ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 17-09-2021

>> ರಾಜಸ್ಥಾನ ಹೈಕೋರ್ಟ್‌ ಸಿಜೆ ಹುದ್ದೆಗೆ ತ್ರಿಪುರ ಸಿಜೆ ಅಖಿಲ್‌ ಖುರೇಷಿ, ಅಲಾಹಾಬಾದ್‌ ಸಿಜೆ ಹುದ್ದೆಗೆ ನ್ಯಾ. ರಾಜೇಶ್‌ ಬಿಂದಾಲ್‌ ಹೆಸರು ಶಿಫಾರಸ್ಸು >> ನ್ಯೂಸ್‌ಲಾಂಡ್ರಿ ಮೇಲೆ ಐಟಿ ದಾಳಿ: ಐಟಿ ಇಲಾಖೆಗೆ ನೋಟಿಸ್‌ ಜಾರಿ

Bar & Bench

ರಾಜಸ್ಥಾನ ಹೈಕೋರ್ಟ್‌ ಸಿಜೆ ಹುದ್ದೆಗೆ ತ್ರಿಪುರ ಸಿಜೆ ಅಖಿಲ್‌ ಖುರೇಷಿ, ಅಲಾಹಾಬಾದ್‌ ಸಿಜೆ ಹುದ್ದೆಗೆ ನ್ಯಾ. ರಾಜೇಶ್‌ ಬಿಂದಾಲ್‌ ಹೆಸರು ಶಿಫಾರಸ್ಸು

ತ್ರಿಪುರ ಮುಖ್ಯ ನ್ಯಾಯಮೂರ್ತಿಯಾಗಿರುವ ಅಖಿಲ್‌ ಖುರೇಷಿ ಅವರನ್ನು ರಾಜಸ್ಥಾನ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಹಾಗೂ ಕೋಲ್ಕತ್ತಾ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಅವರನ್ನು ಅಲಾಹಾಬಾದ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನೇಮಿಸುವ ಸಂಬಂಧ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ.

Justice Akil Kureshi and Rajasthan HC

ಈ ಸಂಬಂಧ ಸೆಪ್ಟೆಂಬರ್‌ 16 ರಂದು ಕೊಲಿಜಿಯಂ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಗುಜರಾತ್‌ನ ಖುರೇಷಿ ಅವರ ನೇಮಕಾತಿಗೆ ಸಂಬಂಧಿಸಿದಂತೆ ಕೊಲಿಜಿಯಂ ಮತ್ತು ಕೇಂದ್ರ ಸರ್ಕಾರದ ನಡುವೆ ಹಲವು ಬಾರಿ ವಿವಾದ ಸೃಷ್ಟಿಯಾಗಿದೆ. ನ್ಯಾ. ರಾಜೇಶ್‌ ಬಿಂದಾಲ್‌ ಅವರು ಮೂಲ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಸೇವೆ ಆರಂಭಿಸಿದ್ದು, ಬಳಿಕ ಅವರನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿತ್ತು. ನಂತರ ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು.

ನ್ಯೂಸ್‌ಲಾಂಡ್ರಿ ಮೇಲೆ ಐಟಿ ದಾಳಿ: ವೈಯಕ್ತಿಕ ದತ್ತಾಂಶ ರಕ್ಷಣೆ ಕುರಿತ ಮನವಿ ಆಧರಿಸಿ ಐಟಿ ಇಲಾಖೆಗೆ ನೋಟಿಸ್‌ ಜಾರಿ ಮಾಡಿದ ದೆಹಲಿ ಹೈಕೋರ್ಟ್‌

ಆದಾಯ ತೆರಿಗೆ ಇಲಾಖೆಯು ಸೆಪ್ಟೆಂಬರ್‌ 10ರಂದು ನ್ಯೂಸ್‌ಲಾಂಡ್ರಿ ಕಚೇರಿಯ ಮೇಲೆ ದಾಳಿ ಮಾಡಿದಾಗ ವೈಯಕ್ತಿಕ ದತ್ತಾಂಶವನ್ನು ವಶಪಡಿಸಿಕೊಂಡಿರುವುದರ ರಕ್ಷಣೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಮನವಿ ಆಧರಿಸಿ ಶುಕ್ರವಾರ ದೆಹಲಿ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಇದೇ ವೇಳೆ, ದತ್ತಾಂಶವನ್ನು ಸೋರಿಕೆ ಮಾಡುವುದಿಲ್ಲವೆಂದು ಇಲಾಖೆಯು ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದುಕೊಡುವಂತೆ ಸೂಚಿಸಿದೆ. ಐಟಿ ಇಲಾಖೆಯು ಸೆಕ್ಷನ್‌ 133ಎ ಅಡಿ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ನ್ಯೂಸ್‌ಲಾಂಡ್ರಿಯ ಮುಖ್ಯ ಕಾರ್ಯನಿರ್ಹಣಾಧಿಕಾರಿ ಅಭಿನಂದನ್‌ ಸೇಖ್ರಿ ಅವರ ಲ್ಯಾಪ್‌ಟಾಪ್‌ ಮತ್ತು ಫೋನ್‌ ಹಾಗೂ ಕಚೇರಿಯ ಕೆಲವು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡಿದೆ. ಈ ಸಾಧನಗಳಲ್ಲಿದ್ದ ಎಲ್ಲಾ ದತ್ತಾಂಶವನ್ನು ಡೌನ್‌ಲೋಡ್‌ ಮಾಡಿಕೊಂಡು ಅಧಿಕಾರಿಗಳು ಕೊಂಡೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.

newslaundry and incometax department

ಸಾಧನಗಳಲ್ಲಿನ ಖಾಸಗಿ ದತ್ತಾಂಶವನ್ನು ರಕ್ಷಿಸುವ ಸಂಬಂಧ ನ್ಯೂಸ್‌ಲಾಂಡ್ರಿ ಪರವಾಗಿ ಸೇಖ್ರಿ ಅವರು ದೆಹಲಿ ಹೈಕೋರ್ಟ್‌ ಕದ ತಟ್ಟಿದ್ದರು. ಸೇಖ್ರಿ ಅವರ ಫೋನ್‌ ಮತ್ತು ಮ್ಯಾಕ್‌ ಬುಕ್‌ ಮೇಲೆ ನಿಯಂತ್ರಣ ಸಾಧಿಸಲಾಗಿದೆ. 300ಜಿಬಿಯಷ್ಟು ದತ್ತಾಂಶವನ್ನು ಐಟಿ ಇಲಾಖೆ ಡೌನ್‌ಲೋಡ್‌ ಮಾಡಿಕೊಂಡಿದೆ. ಇದರಲ್ಲಿ ಸೇಖ್ರಿ ಅವರ ವೈಯಕ್ತಿಕ ದತ್ತಾಂಶವು ಸೇರಿದೆ. ಇದು ಅವರ ಖಾಸಗಿ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹಿರಿಯ ವಕೀಲ ಸಿದ್ಧಾರ್ಥ್‌ ದವೆ ವಾದಿಸಿದರು.