ಅಶ್ಲೀಲ ಚಿತ್ರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾಗೆ ಮುಂಬೈನ ಎಸ್ಲ್ಪೆನೇಡ್‌ನಲ್ಲಿರುವ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ. ತಮ್ಮ ವಿರುದ್ಧದ ಆರೋಪಗಳ ತನಿಖೆಯು ಪೂರ್ಣಗೊಂಡಿರುವುದರ ಅಧಾರದಲ್ಲಿ ತಮಗೆ ಜಾಮೀನು ಮಂಜೂರು ಮಾಡಬೇಕು ಎಂದು ಕುಂದ್ರಾ ಮನವಿ ಮಾಡಿದ್ದರು.
ಕುಂದ್ರಾ ಪರವಾಗಿ ವಾದಿಸಿದ ವಕೀಲ ನಿರಂಜನ್ ಮುಂಡರಗಿ ಅವರು, ಪ್ರಕರಣದ ತನಿಖೆ ನಡೆಸಿರುವ ಮುಂಬೈ ಪೊಲೀಸರು ಇದಾಗಲೇ ವಿವರವಾದ ಪೂರಕ ಆರೋಪ ಪಟ್ಟಿಯನ್ನೂ ಸಹ ಸಲ್ಲಿಸಿದ್ದಾರೆ. ಪ್ರಾಥಮಿಕ ಆರೋಪ ಪಟ್ಟಿಯಲ್ಲಾಗಲಿ, ಪೂರಕ ಆರೋಪ ಪಟ್ಟಿಯಾಗಲಿ ಕುಂದ್ರಾ ಅವರ ವಿರುದ್ಧ ಸಂತ್ರಸ್ತರು ಯಾವುದೇ ನೇರ ಆರೋಪವನ್ನು ಮಾಡಿಲ್ಲ. ಅಶ್ಲೀಲ ಚಿತ್ರ ನಿರ್ಮಾಣಕ್ಕೆ ತಮ್ಮನ್ನು ಕುಂದ್ರಾ ಕೇಳಿದ್ದರು ಎಂದು ಎಲ್ಲಿಯೂ ಹೇಳಿಲ್ಲ ಎಂದು ವಾದಿಸಿದರು. ಪ್ರಕರಣವನ್ನು ಆಲಿಸಿದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ ಬಿ ಭಾಜಿಪಲೆ ಅವರು ಕುಂದ್ರಾ ಅವರು ರೂ. 50 ಸಾವಿರ ವೈಯಕ್ತಿಕ ಬಾಂಡ್ ನೀಡುವ ಮೂಲಕ ಜಾಮೀನಿನ ಮೇಲೆ ಬಿಡುಗಡೆಯಾಗಬಹುದು ಎಂದು ಆದೇಶಿಸಿದರು.
ದಿವಾನ್ ಹೌಸಿಂಗ್ ಫೈನಾನ್ಷಿಯಲ್ ಲಿಮಿಟೆಡ್‌ಗೆ ಸಂಬಂಧಿಸಿದ ಗಂಭೀರ ಭ್ರಷ್ಟಾಚಾರದ ಪ್ರಕರಣದಲ್ಲಿ ಆರೋಪಿಗಳಾಗಿರುವ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ ಪತ್ನಿ ಮತ್ತು ಪುತ್ರಿಯರು ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ರಾಣಾ ಅವರ ಪತ್ನಿ ಬಿಂದು ಕಪೂರ್ ಹಾಗೂ ಪುತ್ರಿಯರಾದ ರಾಧಾ ಕಪೂರ್ ಹಾಗೂ ರೋಶನಿ ಕಪೂರ್ ಜಾಮೀನಿಗಾಗಿ ಬಾಂಬೆ ಹೈಕೋರ್ಟ್ ಮೊರೆ ಹೋಗಿರುವವರು.
ಈ ಮೊದಲು, ಇತರ ಆರೋಪಿಗಳೊಂದಿಗೆ ಈ ಮಹಿಳೆಯರು ಶಾಮೀಲಾಗಿರುವುದನ್ನು ಇವರ ವಿರುದ್ಧದ ಆರೋಪಗಳು ಸಾಬೀತುಪಡಿಸಿರುವ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್ ಯು ವಡಗಾಂವ್ಕರ್ ಅವರು ಸೆಪ್ಟೆಂಬರ್ 18 ರಂದು ಜಾಮೀನು ಅರ್ಜಿ ತಿರಸ್ಕರಿಸಿದ್ದರು. ಅಪರಾಧದ ಗಹನತೆ ಮತ್ತು ಸ್ವರೂಪ ಪರಿಗಣಿಸಿ, ಆರೋಪಿಗಳು/ ಅರ್ಜಿದಾರರು ರೂ 4000 ಕೋಟಿಗಳಷ್ಟು ದೊಡ್ಡ ಮೊತ್ತದ ಸಾರ್ವಜನಿಕ ಹಣ ನಷ್ಟ ಉಂಟಾಗಿರುವ ಪ್ರಕರಣದಲ್ಲಿ ಪಾಲುಗೊಂಡಿರುವುದರಿಂದ ಅರ್ಜಿಗಳು ತಿರಸ್ಕರಿಸಲು ಅರ್ಹವಾಗಿವೆ ಎಂದು ವಿಶೇಷ ನ್ಯಾಯಾಲಯ ಹೇಳಿತ್ತು. ಸೆಪ್ಟೆಂಬರ್ 23ರವರೆಗೆ ಮಹಿಳೆಯರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಅರೋಪಿಗಳು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.