ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಪ್ರಕರಣದಿಂದ ಹಿಂದೆ ಸರಿದ ಬಳಿಕ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಗೆ ಒಪ್ಪಿಗೆ ನೀಡಲು ನಿರಾಕರಿಸಿದ್ದಾರೆ. "ನ್ಯಾಯಾಧೀಶ ಕಾಟ್ಜು ಅವರು ನ್ಯಾಯಾಲಯದ ಮುಂದೆ ಸಾಕ್ಷಿ ನೀಡುವಾಗ ಅವರು ಬಳಸಿದ ಅಭಿವ್ಯಕ್ತಿಗಳು ಮತ್ತು ಗ್ರಹಿಕೆಗಳಿಂದ ಉದ್ಭವಿಸಿದ ಸಮಸ್ಯೆಗಳ ಬಗ್ಗೆ ಹೆಚ್ಚು ಯೋಚಿಸುವುದು ಸೂಕ್ತವಲ್ಲ ಮತ್ತು ಅನಾನುಕೂಲಕರ ಎಂದು ನಾನು ಭಾವಿಸುತ್ತೇನೆ" ಎಂಬುದಾಗಿ ಮೆಹ್ತಾ ಹೇಳಿದ್ದಾರೆ.
ಈ ಮೊದಲು ಕಳೆದ ಮಾರ್ಚ್‌ನಲ್ಲಿ ಅಟಾರ್ನಿ ಜನರಲ್ ಅವರು ನ್ಯಾ. ಕಾಟ್ಜು ವಿರುದ್ಧ ನ್ಯಾಯಾಂಗ ನಿಂದನೆಯ ವಿಚಾರಣೆಯನ್ನು ಆರಂಭಿಸಲು ಅನುಮತಿ ನೀಡುವ ಮನವಿಯನ್ನು ಪರಿಗಣಿಸುವುದನ್ನು ಕೈಬಿಟ್ಟಿದ್ದರು. ಕಾಟ್ಜು ಅವರು ಹದಿನಾರು ವರ್ಷಗಳಿಂದಲೂ ಪರಿಚಿತರು. ಆದ್ದರಿಂದ ನಾನು ಈ ಪ್ರಕರಣ ನಿಭಾಯಿಸುವುದು ಸೂಕ್ತವಲ್ಲ ಎಂದು ಎಜಿ ಹೇಳಿದ್ದರು. ವಜ್ರ ವ್ಯಾಪಾರಿ ನೀರವ್ ಮೋದಿ ಹಸ್ತಾಂತರ ಪ್ರಕರಣದಲ್ಲಿ ಕಾಟ್ಜು ಅವರು ತೀವ್ರ ನ್ಯಾಯಾಂಗ ನಿಂದನೆ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಅರ್ಜಿದಾರ ಹಾಗೂ ಸುಪ್ರೀಂಕೋರ್ಟ್ ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರು ಮಾರ್ಚ್ ಒಂದರಂದು ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದರು. ಕಾನೂನಿನ ಪ್ರಕಾರ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವ ಮುನ್ನ ಅಟಾರ್ನಿ ಜನರಲ್ ಅಥವಾ ಸಾಲಿಸಿಟರ್ ಜನರಲ್ ಅವರ ಒಪ್ಪಿಗೆ ಪಡೆಯಬೇಕಿದೆ.
2020ರಲ್ಲಿ ದೆಹಲಿ ಗಲಭೆ ವೇಳೆ ಗುಂಡು ತಗುಲಿ ಗಾಯಗೊಂಡಿದ್ದ ಮತ್ತು ಜೈಲಿನಲ್ಲಿ ಪಾರ್ಶ್ವವಾಯು ಪೀಡಿತನಾಗಿದ್ದ ಆರೋಪಿಯೊಬ್ಬನಿಗೆ ದೆಹಲಿಯ ಸೆಷನ್ಸ್ ನ್ಯಾಯಾಲಯ ಮಾನವೀಯ ನೆಲೆಯಲ್ಲಿ ಮಧ್ಯಂತರ ಜಾಮೀನು ನೀಡಿದೆ. ಆರೋಪಿ ಮೊಹಮದ್ ಶಾಹಿದ್ ಅಂಗಾಂಗಗಳು ಕಾರ್ಯನಿರ್ವಹಿಸದ ಕಾರಣ ಅವರನ್ನು ಗಾಲಿ ಕುರ್ಚಿ ಮೇಲೆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಜೈಲು ಅಧಿಕಾರಿಗಳು ನ್ಯಾಯಾಧೀಶ ಅಮಿತಾಭ್ ರಾವತ್ ಅವರಿಗೆ ಮಾಹಿತಿ ನೀಡಿದರು.
ಪ್ರಾಸಿಕ್ಯೂಷನ್ ಪ್ರಕಾರ ಗಲಭೆ ವೇಳೆ ಆರೋಪಿಯ ಬಲ ಭುಜಕ್ಕೆ ಗುಂಡೇಟು ತಗುಲಿದ್ದು ಆತನ ಸ್ಥಿತಿ ಸ್ಥಿರವಾಗಿಲ್ಲ ಎಂದು ವೈದ್ಯಕೀಯ ವರದಿ ಸೂಚಿಸುತ್ತದೆ. ಅಲ್ಲದೆ ಆತನನ್ನು ಆಗಿಂದಾಗ್ಗೆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆರೋಪಿ ಬಹು ಅಂಗಾಂಗ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ನ್ಯಾಯಾಲಯ ಆಗಸ್ಟ್ 11ರಂದು ನೀಡಿದ ಜಾಮೀನಿನ ವೇಳೆ ಅಭಿಪ್ರಾಯಪಟ್ಟಿದೆ.
ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗಳನ್ನು ನಡೆಸುವುದರಿಂದ ನ್ಯಾಯವು ಹೆಚ್ಚು ಸುಲಭವಾಗಿ ಮತ್ತು ಅಗ್ಗವಾಗಿ ದಾವೆದಾರರಿಗೆ ದೊರೆಯುತ್ತದೆ ಎಂದು ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್ ಶನಿವಾರ ಅಭಿಪ್ರಾಯಪಟ್ಟರು.
"ಆರ್ಥಿಕತೆ ವಿಚಾರದಲ್ಲಿ, ವರ್ಚುವಲ್ ನ್ಯಾಯಾಲಯಗಳು ಕಡೆಗೆ ನ್ಯಾಯ ಲಭ್ಯತೆಯನ್ನು ಅಗ್ಗವಾಗಿಸುವುದರಲ್ಲಿ ಸಂದೇಹವಿಲ್ಲ. ಅಂತಹ ಸಾಮರ್ಥ್ಯವನ್ನು ಬೆಂಬಲಿಸಬೇಕು” ಎಂದ ಅವರು “ವರ್ಚುವಲ್ ವಿಚಾರಣೆಗೆ ನ್ಯಾಯಾಧೀಶರು ಕೂಡ ವಿರೋಧ ವ್ಯಕ್ತಪಡಿಸಿದರು. ತಂತ್ರಜ್ಞಾನದ ಭೀತಿಯಿಂದ ಹೀಗಾಗಿರಬಹುದು” ಎಂದು ಹೇಳಿದರು. ವರ್ಚುವಲ್ ವಿಚಾರಣೆ ನಿಯಂತ್ರಿಸಲು ನ್ಯಾಯಾಲಯಗಳು ಹೊರಡಿಸಿದ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಮುಜಗರದ ಸಂಗತಿಯಾಗಿದ್ದು ಅಂತಹ ವಿಚಾರಣೆಗಳನ್ನು ನಿಯಂತ್ರಿಸಲು ದೃಢ ನಿಯಮಗಳನ್ನು ರೂಪಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.