ಎಂದ ಭಾರತದ ಮುಖ್ಯ ನ್ಯಾಯಮೂರ್ತಿ.

Bar & Bench

ಕಾನೂನು ಶಿಕ್ಷಣದ ಉದ್ದೇಶವು ಕ್ರಿಮಿನಲ್ ಅಥವಾ ಸಾಂವಿಧಾನಿಕ ಕಾನೂನಿನ ತತ್ವಗಳನ್ನು ಕಲಿಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಶನಿವಾರ ಹೇಳಿದರು.

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) 34ನೇ ಘಟಿಕೋತ್ಸವದಲ್ಲಿ ಕುಲಾಧಿಪತಿಯಾಗಿ ಮಾತನಾಡಿದ ಅವರು, ಭಿನ್ನ ದೃಷ್ಟಿಕೋನಗಳನ್ನು ಹೊಂದಿರುವವರನ್ನು ಅರ್ಥಮಾಡಿಕೊಳ್ಳುವ ಅನುಭವವೂ ಕಾನೂನು ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ ಎಂದರು.

“ಕಾನೂನು ಶಿಕ್ಷಣದ ಉದ್ದೇಶವು ಕ್ರಿಮಿನಲ್ ಅಥವಾ ಸಾಂವಿಧಾನಿಕ ಕಾನೂನಿನ ತತ್ವಗಳನ್ನು ಕಲಿಯುವುದನ್ನು ಮೀರಿದ್ದಾಗಿದೆ. ನಮ್ಮಿಂದ ಭಿನ್ನವಾಗಿ ಜಗತ್ತನ್ನು ನೋಡುವವರನ್ನು ಎದುರಿಸುವ ಮತ್ತು ಅವರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವ ಉತ್ಸಾಹಭರಿತ ಅನುಭವದಲ್ಲಿ ಅದರ ನಿಜವಾದ ಉದ್ದೇಶ ಅಡಗಿದೆ” ಎಂದು ಅವರು ಹೇಳಿದರು.

ಕಾನೂನು ವೃತ್ತಿಯು ಬೇಡುವ ಗುಣಗಳ ಕುರಿತು ಮಾತನಾಡಿದ ಸಿಜೆಐ, ನ್ಯಾಯಯುತವಾದುದನ್ನು ಸಮರ್ಥಿಸಲು ವಕೀಲರಿಗೆ ಧೈರ್ಯವಿರಬೇಕು. ಅದೇ ವೇಳೆ, ಬಹುತೇಕ ಸಂದರ್ಭಗಳಲ್ಲಿ ಧ್ವನಿ ಕೇಳಿಸದವರ ಮಾತುಗಳನ್ನು ಆಲಿಸುವ ವಿನಯವೂ ಇರಬೇಕು ಎಂದು ಹೇಳಿದರು.

“ಈ ಬೌದ್ಧಿಕ ಸ್ವಾತಂತ್ರ್ಯವು ನ್ಯಾಯಸಮ್ಮತತೆಯನ್ನೂ ಬೇಡುತ್ತದೆ. ತೀರ್ಪು ನೀಡುವ ಮೊದಲು ಆಲಿಸುವುದು, ವ್ಯಕ್ತಿಯನ್ನು ಅವರ ನಿಲುವಿನಿಂದ ಪ್ರತ್ಯೇಕವಾಗಿ ನೋಡುವುದು ಮತ್ತು ಮತ್ತೊಬ್ಬರ ಘನತೆಗೆ ಧಕ್ಕೆ ತರದೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಮುಖ್ಯ” ಎಂದು ಅವರು ನುಡಿದರು.

ಪ್ರಾಮಾಣಿಕತೆಯ ನಿರಂತರ ಪಾಲನೆಯು ವೃತ್ತಿಜೀವನದಲ್ಲಿ ಪದವೀಧರರ ವಿಶ್ವಾಸಾರ್ಹತೆಯನ್ನು ಗಟ್ಟಿಗೊಳಿಸುತ್ತದೆ ಎಂದು ಸಿಜೆಐ ಹೇಳಿದರು.

ಕೆಲವೊಮ್ಮೆ ರಾಜಿ ಮಾಡಿಕೊಳ್ಳುವ ಪ್ರಲೋಭನೆ ಎದುರಾಗಬಹುದು ಮತ್ತು ಇತರರು ಅಡ್ಡದಾರಿಗಳನ್ನು ಹಿಡಿಯಬಹುದು. ಅಂತಹ ಸಂದರ್ಭಗಳಲ್ಲಿ ಎನ್‌ಎಲ್‌ಎಸ್‌ಐಯುನಲ್ಲಿ ಪಡೆದ ಜ್ಞಾನ ಮತ್ತು ಮೌಲ್ಯಗಳು ಸರಿಯಾದ ದಾರಿಯನ್ನು ತೋರಿಸುವ ದಿಕ್ಸೂಚಿಯಾಗಬೇಕು ಎಂದು ಅವರು ಕಿವಿಮಾತು ಹೇಳಿದರು.

ಪದವೀಧರರು ಕೇವಲ ವೃತ್ತಿಯೊಂದಕ್ಕೆ ಪ್ರವೇಶಿಸುತ್ತಿಲ್ಲ, ಬದಲಿಗೆ ಜನರ ಸೇವೆ ಮಾಡುವ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಮಹತ್ತರ ಜವಾಬ್ದಾರಿಯನ್ನು ಹೊರುತ್ತಿದ್ದಾರೆ ಎಂದು ಸಿಜೆಐ ಹೇಳಿದರು.

“ಕಾನೂನು ನಿಮ್ಮ ತಾಳ್ಮೆಗೆ ಸವಾಲೊಡ್ಡುತ್ತದೆ, ನಿಮ್ಮ ನೈತಿಕತೆಯನ್ನು ಪರೀಕ್ಷಿಸುತ್ತದೆ ಮತ್ತು ನಿಮ್ಮ ಧೈರ್ಯದ ಆಳವನ್ನು ಬೇಡುತ್ತದೆ. ಆದರೆ ಅದು ಸೇವೆಯ ವಿಶಿಷ್ಟ ಸಂತೋಷವನ್ನೂ ನೀಡುತ್ತದೆ. ಅನ್ಯಾಯವನ್ನು ಸರಿಪಡಿಸಿದ ತೃಪ್ತಿ, ಸ್ವಾತಂತ್ರ್ಯವನ್ನು ರಕ್ಷಿಸಿದ ಹೆಮ್ಮೆ ಮತ್ತು ಸಂವಿಧಾನವನ್ನು ಎತ್ತಿಹಿಡಿದ ಗೌರವವನ್ನು ಕಾನೂನು ವೃತ್ತಿ ನಿಮಗೆ ನೀಡುತ್ತದೆ” ಎಂದು ಅವರು ಹೇಳಿದರು.

ವಿಶ್ವವಿದ್ಯಾಲಯದ ಎಲ್‌ಎಲ್‌ಬಿ ಪದವೀಧರೆ ದಿವಂಗತ ಉರ್ವಶಿ ಕೃಷ್ಣಾತ್ರ ಅವರನ್ನು ಸಿಜೆಐ ಸ್ಮರಿಸಿದರು. ಅವರು ಇಂದು ಘಟಿಕೋತ್ಸವದಲ್ಲಿ ಉಪಸ್ಥಿತರಿದ್ದು ಪದವಿ ಸ್ವೀಕರಿಸಬೇಕಿತ್ತು ಎಂದು ವಿಷಾದಿಸಿದ ಅವರು, ಸಭೆಯ ಪರವಾಗಿ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸಿದರು.

ವಿದ್ಯಾರ್ಥಿಗಳ ಪೋಷಕರ ತ್ಯಾಗ ಮತ್ತು ನಂಬಿಕೆಯನ್ನು ಶ್ಲಾಘಿಸಿದ ಅವರು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಸವಾಲೊಡ್ಡಿ, ಬೆಂಬಲಿಸಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊಡುಗೆಯನ್ನೂ ಪ್ರಶಂಸಿಸಿದರು.

ದೇಶವು ಪದವೀಧರರನ್ನು“ಭರವಸೆಯ ಮುಂಚೂಣಿಗರು” ಎಂದು ನಿರೀಕ್ಷಿಸುತ್ತಿದೆ ಎಂದು ಹೇಳುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಎನ್‌ಎಲ್‌ಎಸ್‌ಐಯುನಲ್ಲಿ ಅಕ್ಟೋಬರ್ 17ರಂದು ನಡೆದ ಘಟಿಕೋತ್ಸವಕ್ಕೆ ಮುನ್ನ ವಿವಾದವೂ ಉಂಟಾಗಿತ್ತು. ಸೆಪ್ಟೆಂಬರ್ 12ರಂದು ನಿಗದಿಯಾಗಿದ್ದ ಘಟಿಕೋತ್ಸವವನ್ನು ವಿಶ್ವವಿದ್ಯಾಲಯವು ಈ ಹಿಂದೆ ರದ್ದುಗೊಳಿಸಿತ್ತು. 2026ನೇ ಸಾಲಿನ ವಿದ್ಯಾರ್ಥಿಗಳಿಗೆ ಅನಿವಾರ್ಯ ಕಾರಣಗಳಿಂದ ಘಟಿಕೋತ್ಸವ ನಡೆಸಲಾಗುವುದಿಲ್ಲ ಮತ್ತು ಪದವಿಗಳನ್ನು ಗೈರುಹಾಜರಿಯಲ್ಲಿಯೇ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ಹೊರಡಿಸಲಾಗಿತ್ತು.

ಸಿಜೆಐ ಸೂರ್ಯಕಾಂತ್ ಮತ್ತು ಮಿಶ್ರಾ ಅವರು ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವ ಪ್ರಸ್ತಾವಿತ ನಿರ್ಧಾರದ ಕುರಿತು ವಿವಾದ ಉಂಟಾದ ಬೆನ್ನಲ್ಲೇ ಈ ರದ್ದತಿ ನಡೆದಿತ್ತು. ಘಟಿಕೋತ್ಸವದಲ್ಲಿ ಅವರ ಭಾಗವಹಿಸುವಿಕೆಗೆ ಹಾಲಿ ವಿದ್ಯಾರ್ಥಿಗಳು, ಪದವಿ ಪಡೆಯಲಿರುವ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಸೇರಿದಂತೆ 700ಕ್ಕೂ ಹೆಚ್ಚು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದಕ್ಕೂ ಮೊದಲು ಹೈದರಾಬಾದ್‌ನ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರಿಸರ್ಚ್ (ನಲ್ಸಾರ್) ವಿಶ್ವವಿದ್ಯಾಲಯದಲ್ಲೂ ಘಟಿಕೋತ್ಸವದಲ್ಲಿ ಸಿಜೆಐ ಸೂರ್ಯಕಾಂತ್ ಅವರ ಉಪಸ್ಥಿತಿಗೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ವಿವಾದ ಉಂಟಾಗಿತ್ತು.