ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಆರೋಪಿಯಾದ ಬ್ರಿಟಿಷ್ ಪ್ರಜೆ ಕ್ರಿಶ್ಚನ್ ಮಿಶೆಲ್ ಜಾಮೀನು ಮನವಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯಕ್ಕೆ ಸೋಮವಾರ ನೋಟಿಸ್ ಜಾರಿ ಮಾಡಿರುವ ದೆಹಲಿ ಹೈಕೋರ್ಟ್ ಪ್ರತಿಕ್ರಿಯೆ ಸಲ್ಲಿಸುವಂತೆ ಆದೇಶಿಸಿದೆ.
ತಮ್ಮ ಕಕ್ಷಿದಾರ ಮಿಶೆಲ್ ಹೊರತುಪಡಿಸಿ ಉಳಿದೆಲ್ಲಾ ಆರೋಪಿಗಳು ಜಾಮೀನು ನೀಡಲಾಗಿದೆ ಎಂದು ವಾದಿಸಿದ ಮಿಶೆಲ್ ಪರ ವಕೀಲ ಅಲ್ಜೊ ಕೆ ಜೋಸೆಫ್ ಅವರನ್ನು ಆಲಿಸಿದ ನ್ಯಾಯಮೂರ್ತಿ ಮನೋಜ್ ಕುಮಾರ್ ಒಹ್ರಿ ನೇತೃತ್ವದ ಪೀಠವು ತನಿಖಾ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ. “ಆರೋಪಿಯು ಎರಡು ವರ್ಷ ಎಂಟು ತಿಂಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿ ಎಲ್ಲಾ ಆರೋಪಗಳಿಗೆ ಸಂಬಂಧಿಸಿದಂತೆ ಗರಿಷ್ಠ ಏಳು ವರ್ಷ ಜೈಲು ಶಿಕ್ಷೆ ಇರುತ್ತದೆ” ಎಂದು ಜೋಸೆಫ್ ವಾದಿಸಿದ್ದು, ಜಾಮೀನು ಮಂಜೂರು ಮಾಡುವಂತೆ ಕೋರಿದರು.
ಹನ್ನೆರಡು ವರ್ಷದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾದ್ರಿಯ ಅಪರಾಧವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ. ಲೈಂಗಿಕ ದೌರ್ಜನ್ಯವನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ಮುಕ್ತ ಮತ್ತು ನಿರ್ಭೀತವಾಗಿ ದೂರು ಸಲ್ಲಿಸಲು ಶಾಲೆಗಳಲ್ಲಿ ದೂರು ಪೆಟ್ಟಿಗೆಗಳನ್ನು ಇರಿಸಬೇಕು. ಜೊತೆಗೆ ಮಾಸಿಕ ಪರಿಶೀಲನೆ ನಡೆಸುವಂತೆಯೂ ನ್ಯಾಯಾಲಯ ಸೂಚಿಸಿದೆ. ಪಾದ್ರಿ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಲೈಂಗಿಕ ಕಿರುಕುಳದಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು.
ತಮ್ಮ ಭವಿಷ್ಯದ ಅಧ್ಯಯನಕ್ಕೆ ಎಲ್ಲಿ ಮಾರಕವಾಗುತ್ತದೆಯೋ ಎಂದು ಹೆದರಿ ವಿದ್ಯಾರ್ಥಿನಿಯರು ಶಿಕ್ಷಕರು ಅಥವಾ ಶಾಲಾ ಆಡಳಿತ ಮಂಡಳಿ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ಸಲ್ಲಿಸಲು ಭಯಪಡುತ್ತಾರೆ. ಈ ಹಿನ್ನೆಲೆಯಲ್ಲಿ ನಿರ್ಭೀತವಾಗಿ ಲೈಂಗಿಕ ದೌರ್ಜನ್ಯದ ವಿರುದ್ಧ ದೂರು ಸಲ್ಲಿಸಲು ಪ್ರತಿ ಶಾಲೆಗಳಲ್ಲಿ ದೂರು ಪೆಟ್ಟಿಗೆ ಇರಿಸಿ ಎಂದು ಸಲಹೆ ನೀಡಿತು. ಅಲ್ಲದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಯೊಂದಿಗೆ ವಾರಕ್ಕೊಮ್ಮೆ ಅದನ್ನು ಪರಿಶೀಲಿಸಿ ಲೈಂಗಿಕ ದೌರ್ಜನ್ಯದ ದೂರುಗಳಿದ್ದರೆ ಪೊಲೀಸರಿಗೆ ಮುಂದಿನ ಕ್ರಮ ಕೈಗೊಳ್ಳಲು ಮಾಹಿತಿ ನೀಡಬೇಕು ಎಂದು ಸೂಚಿಸಿತು.
ರಾಜ್ಯದ ವರ್ತಕರು ಎದುರಿಸಿರುವ ಸಂಕಷ್ಟವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಬಕ್ರೀದ್ ಸಂದರ್ಭದಲ್ಲಿ ತಾನು ಕೋವಿಡ್ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲ ಮಾಡಿರುವುದಾಗಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಆರ್ಥಿಕ ಹಿಂಜರಿತದಿಂದ ತತ್ತರಿಸುವ ತಮಗೆ ಬ್ರಕೀದ್ ವೇಳೆ ನಡೆಯುವ ವ್ಯಾಪಾರದಿಂದ ಕೊಂಚ ಮಟ್ಟಿನ ಅನುಕೂಲವಾಗಲಿದೆ ಎಂದು ವರ್ತಕರು ಕೋರಿದ್ದ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಸಡಿಲಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ.
ಹಬ್ಬದ ಸಂದರ್ಭಕ್ಕಾಗಿಯೇ ವರ್ತಕರು ಸರಕು ಸರಂಜಾಮುಗಳನ್ನು ದಾಸ್ತಾನು ಮಾಡಿಕೊಂಡಿದ್ದಾರೆ. ಒಂದು ವೇಳೆ ನಿರ್ಬಂಧಗಳನ್ನು ಸಡಿಲಿಸದೆ ಹೋದರೆ ಈ ಕಠಿಣ ನಿಯಮಾವಳಿಗಳನ್ನು ಗಾಳಿಗೆ ತೂರಿ ತಾವುಗಳು ರಾಜ್ಯಾದ್ಯಂತ ಅಂಗಡಿಯನ್ನು ತೆರೆಯಬೇಕಾಗುತ್ತದೆ ಎಂದು ವರ್ತಕರ ಒಕ್ಕೂಟವು ಪ್ರತಿಭಟಿಸಿತು. ಈ ಎಲ್ಲ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು ಸರ್ಕಾರವು ನಿರ್ಬಂಧಗಳನ್ನು ಸಡಿಲಗೊಳಿಸುವ ನಿರ್ಧಾರ ಕೈಗೊಂಡಿದೆ. ನಿರ್ಬಂಧಗಳನ್ನು ಸಡಿಲಿಸಲಾಗಿದೆಯಾದರೂ ಕೋವಿಡ್ ಸಂಬಂಧಿ ಶಿಷ್ಟಾಚಾರಗಳು ಮುಂದುವರೆಯಲಿವೆ ಎಂದು ಸರ್ಕಾರವು ತನ್ನ ಹೇಳಿಕೆಯಲ್ಲಿ ನ್ಯಾಯಾಲಯಕ್ಕೆ ತಿಳಿಸಿದೆ.