ಕರ್ನಾಟಕ ಹೋಮಿಯೋಪಥಿ ಮಂಡಳಿ ಚುನಾವಣೆಯಲ್ಲಿ ಭೌತಿಕ ಮತದಾನಕ್ಕೆ ಅವಕಾಶ ಕಲ್ಪಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ತಕರಾರು ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ. ಡಾ. ಪ್ರಕಾಶ್ ಮಂಟಿಕೊಪ್ಪ ಸೇರಿ ಮೂವರು ಹೋಮಿಯೋಪಥಿ ವೈದ್ಯರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಸೋಮವಾರ ವಿಚಾರಣೆ ನಡೆಸಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಹೋಮಿಯೋಪಥಿ ಮಂಡಳಿ ರಿಜಿಸ್ಟ್ರಾರ್‌ಗೆ ನೋಟಿಸ್ ಜಾರಿಗೊಳಿಸಿದ ಪೀಠ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿದೆ.
ಇದಕ್ಕೂ ಮುನ್ನ ಅರ್ಜಿದಾರ ಪರ ವಕೀಲ ದೇವಿ ಪ್ರಸಾದ್ ಶೆಟ್ಟಿ ವಾದ ಮಂಡಿಸಿ, ಕರ್ನಾಟಕ ಹೋಮಿಯೋಪಥಿ ವೈದ್ಯರ ಕಾಯ್ದೆ-1961ರ ಸೆಕ್ಷನ್ 11 ಹಾಗೂ 12 ಪ್ರಕಾರ ಹೋಮಿಯೋಪಥಿ ಮಂಡಳಿಯ ಚುನಾವಣೆಯಲ್ಲಿ ಅಂಚೆ ಮತಪತ್ರ ಮೂಲಕ ಮಾತ್ರ ಮತದಾನ ಮಾಡಲು ಅವಕಾಶವಿದೆ. ಈ ವ್ಯವಸ್ಥೆಯಲ್ಲಿ ಅಕ್ರಮ ನಡೆಯುವ ಸಾಧ್ಯತೆ ಇರುತ್ತದೆ. ಯಾರ ಮತವನ್ನು ಯಾರು ಬೇಕಿದ್ದರೂ ಚಲಾಯಿಸಬಹುದಾಗಿದ್ದು, ಚುನಾವಣೆಯಲ್ಲಿ ಪಾರದರ್ಶಕತೆ ಇರುವುದಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಇತ್ತೀಚಿನ ತಂತ್ರಜ್ಞಾನ ಬಳಸಿಕೊಂಡು ಸದಸ್ಯರ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್‌ಗೆ ಮತಪತ್ರ ಕಳುಹಿಸಿ, ಮತ ಚಲಾವಣೆಗೆ ಅವಕಾಶ ಕಲ್ಪಿಸಲು ಅಥವಾ ಭೌತಿಕ ಮತದಾನ ವ್ಯವಸ್ಥೆ ಕಲ್ಪಿಸಲು ಸರ್ಕಾರ ಹಾಗೂ ಮಂಡಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದರು.
ನೋಯಿಡಾದಲ್ಲಿರುವ ಸೂಪರ್‌ಟೆಕ್‌ನ ಎಮೆರಾಲ್ಡ್ ಕೋರ್ಟ್ 40 ಮಹಡಿಯ ಅವಳಿ ಗೋಪುರ ಕಟ್ಟಡಗಳನ್ನು ಕೆಡವುವಂತೆ ಆಗಸ್ಟ್ 31ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಆದೇಶವನ್ನು ಪರಿಷ್ಕರಿಸುವಂತೆ ಕೋರಿ ರಿಯಲ್ ಎಸ್ಟೇಟ್ ಕಂಪೆನಿ ಸೂಪರ್‌ಟೆಕ್ ಲಿಮಿಟೆಡ್ ಸಲ್ಲಿಸಿದ್ದ ಮನವಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಅವಳಿ ಗೋಪುರಗಳ ಪೈಕಿ ಒಂದನ್ನು ಕೆಡವಿ ಇನ್ನೊಂದು ಉಳಿಸಿಕೊಳ್ಳುವಂತೆ ಹಿಂದಿನ ಸುಪ್ರೀಂ ಕೋರ್ಟ್ ಆದೇಶವನ್ನು ಪರಿಷ್ಕರಿಸಬೇಕು ಎಂದು ಕೋರಿ ಸೂಪರ್‌ಟೆಕ್ ಮನವಿ ಸಲ್ಲಿಸಿತ್ತು. “ಟಿ 16 ಮತ್ತು ಟಿ 17 ಗೋಪುರಗಳನ್ನು ಕೆಡವುದಕ್ಕೆ ಸಂಬಂಧಿಸಿದಂತೆ ಅಲಾಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ವಿಶೇಷವಾಗಿ ಈ ನ್ಯಾಯಾಲಯ ಎತ್ತಿ ಹಿಡಿದಿದೆ. ತೀರ್ಪು ಮರುಪರಿಶೀಲನಾ ಮನವಿಯಲ್ಲಿ ಟಿ 16 ಉಳಿಸಿಕೊಳ್ಳಬೇಕು ಎಂದು ಕೋರಲಾಗಿದೆ” ಎಂದು ಮನವಿಯನ್ನು ವಜಾ ಮಾಡಿರುವ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಬಿ ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠವು ಹೇಳಿದೆ.
ಛತ್ರಸಾಲ್ ಕ್ರೀಡಾಂಗಣದಲ್ಲಿ ಯುವ ಕುಸ್ತಿಪಟು ಒಬ್ಬರನ್ನು ಥಳಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಒಲಿಂಪಿಕ್ಸ್ ಕುಸ್ತಿಪಟು ಸುಶೀಲ್ ಕುಮಾರ್ ಸೋಮವಾರ ದೆಹಲಿ ನ್ಯಾಯಾಲಯದಲ್ಲಿ ಜಾಮೀನು ಕೋರಿ ಮನವಿ ಸಲ್ಲಿಸಿದ್ದಾರೆ.
ವಕೀಲ ಪ್ರದೀಪ್ ರಾಣಾ ಮೂಲಕ ಸುಶೀಲ್ ಕುಮಾರ್ ಮನವಿ ಸಲ್ಲಿಸಿದ್ದು, ಜೂನ್ 2ರಿಂದಲೂ ನ್ಯಾಯಾಂಗ ಬಂಧನದಲ್ಲಿರುವುದಾಗಿ ಹೇಳಿದ್ದಾರೆ. "ಕುಸ್ತಿ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಸುಶೀಲ್ ಕುಮಾರ್ ಅವರು ದೇಶದಲ್ಲಿ ಕ್ರೀಡೆಯ ಮಟ್ಟವನ್ನು ಸುಧಾರಿಸಲು ಯುವ ಕುಸ್ತಿಪಟುಗಳನ್ನು ತಯಾರಿಸುವ ಮಹತ್ವದ ಜವಾಬ್ದಾರಿ ಹೊಂದಿದ್ದಾರೆ. ಸುಶೀಲ್ ಕುಮಾರ್ ಅವರ ಪ್ರಯತ್ನವು ಫಲ ನೀಡಲು ಆರಂಭಿಸಿದ್ದು, ಕುಸ್ತಿ ಕ್ಷೇತ್ರದಲ್ಲಿ ಶಕ್ತಿ ಕೇಂದ್ರವಾಗುವ ನಿಟ್ಟಿನಲ್ಲಿ ಭಾರತ ದಾಪುಗಾಲಿಡುತ್ತಿದೆ. ಇದು ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಸಾಬೀತಾಗಿದ್ದು, ಯಾರೂ ನಿರೀಕ್ಷಿಸದ ಸಾಧನೆಯನ್ನು ಕುಸ್ತಿಪಟುಗಳು ಮಾಡಿದ್ದಾರೆ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.