ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮಾರ್ಚ್ 27 ರಂದು ಆಯೋಜಿಸಿದ್ದ ಮೆಗಾ ಲೋಕ ಅದಾಲತ್‌ನ ಮೂರನೇ ಆವೃತ್ತಿ 3,32,936 ಪ್ರಕರಣಗಳನ್ನು ವಿಲೇವಾರಿ ಮಾಡುವಲ್ಲಿ ಯಶಸ್ವಿಯಾಗಿದೆ. 963 ಪೀಠಗಳು ನಡೆಸಿದ ಅದಾಲತ್‌ನಲ್ಲಿ ರೂ.1033 ಕೋಟಿ ರೂಪಾಯಿಗಳನ್ನು ಪರಿಹಾರ ರೂಪದಲ್ಲಿ ಪಾವತಿಸುವಂತೆ ಸೂಚಿಸಲಾಯಿತು. ದಂಡದ ರೂಪದಲ್ಲಿ ರೂ.18 ಕೋಟಿಯನ್ನು ಸಂಗ್ರಹಿಸಲಾಗಿದೆ.
ಈ ಬಾರಿಯ ಲೋಕ್ ಅದಾಲತ್‌ನ ವಿಶೇಷಗಳು ಹೀಗಿವೆ: ಮೈಸೂರು ಜಿಲ್ಲೆಯಲ್ಲಿ ವಿಚ್ಛೇದನ ಮತ್ತು ದಾಂಪತ್ಯ ಹಕ್ಕಿನ ಪ್ರಕರಣಗಳಿಗೆ ಸಂಬಂಧಿಸಿದಂತೆ 29 ಜೋಡಿಗಳನ್ನು ಮತ್ತೆ ಒಗ್ಗೂಡಿಸಲಾಯಿತು. ಬಜಾಜ್ ವಿಮಾ ಕಂಪೆನಿ 58 ಲಕ್ಷ ರೂ ಪರಿಹಾರ ಒಪ್ಪಿಸುವ ಮೂಲಕ ಗದಗ ಜಿಲ್ಲೆಯ ಮೋಟಾರು ವಾಹನ ಪ್ರಕರಣವೊಂದು ಬಗೆಹರಿದಿದೆ. ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದ ಕಿರ್ಲೋಸ್ಕರ್ ಸಿಸ್ಟಂ ಪ್ರೈವೇಟ್ ಲಿಮಿಟೆಡ್ ಮತ್ತು ಎಂಬೆಸ್ಸಿ ಪ್ರಾಪರ್ಟಿ ಡೆವಲಪರ್ಸ್ ಲಿಮಿಟೆಡ್ ನಡುವಣ ಪ್ರಕರಣದಲ್ಲಿ ಸುಮಾರು 21 ಕೋಟಿ ರೂಪಾಯಿಗಳಿಗೆ ರಾಜಿ ಒಪ್ಪಂದ ಏರ್ಪಟ್ಟಿತು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಲೋಕಾಯುಕ್ತ ಎನ್ ಸಂತೋಷ್ ಹೆಗ್ಡೆ ಅದಾಲತ್ ಉದ್ಘಾಟಿಸಿದ್ದರು.
ಡಾ. ಕೆ ಶಿವರಾಮ ಕಾರಂತ ಬಡಾವಣೆಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕವನ್ನು ಸುಪ್ರೀಂಕೋರ್ಟ್ ನೇಮಿಸಿದ್ದ ನ್ಯಾ ಎ ವಿ ಚಂದ್ರಶೇಖರ್ ನೇತೃತ್ವದ ಸಮಿತಿ ಏಪ್ರಿಲ್ 30ಕ್ಕೆ ವಿಸ್ತರಿಸಿದೆ. 2018ರ ಆಗಸ್ಟ್ 03ಕ್ಕೆ ಮೊದಲು ಬಡಾವಣೆಯಲ್ಲಿ ನಿರ್ಮಿಸಲಾದ ಕಟ್ಟಡ ಮತ್ತು ಮನೆಗಳ ಕುರಿತು ವರದಿ ಸಲ್ಲಿಸುವಂತೆ ನ್ಯಾ ಚಂದ್ರಶೇಖರ್ ಸಮಿತಿಗೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಸಮಿತಿ ಬಡಾವಣೆಯ ಅಧಿಸೂಚಿತ ಪ್ರದೇಶಗಳಲ್ಲಿ ಐದು ಸಹಾಯ ಕೇಂದ್ರಗಳನ್ನು ತೆರೆದು ಈಗಾಗಲೇ ದಾಖಲೆಗಳನ್ನು ಸಂಗ್ರಹಿಸುತ್ತಿದೆ ಎಂದು ಬಿಡಿಎ ಪ್ರಕಟಣೆ ತಿಳಿಸಿದೆ.
ಆನ್‌ಲೈನ್ ಪೋರ್ಟಲ್ jcc-skl.in ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 01 ಮಾರ್ಚ್ 2021ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸಮಿತಿ ಚಾಲನೆ ನೀಡಿತ್ತು. ಏಪ್ರಿಲ್ 30ರ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಸಮಿತಿ ಸೂಚಿಸಿದೆ.
ಕಳೆದ ಜನವರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೈಕೋರ್ಟ್ ನ್ಯಾಯಾಧೀಶರ ಬಗ್ಗೆ ʼತುಘಲಕ್ʼ ನಿಯತಕಾಲಿಕದ ಸಂಪಾದಕ ಎಸ್ ಗುರುಮೂರ್ತಿ ಅವರು ಮಾಡಿದ ಟೀಕೆಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ತಮಿಳುನಾಡು ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಒಪ್ಪಿಗೆ ನಿರಾಕರಿಸಿದ್ದಾರೆ. “ಬಹುತೇಕ ನ್ಯಾಯಾಧೀಶರು ಅಪ್ರಾಮಾಣಿಕರು ಮತ್ತು ಅನರ್ಹರಾಗಿದ್ದು ರಾಜಕಾರಣಿಗಳ ಕಾಲಿಗೆ ಎರಗಿ ಅಧಿಕಾರ ಪಡೆದುಕೊಂಡಿದ್ದಾರೆ” ಎಂದು ಗುರುಮೂರ್ತಿ ನೀಡಿದ್ದ ಹೇಳಿಕೆ ಸಂಬಂದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ವಕೀಲ ಎಸ್ ದೊರೆಸ್ವಾಮಿ ಕೋರಿದ್ದರು.
ಸಂದರ್ಭವನ್ನು ಆಧರಿಸಿ ಪ್ರತಿಕ್ರಿಯೆ ನೀಡಿದ್ದು ನ್ಯಾಯಾಂಗ ವ್ಯವಸ್ಥೆಯನ್ನು ಅವಮಾನಿಸುವುದು ಗುರುಮೂರ್ತಿ ಅವರ ಉದ್ದೇಶವಾಗಿರಲಿಲ್ಲ. ನ್ಯಾಯಾಂಗಕ್ಕೆ ಸಂಬಂಧಿಸಿದ ಟೀಕೆಗಳನ್ನು ತಪ್ಪಿಸಬಹುದಾಗಿದ್ದರೂ ಇಡಿಯಾಗಿ ನೋಡಿದಾಗ ಹೇಳಿಕೆ ವ್ಯವಸ್ಥೆಯ ನ್ಯೂನತೆಯನ್ನು ಹೇಳಲು ಹೊರಟಿತ್ತು. ಅಲ್ಲದೆ ಘಟನೆಗೆ ಸಂಬಂಧಿಸಿದಂತೆ ಗುರುಮೂರ್ತಿ ಅವರು ಈಗಾಗಲೇ ಕ್ಷಮಾಪಣೆಯನ್ನೂ ಕೋರಿದ್ದಾರೆ ಎಂದು ಎಜಿ ಹೇಳಿದ್ದಾರೆ.
ಚುನಾವಣಾ ಆಯೋಗದಿಂದ 48 ಗಂಟೆಗಳ ಅವಧಿಗೆ ಚುನಾವಣಾ ಪ್ರಚಾರದಿಂದ ನಿಷೇಧಕ್ಕೆ ಒಳಗಾದ ಡಿಎಂಕೆ ಮುಖಂಡ ಎ ರಾಜಾ ಅವರು ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ತುರ್ತಾಗಿ ಆಲಿಸಲು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ. ಹಾಲಿ ಮುಖ್ಯಮಂತ್ರಿ, ಎಐಎಡಿಎಂಕೆ ನಾಯಕ ಇ ಪಳನಿಸ್ವಾಮಿ ಅವರ ವಿರುದ್ಧ ಚುನಾವಣಾ ಪ್ರಚಾರದ ವೇಳೆ ಕೀಳು ಹೇಳಿಕೆಯನ್ನು ನೀಡಿದ್ದ ಕಾರಣಕ್ಕೆ ರಾಜಾ ಅವರಿಗೆ ಚುನಾವಣಾ ಆಯೋಗ 48 ಗಂಟೆಗಳ ಕಾಲ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿತ್ತು.
ಪ್ರಕರಣದ ಕುರಿತು ತುರ್ತಾಗಿ ಆಲಿಸುವಂತೆ ಕೋರಿ ಡಿಎಂಕೆಯ ಪರ ಹಿರಿಯ ವಕೀಲ ಆರ್ ಷಣ್ಮುಗ ಸುಂದರಂ ಗುರುವಾರ ಮಧ್ಯಾಹ್ನ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಹಾಗೂ ಸೆಂಥಿಲ್ ರಾಮಮೂರ್ತಿ ಅವರಿದ್ದ ಪೀಠದ ಮುಂದೆ ಮನವಿ ಮಾಡಿದರು. ರಜಾ ದಿನವಾದ ಶುಕ್ರವಾರದಂದು ಮನವಿ ಆಲಿಸಬೇಕೆಂದು ಅವರು ಕೋರಿದ್ದರು. ಆದರೆ, ಈ ಮನವಿಯನ್ನು ಮುಖ್ಯ ನ್ಯಾಯಮೂರ್ತಿಗಳು ನಿರಾಕರಿಸಿದರು. ರಾಜಾ ಹೇಳಿಕೆಯ ವಿರುದ್ಧ ಎಐಎಡಿಎಂಕೆ ಮಾ.27ರಂದು ದೂರು ದಾಖಲಿಸಿತ್ತು. ತಾನು ಅಂತಹ ಹೇಳಿಕೆ ನೀಡಿಲ್ಲ ಎಂದು ರಾಜಾ ನೀಡಿದ್ದ ವಿವರಣೆಯಿಂದ ತೃಪ್ತವಾಗದ ಆಯೋಗ ಅವರ ಹೇಳಿಕೆಯು ತಾಯ್ತನದ ಘನತೆಯನ್ನು ಕೀಳಾಗಿ ಕಾಣುವಂತಹದ್ದಾಗಿದ್ದು, ನಿಂದನೀಯ ಸ್ವರೂಪದ್ದಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಚುನಾವಣಾ ನೀತಿಸಂಹಿತೆಯ ಗಂಭೀರ ಉಲ್ಲಂಘನೆ ಎಂದು ರಾಜಾ ಅವರು ಪ್ರಚಾರದಲ್ಲಿ ತೊಡಗದಂತೆ ನಿಷೇಧಿಸಿತ್ತು.