ತೆಲಂಗಾಣದ ಅಧಿಕಾರಿಗಳ ವಿರುದ್ಧ ರಾಜ್ಯ ಹೈಕೋರ್ಟ್‌ನಲ್ಲಿ ಬಾಕಿ ಇರುವ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ನಡೆಸಲು ₹60 ಕೋಟಿ ಹಂಚಿಕೆ ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಅಲ್ಲಿನ ಹೈಕೋರ್ಟ್ ಅಮಾನತು ಮಾಡಿದೆ. ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಬಿ ವಿಜಯಸೇನ್ ರೆಡ್ಡಿ ನೇತೃತ್ವದ ವಿಭಾಗೀಯ ಪೀಠವು ತೆಲಂಗಾಣ ಸರ್ಕಾರ, ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರಗಳಲ್ಲಿ ಪ್ರತಿ ಅಫಿಡವಿಟ್ ಸಲ್ಲಿಸಲು ಆದೇಶಿಸಿದೆ.
ರಾಜ್ಯ ಸರ್ಕಾರದ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ನ್ಯಾಯಾಲಯವು ತೆರಿಗೆದಾರರ ಹಣವನ್ನು ಹೀಗೆ ಬಳಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ. ಸರ್ಕಾರದ ಆದೇಶವು ಕಾನೂನುಬಾಹಿರ, ಸ್ವೇಚ್ಛೆ ಮತ್ತು ಅಸಾಂವಿಧಾನಿಕವಾಗಿದ್ದು, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಹೀಗಾಗಿ, ಸರ್ಕಾರದ ಆದೇಶವನ್ನು ಬದಿಗೆ ಸರಿಸಿ, ನ್ಯಾಯಾಂಗ ನಿಂದನೆ ಪ್ರಕರಣ ನಡೆಸಲು ವಿನಿಯೋಗಿಸಿರುವ ಹಣವನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಪಿಐಎಲ್‌ನಲ್ಲಿ ಕೋರಲಾಗಿದೆ.
ನಿಗದಿತ ಸಮಯಕ್ಕೆ ಬದಲಾಗಿ ತಡವಾಗಿ ರೈಲು ಹೊರಟಿದ್ದಕ್ಕೆ ಪರಿಹಾರ ವಿತರಿಸಲು ಆದೇಶಿಸಿರುವ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗದ (ಎನ್‌ಸಿಡಿಆರ್‌ಸಿ) ತೀರ್ಪು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ. ಸರ್ಕಾರವು ₹ 25,000 ಹಣವನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯ ಖಾತೆಗೆ ಜಮೆ ಮಾಡಬೇಕು. ಇದನ್ನು ಬಡ್ಡಿ ಬರುವ ರಾಷ್ಟ್ರೀಯ ಬ್ಯಾಂಕ್ ಖಾತೆಯಲ್ಲಿ ಇಡಬೇಕು ಎಂಬ ಷರತ್ತು ವಿಧಿಸಿ ಪ್ರತಿವಾದಿಗಳಾದ ರಮೇಶ್ ಚಂದ್ರ ಮತ್ತು ಕಾಂಚನ್ ಚಂದ್ರ ಅವರಿಗೆ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ರವೀಂದ್ರ ಭಟ್ ಅವರಿದ್ದ ವಿಭಾಗೀಯ ಪೀಠವು ನೋಟಿಸ್ ಜಾರಿ ಮಾಡಿದೆ.
“ಇಂದಿನಿಂದ ನಾಲ್ಕು ವಾರಗಳ ಒಳಗೆ ₹ 25,000 ಗಳನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯ ಖಾತೆಗೆ ಜಮೆ ಮಾಡಬೇಕು. ಇದನ್ನು ಬಡ್ಡಿ ಬರುವ ರಾಷ್ಟ್ರೀಯ ಬ್ಯಾಂಕ್ ಖಾತೆಯಲ್ಲಿ ಅಲ್ಪಾವಧಿಗೆ ತಂತಾನೆ ನವೀಕರಣಗೊಳ್ಳುವಂತೆ ಇಡಬೇಕು” ಎಂದು ಪೀಠ ಆದೇಶದಲ್ಲಿ ಹೇಳಿದೆ. ಅದಾಗ್ಯೂ, ನ್ಯಾಯಾಲಯವು ಎನ್‌ಸಿಡಿಆರ್‌ಸಿ ಜಾರಿಗೆ ತಡೆ ನೀಡಲು ನಿರಾಕರಿಸಿದೆ. “ಆದೇಶ ಜಾರಿಗೆ ತಡೆ ನೀಡುವುದಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತಿದ್ದೇವೆ” ಎಂದು ಪೀಠ ಹೇಳಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕ್ರಿಶ್ಚಿಯನ್ ನಾಡರ್ ಸಮುದಾಯವನ್ನು ಸೇರ್ಪಡೆಗೊಳಿಸಿರುವ ಸರ್ಕಾರಿ ಆದೇಶಕ್ಕೆ ಈಚೆಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಜೈಶ್ರೀ ಲಕ್ಷ್ಮಣರಾವ್ ಪಾಟೀಲ್ ವರ್ಸಸ್ ಮುಖ್ಯಮಂತ್ರಿ (ಮರಾಠಾ ಮೀಸಲಾತಿ) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಆಧರಿಸಿರುವ ನ್ಯಾಯಮೂರ್ತಿ ಪಿ ಬಿ ಸುರೇಶ್ ಕುಮಾರ್ ನೇತೃತ್ವದ ಏಕಸದಸ್ಯ ಪೀಠವು ಮಧ್ಯಂತರ ಆದೇಶ ಹೊರಡಿಸಿದೆ.
“ಉಲ್ಲೇಖಿತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಸ್ಪಷ್ಟನೆ ಮತ್ತು ಬಹುಮತದ ತೀರ್ಪಿನ ನಿರ್ದೇಶನವು ನನ್ನ ಪ್ರಕಾರ ಸಂವಿಧಾನದ 102ನೇ ತಿದ್ದುಪಡಿಯ ನಂತರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಗಳಿಗೆ ರಾಜ್ಯಗಳಲ್ಲಿ ಮಾಡಿದ ಸೇರ್ಪಡೆಗಳನ್ನು ಉಳಿಸಲು ಉದ್ದೇಶಿಸಿಲ್ಲ. ರಾಷ್ಟ್ರಪತಿ ಅವರು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಗೆ ಸಮ್ಮತಿ ನೀಡುವವರೆಗೆ ಅದು ಅಸಾಂವಿಧಾನಿಕ. ಹೀಗಾಗಿ, ಅರ್ಜಿದಾರರು ಮೇಲ್ನೋಟಕ್ಕೆ ಮಧ್ಯಂತರ ಆದೇಶದ ಪ್ರಕರಣವನ್ನಾಗಿಸಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.