ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 26-09-2021

>> ದಸರೆ ಬಳಿಕ ನೇರ ಕಲಾಪದ ಆಶಯ ವ್ಯಕ್ತಪಡಿಸಿದ ಸಿಜೆಐ >> ನ್ಯಾಯಾಧೀಶರ ವಿರುದ್ಧ ಆರೋಪಕ್ಕೆ ಸಂಬಂಧಿಸಿದಂತೆ ಎಚ್ಚರಿಕೆ ನೀಡಿದ ಕೇರಳ ಹೈಕೋರ್ಟ್

Bar & Bench

ದಸರೆ ರಜೆ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಭೌತಿಕ ವಿಚಾರಣೆ : ಸಿಜೆಐ ಆಶಾಭಾವ

ದಸರೆಯ ರಜೆ ಬಳಿಕ ಸುಪ್ರೀಂಕೋರ್ಟ್‌ ಪೂರ್ಣಪ್ರಮಾಣದಲ್ಲಿ ಭೌತಿಕ (ನೇರ) ವಿಚಾರಣೆ ಆರಂಭಿಸುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಆಶಿಸಿದರು. ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಸನ್ಮಾನಿಸಲು ಸುಪ್ರೀಂ ಕೋರ್ಟ್‌ನ ಮಹಿಳಾ ವಕೀಲರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಜೆಐ ಮಾತನಾಡುತ್ತಿದ್ದರು. ನ್ಯಾಯಾಧೀಶರು ಭೌತಿಕ ವಿಚಾರಣೆಗೆ ವಿರುದ್ಧವಾಗಿಲ್ಲ ಆದರೆ ಬಹುತೇಕ ವಕೀಲರು ಅದಕ್ಕೆ ಆದ್ಯತೆ ನೀಡುವುದಿಲ್ಲ ಎಂದು ಅವರು ಹೇಳಿದರು.

Supreme Court Lawyer

"ಅನೇಕ ವಕೀಲರು ಭೌತಿಕ ವಿಚಾರಣೆಗೆ ಆದ್ಯತೆ ನೀಡುತ್ತಿಲ್ಲ ಮತ್ತು ಹಿರಿಯ ವಕೀಲರಿಗೆ ಕೆಲವು ಸಮಸ್ಯೆಗಳಿವೆ, ಯುವ ವಕೀಲರು ಬರುತ್ತಿದ್ದಾರೆ. ದಸರಾ ರಜೆಯ ನಂತರ ನಾವುಭೌತಿಕವಿಚಾರಣೆ ನಡೆಸುತ್ತೇವೆ ಎಂಬ ಆಶಾಭಾವ ಇದೆ. ನ್ಯಾಯಾಧೀಶರಿಗೆ ಭೌತಿಕ ನ್ಯಾಯಾಲಯಗಳಲ್ಲಿ ಯಾವುದೇ ಸಮಸ್ಯೆ ಇಲ್ಲ" ಎಂದು ನ್ಯಾ. ರಮಣ ತಿಳಿಸಿದರು. ಸುಪ್ರೀಂಕೋರ್ಟ್‌ನಲ್ಲಿ ಪ್ರಸ್ತುತ ಹೈಬ್ರಿಡ್‌ ಮಾದರಿಯಲ್ಲಿ ವಿಚಾರಣೆ ನಡೆಯುತ್ತಿದ್ದು ಅದರಂತೆ ವಕೀಲರು ನೇರವಾಗಿ ಇಲ್ಲವೇ ವೀಡಿಯೊ ನಡೆಸಬಹುದಾಗಿದೆ. ಬಹುತೇಕ ವಕೀಲರು ವರ್ಚುವಲ್‌ ವಿಧಾನದಲ್ಲಿ ಹಾಜರಾಗಲು ಆದ್ಯತೆ ನೀಡುತ್ತಿದ್ದಾರೆ. ಅಕ್ಟೋಬರ್ 11 ರಿಂದ 16 ರವರೆಗೆ ಸುಪ್ರೀಂಕೋರ್ಟ್‌ಗೆ ದಸರೆ ರಜೆ ಇದೆ.

ನ್ಯಾಯಮೂರ್ತಿಗಳ ವಿರುದ್ಧ ಪಕ್ಷಪಾತದಂತಹ ಆರೋಪ ಮಾಡುವಾಗ ಊಹಾಪೋಹಗಳನ್ನು ಆಧರಿಸಿರಬಾರದು: ಕೇರಳ ಹೈಕೋರ್ಟ್‌

ನ್ಯಾಯಾಂಗದ ಸದಸ್ಯರ ವಿರುದ್ಧ ಆರೋಪ ಮಾಡುವಾಗ ವಿವೇಕ ಬಳಸುವ ಪ್ರಾಮುಖ್ಯತೆಯನ್ನು ಕೇರಳ ಹೈಕೋರ್ಟ್‌ ಇತ್ತೀಚೆಗೆ ಎತ್ತಿ ತೋರಿಸಿದೆ. (ಅಬ್ರಾಹಂ ಥಾಮಸ್‌ ಪುಥೂರನ್‌ ಮತ್ತು ಮಂಜು ಅಬ್ರಾಹಂ ನಡುವಣ ಪ್ರಕರಣ). ನ್ಯಾಯಮೂರ್ತಿಯೊಬ್ಬರ ವಿರುದ್ಧ ಆರೋಪ ಮಾಡುವಾಗ ಅದು ಸಕಾರಣದಿಂದ ಕೂಡಿರಬೇಕು ಮತ್ತು ಸಮರ್ಥನೀಯವಾಗಿರಬೇಕು ಬದಲಿಗೆ ಊಹೆಗಳನ್ನು ಆಧರಿಸಿರಬಾರದು ಎಂದು ಸಿ ಎಸ್‌ ಡಯಾಸ್‌ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿತು.

Justice Conrad Dias and Kerala HC

ಈ ಮೂಲಕ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಪಕ್ಷಪಾತ ಎಸಗಿದ್ದಾರೆ ಎಂದು ಆರೋಪಿಸಿ ಪ್ರಕರಣವನ್ನು ಸಂಬಂಧಪಟ್ಟ ನ್ಯಾಯಾಲಯದಿಂದ ವರ್ಗಾವಣೆ ಮಾಡಬೇಕೆಂದು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳು ಅರ್ಜಿದಾರರಿಗೆ ₹ 15,000 ದಂಡ ವಿಧಿಸಿದರು.