ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 4-08-2021

>> ʼಲಂಚಾವತಾರʼದ ಹೊಸ ಅವತರಣಿಕೆ ಬಗ್ಗೆ ದೆಹಲಿ ಹೈಕೋರ್ಟ್‌ ವ್ಯಂಗ್ಯ >> ಪೋಕ್ಸೋ ಪ್ರಕರಣ: ಅತ್ಯಾಚಾರದ ಅರ್ಥವ್ಯಾಪ್ತಿಯನ್ನು ತಿಳಿಸಿದ ಕೇರಳ ಹೈಕೋರ್ಟ್‌ >> ಯುವತಿ ಹಾಗೂ ವೃದ್ಧನ ಮದುವೆ ಸಂಬಂಧ ತನಿಖೆಗೆ ಆದೇಶ

Bar & Bench

ಹಣ ಎಲ್ಲಿಯಾದರೂ ಹಾಕುವಂತೆ ಸೂಚಿಸುವ ಲಂಚದ ನವನವೀನ ರೂಪದ ಬಗ್ಗೆ ದೆಹಲಿ ಹೈಕೋರ್ಟ್‌ ವ್ಯಂಗ್ಯ

ಜನ ಲಂಚ ಸ್ವೀಕರಿಸುವ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ ಎಂದು ದೆಹಲಿ ಹೈಕೋರ್ಟ್‌ ಬುಧವಾರ ಹೇಳಿದೆ. ಲಂಚದ ಆರೋಪ ಮಾಡಿರುವ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೆಹಲಿ ಪೊಲೀಸ್‌ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಸುಬ್ರಮಣಿಯಮ್‌ ಪ್ರಸಾದ್‌ ಅವರು, “ಜನ ಮೊದಲು ಹಣ ಪಡೆಯುತ್ತಿದ್ದರು. ಈಗ ಹೆದರಿ ಅವರು ಹೊಸ ವಿಧಾನಗಳನ್ನು ಕಂಡುಕೊಂಡಿದ್ದು ಇಂಥ ಜಾಗದಲ್ಲಿ ಹಣ ಇಡಿ ಇಲ್ಲವೇ ಹಾಕಿ, ಡ್ರಾಯರ್‌ನಲ್ಲಿ ಇಟ್ಟುಬಿಡಿ” ಎಂದು ಹೇಳುತ್ತಾರೆ ಎಂದರು.

Delhi High Court

ನಾನು ಕೊಠಡಿಯಲ್ಲಿ ಇಲ್ಲದ ವೇಳೆ ಕಡತವೊಂದರಲ್ಲಿ ಹಣ ಇರಿಸಲಾಗಿತ್ತು ಎಂದು ಪೊಲೀಸ್‌ ಅಧಿಕಾರಿ ನ್ಯಾಯಾಲಯಕ್ಕೆ ತಿಳಿಸಿದ್ದರು. ವಾದಗಳನ್ನು ಆಲಿಸಿದ ನ್ಯಾಯಾಲಯ ತನ್ನ ಲಿಖಿತ ಹೇಳಿಕೆಗಳನ್ನು ಸಲ್ಲಿಸಲು ವಕೀಲರಿಗೆ ಅನುಮತಿ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್‌ ತಿಂಗಳಿಗೆ ಮುಂದೂಡಿದೆ.

ದೇಹದ ಯಾವುದೇ ಭಾಗಕ್ಕೆ ಶಿಶ್ನ ತೂರಿಕೆ ಅತ್ಯಾಚಾರಕ್ಕೆ ಸಮ: ಕೇರಳ ಹೈಕೋರ್ಟ್‌

ತೊಡೆಗಳ ನಡುವೆ ಶಿಶ್ನವಿರಿಸಿ ಸಂಭೋಗ ನಡೆಸಿದ ಅಪರಾಧ ಎತ್ತಿ ಹಿಡಿದ ಕೇರಳ ಹೈಕೋರ್ಟ್‌ ದೇಹದ ಯಾವುದೇ ಭಾಗಕ್ಕೆ ಶಿಶ್ನ ತೂರಿಸುವುದು ಅತ್ಯಾಚಾರಕ್ಕೆ ಸಮ ಎಂದು ಅಭಿಪ್ರಾಯಪಟ್ಟಿದೆ. ದೇಹದ ಯಾವುದೇ ಭಾಗವನ್ನು ಸಂಭೋಗಿಸುವ ಭಾವನೆ ಅಥವಾ ಸಂವೇದನೆ ಪಡೆಯಲು ಶಿಶ್ನ ತೂರಿಸುವುದು ಐಪಿಸಿ ಸೆಕ್ಷನ್‌ 375 ರ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ಖಂಡಿತವಾಗಿಯೂ ʼಅತ್ಯಾಚಾರʼ ಎಂದು ನ್ಯಾಯಮೂರ್ತಿಗಳಾದ ವಿನೋದ್ ಚಂದ್ರನ್ ಮತ್ತು ಜಿಯಾದ್ ರೆಹಮಾನ್ ಎಎ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

Kerala HC , Girl Child

ಮಗುವಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಕ್ಸೊ ಕಾಯಿದೆಯಡಿ ಬಂಧಿತನಾಗಿರುವ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ ಐಪಿಸಿ ಸೆಕ್ಷನ್‌ 375 (ಸಿ)ಯನ್ನು ಸೆಕ್ಷನ್‌ 376 (1)ರ ಜೊತೆಗಿಟ್ಟು ಓದಿದಾಗ ಅರ್ಜಿದಾರ ಆರೋಪಿ ಶಿಕ್ಷೆಗೆ ಅರ್ಹ ಎಂದು ಹೇಳಿದೆ.

ಹತ್ತೊಂಬತ್ತು ವರ್ಷದ ಯುವತಿಯೊಂದಿಗೆ, 67 ವರ್ಷದ ವೃದ್ಧನ ವಿವಾಹ: ತನಿಖೆಗೆ ಆದೇಶಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ಹತ್ತೊಂಬತ್ತು ವರ್ಷದ ಯುವತಿಯೊಂದಿಗೆ, 67 ವರ್ಷದ ವೃದ್ಧನ ಮದುವೆ ಏರ್ಪಟ್ಟಿರುವ ಸಂಬಂಧ ತನಿಖೆ ನಡೆಸುವಂತೆ ರಾಜ್ಯ ಪೊಲೀಸರಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೂಚಿಸಿದೆ. ಸಂಬಂಧಿಕರು ಕಿರುಕುಳ ನೀಡುತ್ತಿದ್ದಾರೆ ಎಂದು ಜೋಡಿ ನ್ಯಾಯಾಲಯದ ಕದ ತಟ್ಟಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಇಂತಹ ವಿವಾಹ ಆಘಾತಕಾರಿಯಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

Punjab & Haryana High Court

ಮದುವೆಗೆ ಸಂಬಂಧಿಸಿದಂತೆ ಕೆಲವು ಸಂದೇಹಗಳಿದ್ದು ಬಲವಂತವಾಗಿ ವಿವಾಹವಾಗಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು ಎಂದಿರುವ ನ್ಯಾಯಾಲಯ ಮದುವೆ ಮತ್ತು ಮದುಮಗನ ಹಿನ್ನೆಲೆಯ ಕುರಿತು ವಿಚಾರಣೆ ನಡೆಸುವಂತೆ ನಿರ್ದೇಶಿಸಿದೆ. ವಾರದೊಳಗೆ ತನಿಖಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನ್ಯಾಯಮೂರ್ತಿ ಜಸ್ಗುರುಪ್ರೀತ್‌ ಸಿಂಗ್‌ ಪುರಿ ಅವರಿದ್ದ ಪೀಠ ತಿಳಿಸಿದ್ದು ಆಗಸ್ಟ್‌ 10ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.