ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 30-09-2021

>> ದತ್ತು ಮಕ್ಕಳ ತಾಯಂದಿರ ಮಾತೃತ್ವ ರಜೆಗೆ ಷರತ್ತು ಬೇಡ ಎಂದು ಪಿಐಎಲ್‌ >> ಜಂತರ್‌ಮಂತರ್‌ ಮುಸ್ಲಿಂ ವಿರೋಧಿ ಘೋಷಣೆ ಪ್ರಕರಣ: ಆರೋಪಿ ಪಿಂಕಿ ಚೌಧರಿಗೆ ಜಾಮೀನು

Bar & Bench

ದತ್ತು ಮಕ್ಕಳ ತಾಯಂದಿರ ಮಾತೃತ್ವ ರಜೆಗೆ ಷರತ್ತು: ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದರೆ ಮಾತ್ರ 12 ವಾರಗಳ ಹೆರಿಗೆ ರಜೆಯ ಪ್ರಯೋಜನ ಪಡೆಯಲು ಅರ್ಹರು ಎಂಬ ಮಾತೃತ್ವ ಸೌಲಭ್ಯ ಕಾಯಿದೆ- 1961ರ ಸೆಕ್ಷನ್ 5 (4) ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಮೂರು ತಿಂಗಳಿಗಿಂತ ಮೇಲ್ಪಟ್ಟ ಅನಾಥ, ಪರಿತ್ಯಕ್ತ ಅಥವಾ ಶರಣಾದ ಮಗುವನ್ನು ದತ್ತು ತೆಗೆದುಕೊಳ್ಳುವ ತಾಯಿಗೆ ಮಾತೃತ್ವ ರಜೆಯ ಸೌಲಭ್ಯ ದೊರೆಯುತ್ತಿಲ್ಲ. ಈ ಭಿನ್ನತೆಯಿಂದಾಗಿ ಮಕ್ಕಳನ್ನು ದತ್ತು ಪಡೆಯುವವರು ದೊಡ್ಡ ಮಕ್ಕಳಿಗಿಂತಲೂ ನವಜಾತ ಶಿಶುಗಳನ್ನೇ ದತ್ತು ಪಡೆಯಲು ಆದ್ಯತೆ ನೀಡುತ್ತಾರೆ ಎಂದು ಅರ್ಜಿ ಹೇಳಿದೆ.

ಕಾಯಿದೆಯ ಸೆಕ್ಷನ್ 5 (4) ಜೈವಿಕ ತಾಯಿ ಮತ್ತು ದತ್ತು ಪಡೆದ ತಾಯಂದಿರ ನಡುವೆ ಮಾತ್ರವಲ್ಲದೆ ದತ್ತು ಪಡೆದ ಮಕ್ಕಳ ನಡುವೆ ಕೂಡ ತಾರತಮ್ಯ ಉಂಟು ಮಾಡುತ್ತದೆ. ಅಲ್ಲದೆ ಬಾಲ ನ್ಯಾಯ ಕಾಯಿದೆಗೂ ವಿರುದ್ಧವಾಗಿದೆ ಎಂದು ಹಂಸನಂದಿನಿ ನಂದೂರಿ ಅವರು ಸಲ್ಲಿಸಿರುವ ಮನವಿಯಲ್ಲಿ ಹೇಳಲಾಗಿದೆ. ಅರ್ಜಿಯ ಕುರಿತಾಗಿ ಶುಕ್ರವಾರ ಅ.1ರಂದು ನ್ಯಾಯಮೂರ್ತಿಗಳಾದ ಅಬ್ದುಲ್‌ ನಜೀರ್‌ ಮತ್ತು ಕೃಷ್ಣ ಮುರಾರಿ ಅವರಿರುವ ಪೀಠವು ವಿಚಾರಣೆ ನಡೆಸಲಿದೆ.

ಜಂತರ್‌ಮಂತರ್‌ ಮುಸ್ಲಿಂ ವಿರೋಧಿ ಘೋಷಣೆ ಪ್ರಕರಣ: ಆರೋಪಿ ಪಿಂಕಿ ಚೌಧರಿಗೆ ಜಾಮೀನು

ದೆಹಲಿಯ ಜಂತರ್‌ಮಂತರ್‌ ಸಮೀಪ ಸಮಾವೇಶವೊಂದರ ವೇಳೆ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಲ್ಲಿ ಒಬ್ಬರಾದ ಪಿಂಕಿ ಚೌಧರಿ ಅಲಿಯಾಸ್‌ ಭೂಪಿಂದರ್‌ ತೋಮರ್‌ಗೆ ದೆಹಲಿ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಚೌಧರಿ ಸಹ ಆರೋಪಿ ಪ್ರೀತ್‌ ಸಿಂಗ್‌ಗೆ ಇದಾಗಲೇ ದೆಹಲಿ ಹೈಕೋರ್ಟ್‌ ಜಾಮೀನು ನೀಡಿರುವುದನ್ನು ಪರಿಗಣಿಸಿದ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಪ್ರಯಾಂಕ್‌ ನಾಯಕ್‌ ಅವರು ವಿಚಾರಣೆಗೆ ಚೌಧರಿಯ ಅಗತ್ಯವಿಲ್ಲ ಎನ್ನುವುದನ್ನು ಗಣನೆಗೆ ತೆಗೆದುಕೊಂಡು ಜಾಮೀನು ಮಂಜೂರು ಮಾಡಿದರು.

Pinky Chaudhary

ಮುಸ್ಲಿಂ ವಿರೋಧಿ ಘೋಷಣೆಗಳನ್ನು ಆಗಸ್ಟ್‌ 8ರಂದು ಸಂಜೆ ನಾಲ್ಕು ಗಂಟೆ ವೇಳೆಗೆ ಕೂಗಲಾಗಿದ್ದು, ಚೌಧರಿ ಮಧ್ಯಾಹ್ನ 1:29ಕ್ಕೆ ಸಭೆಯ ಸ್ಥಳದಿಂದ ಹೊರನಡೆದಿದ್ದರು ಎನ್ನುವುದನ್ನು ನ್ಯಾಯಾಲಯವು ಪರಿಗಣನೆಗೆ ತೆಗೆದುಕೊಂಡಿತು. ಭಾರತ್‌ ಜೋಡೋ ಅಭಿಯಾನದಡಿ ದೆಹಲಿಯಲ್ಲಿ ವಸಾಹತುಶಾಹಿ ಕಾಲದ ಕಾನೂನುಗಳನ್ನು ವಿರೋಧಿಸಿ ಅಗಸ್ಟ್‌ 8ರಂದು ಸಮಾವೇಶ ನಡೆಸಲಾಗಿತ್ತು ಈ ವೇಳೆ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೆಲವರು ಕೂಗಿದ್ದ ಆರೋಪ ಕೇಳಿಬಂದಿತ್ತು. ಈ ಕುರಿತು ನ್ಯಾಯವಾದಿ ವರ್ಗದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿತ್ತು.