ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |09-07-2021

>> ಏಕರೂಪ ನಾಗರಿಕ ಸಂಹಿತೆ ಆಶಯವಾಗಿಯೇ ಉಳಿಯಬಾರದು: ದೆಹಲಿ ಹೈಕೋರ್ಟ್‌ >> ವಿಮಾನ ನಿಲ್ದಾಣಗಳ ನಾಮಕರಣಕ್ಕೆ ನೀತಿ ರೂಪಿಸಿ: ಬಾಂಬೆ ಹೈಕೋರ್ಟ್‌ >> [ಎಲ್‌ಜೆಪಿ ವಿವಾದ] ಚಿರಾಗ್‌ ಪಾಸ್ವಾನ್‌ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್‌

Bar & Bench

ಏಕರೂಪ ನಾಗರಿಕ ಸಂಹಿತೆಯ ಆಶಯ ಆಶಯವಾಗಿಯೇ ಉಳಿಯಬಾರದು: ದೆಹಲಿ ಹೈಕೋರ್ಟ್‌

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಹೊಂದುವ ಅಗತ್ಯವು ಹೆಚ್ಚುತ್ತಿದೆ ಎಂದು ಇತ್ತೀಚೆಗೆ ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಭಾರತೀಯ ಸಮಾಜದಲ್ಲಿ ವೇಗವಾಗಿ ಪರಿವರ್ತನೆಗಳು ಸಂಭವಿಸುತ್ತಿದ್ದು, ಧರ್ಮ, ಸಮುದಾಯ ಮತ್ತು ಜಾತಿಗಳ ನಡುವಿನ ಸಾಂಪ್ರದಾಯಿಕ ಕಂದರಗಳು ಕ್ರಮೇಣ ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ಈ ಅಗತ್ಯ ಮೂಡಿದೆ ಎಂದು ನ್ಯಾಯಾಲಯ ಹೇಳಿದೆ (ಸತ್‌ಪ್ರಕಾಶ್ ಮೀನಾ ವರ್ಸಸ್ ಅಲ್ಕಾ ಮೀನಾ).

Uniform Civil Code

ಭಾರತೀಯ ಸಮಾಜವು ಹೆಚ್ಚೆಚ್ಚು ಸಾಮರಸ್ಯಗೊಳ್ಳುತ್ತಿದ್ದು, ವಿವಿಧ ಸಮುದಾಯ, ಬುಡಕಟ್ಟು, ಜಾತಿ, ಧರ್ಮಗಳಿಗೆ ಸೇರಿದ ಯುವಜನತೆಯು ವಿವಿಧ ವೈಯಕ್ತಿಕ ಕಾನೂನುಗಳಿಂದಾಗಿ ಉದ್ಭವಿಸುವ ಸಮಸ್ಯೆಗಳಿಗೆ ಬಲವಂತವಾಗಿ ಈಡಾಗುವಂತಾಗಬಾರದು. ವಿಶೇಷವಾಗಿ ಮದುವೆ ಮತ್ತು ವಿಚ್ಛೇದನಗಳ ಹಿನ್ನೆಲೆಯಲ್ಲಿ ಇದನ್ನು ಗಮನಿಸಬೇಕಿದೆ ಎಂದು ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾ.ಪ್ರತಿಭಾ ಎಂ ಸಿಂಗ್ ಅವರ ಏಕಸದಸ್ಯ ಪೀಠವು ಅಭಿಪ್ರಾಯಪಟ್ಟಿತು.

ವಿಮಾನ ನಿಲ್ದಾಣಗಳಿಗೆ ನಾಮಕರಣ/ಮರುನಾಮಕರಣ ಮಾಡಲು ನೀತಿಯೊಂದನ್ನು ರೂಪಿಸಿ: ಬಾಂಬೆ ಹೈಕೋರ್ಟ್‌

ದೇಶದಲ್ಲಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕಿರು ವಿಮಾನ ನಿಲ್ದಾಣಗಳಿಗೆ ನಾಮಕರಣ/ ಮರುನಾಮಕರಣ ಮಾಡುವ ವಿಚಾರದಲ್ಲಿ ನೀತಿಯೊಂದನ್ನು ರೂಪಿಸಲು ಪರಿಗಣಿಸುವಂತೆ ಬಾಂಬೆ ಹೈಕೋರ್ಟ್‌ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಆ ಮೂಲಕ ವಿಮಾನ ನಿಲ್ದಾಣ ನಾಮಕರಣಗಳ ವೇಳೆ ಉದ್ಭವಿಸುವ ರಾಜಕೀಯ, ಸಾಮಾಜಿಕ ಗೊಂದಲ, ವಿವಾದಗಳನ್ನು ತಪ್ಪಿಸಬಹುದು ಎಂದು ಅದು ಅಭಿಪ್ರಾಯಪಟ್ಟಿದೆ.

Jyotiraditya Scindia, Airport

ಮುಂಬೈ ಮೂಲದ ವಕೀಲ ಫಿಲ್ಜಿ ಫ್ರೆಡೆರಿಕ್‌ ಎನ್ನುವರು ವಿಮಾನ ನಿಲ್ದಾಣಗಳ ನಾಮಕರಣ ಮತ್ತು ಮರುನಾಮಕರಣ ವಿಚಾರವಾಗಿ ನಾಗರಿಕ ವಿಮಾನಯಾನಾ ಸಚಿವಾಲಯಕ್ಕೆ ನೀತಿಯೊಂದನ್ನು ರೂಪಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾ. ಜಿ ಎಸ್‌ ಕುಲಕರ್ಣಿ ಅವರಿದ್ದ ಪೀಠವು ನಡೆಸಿತು. “ಒಂದೊಮ್ಮೆ ಈ ಸಂಬಂಧ ಈವರೆಗೆ ಯಾವುದೇ ನೀತಿ, ಕರಡು ಇಲ್ಲವಾದರೆ, ನೂತನ ಸಚಿವಾಲಯದ ಮೊದಲ ಕೆಲಸ ಈ ಕುರಿತ ನೀತಿಯನ್ನು ರೂಪಿಸುವುದಾಗಲಿ” ಎಂದು ಪೀಠ ಹೇಳಿತು.

[ಎಲ್‌ಜೆಪಿ ವಿವಾದ] ಚಿರಾಗ್‌ ಪಾಸ್ವಾನ್‌ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್‌

ಲೋಕಸಭೆಯಲ್ಲಿ ತಮ್ಮ ಚಿಕ್ಕಪ್ಪ ಪಶುಪತಿ ಕುಮಾರ್‌ ಪಾರಸ್‌ ಅವರನ್ನು ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ನಾಯಕ ಎಂದು ತೀರ್ಮಾನಿಸಿದ್ದ ಲೋಕಸಭಾ ಸ್ಪೀಕರ್‌ ಅವರ ನಿರ್ಧಾರವನ್ನು ಪ್ರಶ್ನಿಸಿ ಚಿರಾಗ್‌ ಪಾಸ್ವಾನ್‌ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ. ಮಾಜಿ ಕೇಂದ್ರ ಸಚಿವ ದಿವಂಗತ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಪುತ್ರ ಚಿರಾಗ್‌ ಪಾಸ್ವಾನ್‌ ಅವರು ಕೇಂದ್ರ ಸಚಿವ ಸಂಪುಟ ಪುನಾರಚನೆ ವೇಳೆ ತಮ್ಮ ಚಿಕ್ಕಪ್ಪ ಪಶುಪತಿ ಕುಮಾರ್‌ ಅವರನ್ನು ಎಲ್‌ಜೆಪಿ ನಾಯಕರೆಂದು ಪರಿಗಣಿಸಿ ಸಂಪುಟದಲ್ಲಿ ಸ್ಥಾನ ನೀಡಿದ್ದ ಬಗ್ಗೆ ತಕರಾರು ಎತ್ತಿದ್ದರು.

Chirag paswan and Delhi High Court

ಶಾಸನಸಭೆಯೊಳಗಿನ ಅಂತರಿಕ ವಿವಾದಗಳನ್ನು ನಿಯಂತ್ರಿಸುವುದು ಸ್ಪೀಕರ್‌ ಅವರ ಹಕ್ಕು ಎನ್ನುವುದು ಇದಾಗಲೇ ವಿಧಿತವಾಗಿರುವ ವಿಷಯ. ಹಾಗಾಗಿ, ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ಪೀಠವು ಅರ್ಜಿ ವಜಾ ವೇಳೆ ಹೇಳಿತು. ಅರು ಜನ ಸಂಸದರನ್ನು ಹೊಂದಿರುವ ಎಲ್‌ಜೆಪಿಯಲ್ಲಿ ಪಾಸ್ವಾನ್‌ ಅವರ ಮರಣಾನಂತರ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಅವರ ಮಗ ಚಿರಾಗ್ ಮತ್ತು ಸಹೋದರ ಪಶುಪತಿ ಅವರ ನಡುವೆ ಪೈಪೋಟಿ ನಡೆದಿರುವುದನ್ನು ಇಲ್ಲಿ ಗಮನಿಸಬಹುದು.