ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ಹಿಂದೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಇರುವುದನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಂತಿಮ ವರದಿಯು ಉಲ್ಲೇಖಿಸಿದೆ. ಹಿಂಸಾಚಾರದ ಕುರಿತಾದ ತನಿಖೆ ನಡೆಸಲು ಏಳು ಮಂದಿ ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿತ್ತು. ಚುನಾವಣಾ ನಂತರದ ವಿದ್ಯಮಾನಗಳಿಗೆ ತೃಣಮೂಲ ಕಾಂಗ್ರೆಸ್ “ಕಾನೂನಾತ್ಮಕ ಆಡಳಿತ” ಕೈಗೊಳ್ಳದೆ “ಆಡಳಿತಾರೂಢರು ಹೇಳಿದ್ದೇ ಕಾನೂನು” ಎನ್ನುವಂತೆ ನಡೆದುಕೊಂಡಿದ್ದೇ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.
ಸಮಿತಿಯು ತನ್ನ ವರದಿಯಲ್ಲಿ ಚುನಾವಣೋತ್ತರದ ಗಲಭೆಗಳಲ್ಲಿ ಸಂಭವಿಸಿದ ಗಂಭೀರ ಅಪರಾಧಗಳಾದ ಹತ್ಯೆ, ಅತ್ಯಾಚಾರ ಮುಂತಾದ ಪ್ರಕರಣಗಳನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ಒಪ್ಪಿಸಬೇಕು. ಅಲ್ಲದೆ, ಅಂತಹ ಪ್ರಕರಣಗಳನ್ನು ರಾಜ್ಯದ ಹೊರಗೆ ವಿಚಾರಣೆ ನಡೆಸಬೇಕು ಎಂದು ಶಿಫಾರಸು ಮಾಡಿದೆ. ಉಳಿದ ಪ್ರಕರಣಗಳನ್ನು ನ್ಯಾಯಾಲಯದ ಉಸ್ತುವಾರಿಯ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ನಡೆಸಬೇಕು ಎಂದು ಅದು ಹೇಳಿದೆ.
ಅಪರಾಧದ ಆರೋಪ ಹೊತ್ತ ವ್ಯಕ್ತಿಯೊಬ್ಬರು ಆರೋಪವಿಮುಕ್ತರಾದ ನಂತರ ತಮ್ಮ ಹೆಸರನ್ನು ನ್ಯಾಯಾಲಯದ ಆದೇಶಗಳಿಂದ ಮಸುಕಾಗಿಸುವ ಹಕ್ಕು ಗೋಪ್ಯತೆಯ ಹಕ್ಕಿನಡಿ ಆರೋಪ ವಿಮುಕ್ತರಿಗಿದೆ ಎಂದು ಮದ್ರಾಸ್ ಹೈಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.
ವ್ಯಕ್ತಿಯೊಬ್ಬರು ತಮ್ಮ ಮೇಲಿದ್ದ ವಂಚನೆ, ಅತ್ಯಾಚಾರ ಆರೋಪಗಳಿಂದ ವಿಮುಕ್ತರಾದ ಬಳಿಕ ತಮ್ಮ ಹೆಸರನ್ನು ನ್ಯಾಯಾಲಯದ ಆದೇಶದಿಂದ ಮಸುಕಾಗಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎನ್ ಆನಂದ್ ವೆಂಕಟೇಶ್ ಅವರು ಈ ವೇಳೆ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ ನ್ಯಾಯಾಲಯವು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರಕರಣದ ಸಂಬಂಧ ವಿಸ್ತೃತ ತೀರ್ಪು ನೀಡುವುದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಕೀಲರ ಪರಿಷತ್ತಿನ ಸದಸ್ಯರ ಪ್ರತಿಕ್ರಿಯೆಗಳನ್ನು ಈ ಸಂಬಂಧ ಕೇಳಿದೆ. ವಿಸ್ತೃತ ತೀರ್ಪನ್ನು ಬರೆಯುವುದಕ್ಕೂ ಮುನ್ನ ಅಂತಹ ತೀರ್ಪಿನ ವಿವಿಧ ಪರಿಣಾಮಗಳ ಬಗ್ಗೆ ಪರಿಗಣಿಸಲು ನ್ಯಾಯಾಲಯ ಈ ಕ್ರಮಕ್ಕೆ ಮುಂದಾಗಿದೆ.
ಜೈಲಿನಲ್ಲಿರುವ ಬಂಧಿಗಳು ವಿದೇಶಗಳಲ್ಲಿರುವ ತಮ್ಮ ಕುಟುಂಬಸ್ಥರಿಗೆ ವಿಡಿಯೊ ಕರೆ ಮಾಡಲು ಅನುಮತಿ ಏಕಿಲ್ಲ ಎನ್ನುವುದನ್ನು ವಿವರಿಸಲು ಜೈಲು ಅಧಿಕಾರಿಯ ಮುಂದಿನ ವಿಚಾರಣೆಯ ವೇಳೆ ಉಪಸ್ಥಿತರಿರುವಂತೆ ದೆಹಲಿ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ. ಪಿಂಜರಾ ತೋಢ್ ಗುಂಪಿನ ಸದಸ್ಯರಾದ, ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನತಾಶಾ ನರ್ವಾಲ್ ಮತ್ತು ದೇವಾಂಗನಾ ಕಲಿತಾ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
ನ್ಯಾ. ರೇಖಾ ಪಲ್ಲಿ ಅವರ ಪೀಠದ ಮುಂದೆ ಹಾಜರಾದ ಅರ್ಜಿದಾರರ ಪರ ವಕೀಲ ಅದಿತ್ ಎಸ್ ಪೂಜಾರಿ ಅವರು ಮೇಲಿನ ವಿಷಯ ಮಾತ್ರವೇ ಅಲ್ಲದೆ ಕೈದಿಗಳ ಕಲ್ಯಾಣ ಕೋರುವ ಇನ್ನು ಹಲವು ಪ್ರಮುಖ ವಿಷಯಗಳ ಬಗ್ಗೆ ಅರ್ಜಿಯಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು. ಈ ವಿಷಯಗಳಿಗೆ ಶಾಶ್ವತವಾದ ಪರಿಹಾರಗಳು ಅಗತ್ಯವಿದ್ದು ನ್ಯಾಯಾಲಯವು ಈ ವಿಚಾರದಲ್ಲಿ ಏನನ್ನಾದರೂ ಮಾಡುವ ಸಾದ್ಯತೆ ಇದೆ ಎಂದರು.